ದರ್ಶನ್ ಪುಟ್ಟಣ್ಣಯ್ಯ
ಯಾರೇ ಅಗಲಿ, ಮಗನೊ, ಮಗಳೊ ಅಪ್ಪನ ಆರೈಕೆ, ಹಾರೈಕೆ, ಬೆಂಬಲ, ಬಲ ಎಲ್ಲವೂ ಇದ್ದೇ ಬೆಳೆದಿರುತ್ತಾರೆ. ಹಾಗಾಗಿ ಅಪ್ಪ, ಮಕ್ಕಳ ನೆರಳಾಗಿ ಸದಾ ಅಂಟಿಕೊಂಡೇ ಇರುತ್ತಾರೆ. ನನ್ನ ವಿಚಾರದಲ್ಲಿ ಭಿನ್ನವೇನೂ ಅಲ್ಲ ಎನ್ನಬಹುದು. ಆದರೆ ಎಲ್ಲರಂತೆ ನನ್ನದು ಸಹಜವಾದ ಬದುಕೇ ಆಗಿದ್ದರೆ ಬೇರೆ ಮಾತಾಗುತ್ತಿತ್ತು. ಬದುಕಿದ ಅಷ್ಟೂ ದಿನ ಜನರ ಹಿತಕ್ಕೆ, ರೈತರ ಕಷ್ಟ-ಸುಖಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡ ನನ್ನ ಅಪ್ಪ, ನನ್ನನ್ನು ಸಾರ್ವಜನಿಕ ಬದುಕಿಗೆ ಪರಿಚಯಿಸಿ ತಮ್ಮ ಕರ್ತವ್ಯವನ್ನು ನನ್ನ ಹೆಗಲಿಗೆ ದಾಟಿಸಿ ಹೋದರು. ನನ್ನನ್ನು ಇಂತಹ ಜವಾಬ್ದಾರಿ ಹೊರುವುದಕ್ಕೆ ಯೋಗ್ಯ ಎಂದುಕೊಂಡಿದ್ದಕ್ಕೂ ಹಾಗೂ ಮತ್ತೆ ನಾನು ಇದಕ್ಕೆ ಅರ್ಹ ಎಂದು ಅವರು ನನ್ನ ಮೇಲೆ ಇಂತಹ ನಂಬಿಕೆ ಇರಿಸಿದ್ದರು ಎಂಬುದಕ್ಕೂ ನಾನು ಖುಷಿಪಡುತ್ತೇನೆ.
ಅಪ್ಪನ ಅನುಪಸ್ಥಿತಿಯಲ್ಲಿ ನಾನು ಸಾರ್ವಜನಿಕ ಬದುಕಿಗೆ ಕಾಲಿಟ್ಟೆ ಎಂದು ಮೇಲ್ನೋಟಕ್ಕೆ ಅನ್ನಿಸಿ ದರೂ, ನಾನು ಅಪ್ಪನ ಸಾರ್ವಜನಿಕ ಬದುಕನ್ನು, ಅವರ ಹೋರಾಟ, ಕಾಳಜಿ, ಪ್ರೀತಿಗಳನ್ನು ನೋಡುತ್ತಾ, ಅದರ ಭಾಗವಾಗುತ್ತಲೇ ಬೆಳೆದವನು. ಈಗ ನಾನು ಇಡುತ್ತಿರುವ ಪ್ರತಿ ಹೆಜ್ಜೆಯನ್ನು ನೋಡಿ, ತಿದ್ದಲು, ಖುಷಿ ಪಡಲು ಅವರು ಇರಬೇಕಿತ್ತು ಎಂದು ಆಗಾಗ ಅನ್ನಿಸುತ್ತದೆ. ಅಪ್ಪ , ಹೋರಾಟ, ಸಭೆ, ಕಾರ್ಯಕ್ರಮಗಳ ನೆಪದಲ್ಲಿ ಊರೂರು ಸುತ್ತುತ್ತಿದ್ದರು, ನಮಗೂ ಸಮಯ ಕೊಡದೇ ಇರುತ್ತಿರಲಿಲ್ಲ. ಹಾಗಾಗಿ ನನ್ನಲ್ಲಿನ ಅಪ್ಪನ ನೆನಪುಗಳು ಅಗಾಧ ಹಾಗೂ ಅಷ್ಟೇ ಗಾಢ.
ನನ್ನ ಬಾಲ್ಯವನ್ನು ಒಂದೇ ಶಬ್ದದಲ್ಲಿ ವಿವರಿಸಬೇಕೆಂದರೆ, ಆ ಶಬ್ದ ‘ಖುಷಿ’. ಮನೆಯೆಂದರೆ ಸಮಸ್ಯೆಗಳಿಲ್ಲದೇ ಇರುವುದಿಲ್ಲ. ಆದರೆ, ಎಂತಹ ಕಷ್ಟಗಳಿದ್ದರೂ ನನ್ನ ತಂದೆ-ತಾಯಿ ನನಗೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿ, ಸಂತೋಷವಾಗಿ ಬೆಳೆಸಿದರು. ನನಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಂಡರು. ನನ್ನ ತಂದೆ ಕ್ರೀಡೆಗೆ ಅತ್ಯಂತ ಪ್ರಾಮುಖ್ಯತೆ ಕೊಡುತ್ತಿದ್ದರು.
ನಾನು ಏನು ಓದಿದ್ದೇನೆ, ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂಬುದು ಅವರಿಗೆ ಕೊನೆಯವರೆಗೂ ಗೊತ್ತಿರಲಿಲ್ಲ. ‘ಕ್ರೀಡೆಗೆ ಅರ್ಜಿ ಹಾಕಿದೆಯಾ? ವ್ಯಾಯಾಮ ಮಾಡಿದೆಯಾ?’ ಎಂದು ಕೇಳುವುದೇ ಅವರ ಆದ್ಯತೆಯಾಗಿತ್ತು. ಕ್ರೀಡೆಗೆ ಅವರು ಅತೀವ ಒತ್ತು ಕೊಡುತ್ತಿದ್ದರು. ದೇಹ ಚೆನ್ನಾಗಿರಬೇಕು ಎಂಬುದು ಅವರ ಫಿಲಾಸಫಿ. ದೃಢವಾದ ದೇಹ ನಮ್ಮ ಮಾನಸಿಕ ಶಕ್ತಿಯನ್ನೂ ದೃಢಗೊಳಿಸುತ್ತದೆ ಅನ್ನೋದು ಅವರ ನಂಬಿಕೆಯಾಗಿತ್ತು. ವಿವೇಕಾನಂದರು ಹೇಳಿದ್ದಾರಲ್ಲ ಹಾಗೆ.
ಅಪ್ಪನ ಈ ಪ್ರೋತ್ಸಾಹದಿಂದ ನಾನು ಬ್ಯಾಡ್ಮಿಂಟನ್ನಲ್ಲಿ ತೊಡಗಿಸಿಕೊಂಡೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಡಿದೆ. ‘ರಾಕೆಟ್ ಹಿಡಿದು ಆಡು, ಅದರಿಂದ ಜಗತ್ತನ್ನೇ ತಿರುಗಿನೋಡುವ ಅನುಭವ ಸಿಗುತ್ತದೆ’ ಎಂದು ತಂದೆಯವರು ಆಗಲೇ ಹೇಳುತ್ತಿದ್ದರು. ಇಂದು ನಾವು ‘ವೈವಿಧ್ಯಮಯ ಚಿಂತನೆ’ ಎಂದು ಕರೆಯುವ ಆಲೋಚನೆಯನ್ನು ಅವರು ಆಗಲೇ ವಿವರಿಸಿದ್ದರು. ವಿಭಿನ್ನ ಅನುಭವಗಳಿಂದ ನಮ್ಮ ಜ್ಞಾನ ಮತ್ತು ಆಲೋಚನೆಗಳು ವಿಸ್ತಾರಗೊಳ್ಳುತ್ತವೆ ಎಂದು ತಿಳಿಸಿದ್ದರು. ಈ ಜ್ಞಾನ ಅವರಿಗೆ ಎಲ್ಲಿಂದ ಬಂದಿತೊ ಗೊತ್ತಿಲ್ಲ.
ಅವರಿಗೆ ನಾನು ಜನಸೇವೆ ಮಾಡಬೇಕೆಂಬ ಆಸೆಯಿತ್ತು. ಜನರಿಗೆ ಸಹಾಯ ಮಾಡಬೇಕು ಎಂದು ಬಯಸುತ್ತಿದ್ದರು. ಆದರೆ, ರಾಜಕೀಯಕ್ಕೆ ಬರಬೇಕೆಂಬ ಯಾವುದೇ ಆಕಾಂಕ್ಷೆ ಅವರಿಗಿರಲಿಲ್ಲ. ಅವರು ಎಂದಿಗೂ ಇದನ್ನು ಮಾಡು, ಅದನ್ನು ಮಾಡು ಎಂದು ಒತ್ತಾಯಿಸಲಿಲ್ಲ. ನಿಮಗೆ ಇಷ್ಟವಾದುದನ್ನು ಮಾಡಿ, ನೀವು ಸಂತೋಷವಾಗಿರುವುದೇ ನಮಗೆ ಮುಖ್ಯ ಎಂದು ಯಾವಾಗಲೂ ಹೇಳುತ್ತಿದ್ದರು.
ನಾನು ಚಿಕ್ಕಮ್ಮ-ಚಿಕ್ಕಪ್ಪನ ಜೊತೆ ಮೈಸೂರಿನಲ್ಲಿ ಬೆಳೆದೆ. ಆಗಾಗ ಊರಿಗೆ ಹೋಗಿ ಬರುತ್ತಿದ್ದೆ. ನನ್ನ ತಂದೆ-ತಾಯಿಯೂ ಮೈಸೂರಿಗೆ ಬರುತ್ತಿದ್ದರು. ಕ್ರೀಡೆ, ಶಿಕ್ಷಣ ಹೀಗೆ ಎಲ್ಲವೂ ಒಟ್ಟಿಗೆ ಸಾಗಿತ್ತು. ವಾರಾಂತ್ಯದಲ್ಲಿ ತಂದೆ-ತಾಯಿ ಮೈಸೂರಿಗೆ ಬಂದಾಗ, ನಾವೆಲ್ಲರೂ ಸಿನಿಮಾ ನೋಡಲು ಮ್ಯಾಟಿನಿ ಶೋಗೆ ಹೋಗುತ್ತಿದ್ದೆವು. ಚಿತ್ರ ಮಂದಿರದಿಂದ ವಾಪಸ್ ಬರುವಾಗ ಮಸಾಲೆ ದೋಸೆ ತಿಂದು, ಎಲ್ಲರನ್ನೂ ಮನೆಗೆ ಬಿಟ್ಟು, ತಂದೆಯವರು ನನ್ನನ್ನು ಮೋಟಾರ್ ಸೈಕಲ್‌ನಲ್ಲಿ ಇಂಗ್ಲಿಷ್ ಚಿತ್ರದ ಎರಡನೇ ಪ್ರದರ್ಶನಕ್ಕೆ ಕರೆದೊಯ್ಯುತ್ತಿದ್ದರು. ಇದರಿಂದ ಚಿಕ್ಕ ವಯಸ್ಸಿನಲ್ಲೇ ವಿಭಿನ್ನ ಅನುಭವಗಳಿಗೆ ತೆರೆದುಕೊಳ್ಳಲು ನನಗೆ ಅವಕಾಶ ಸಿಕ್ಕಿತು. ತಂದೆಯವರಲ್ಲಿ ಆಗಲೇ ಪ್ರಗತಿ ಶೀಲ ಚಿಂತನೆಗಳಿದ್ದವು. ಇವೆಲ್ಲವನ್ನೂ ಈಗ ನೆನಪಿಸಿ ಕೊಂಡರೆ, ಇಂತಹ ಆಲೋಚನೆಗಳು ಅವರಿಗೆ ಹೇಗೆ ಬಂದವು ಎಂದು ಅಚ್ಚರಿಯಾಗುತ್ತದೆ.
ತಂದೆಯವರು ಹಳ್ಳಿಯಲ್ಲಿ ಬೆಳೆದವರು. ಅಸ್ಪೃಶ್ಯತೆ, ಅಸಮಾನತೆಯನ್ನು ಹತ್ತಿರದಿಂದ ಕಂಡಿದ್ದವರು. ರೈತರ ಬಗ್ಗೆ, ಬಡವರ ಬಗ್ಗೆ ಅವರಿಗೆ ಅಪಾರ ಕಾಳಜಿಯಿತ್ತು. ಊಟಕ್ಕೆ ಕೂರಿಸುವಾಗ ಯಾವುದೇ ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಇದನ್ನೆಲ್ಲಾ ನಮ್ಮ ತಾತ-ತಂದೆಯವರು ಒಟ್ಟಿಗೆ ನಡೆಸಿಕೊಂಡು ಬಂದಿದ್ದರು. ನನ್ನ ತಂದೆಯವರ ಹೋರಾಟಗಳು ಚಿಕ್ಕ ವಯಸ್ಸಿನಲ್ಲೇ ನನ್ನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದವು. ಒಂದು ಸಮಸ್ಯೆಯನ್ನು ಕಂಡರೆ, ಅದಕ್ಕೆ ಪರಿಹಾರ ದೊರೆಯುವವರೆಗೂ ಬಿಡದೆ ಹೋರಾಡುತ್ತಿದ್ದರು. ಜೈಲಿಗೆ ಹೋದ ಘಟನೆಗಳು, ಲಾಠಿ ಚಾರ್ಜ್‌ಗೆ ಒಳಗಾಗಿ ಮನೆಗೆ ಬಂದು ಕಾಲಿನ ಗಾಯಗಳನ್ನು ತೋರಿಸಿದ್ದು ಇವೆಲ್ಲವೂ ಇನ್ನೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿವೆ. ತಮ್ಮ ಹೋರಾಟದ ಅನುಭವಗಳನ್ನು ಅವರು ಆಗಾಗ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.
ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ತಂದೆಯವರು ಎಂದಿಗೂ ಯೋಚಿಸಿರಲಿಲ್ಲ. ಈ ಬಗ್ಗೆ ಮನೆಯಲ್ಲಿ ಚರ್ಚೆಯೂ ಆಗಿರಲಿಲ್ಲ. ತಂದೆಯವರು ಇಹಲೋಕ ತೊರೆಯುವ ಮುನ್ನ ನನ್ನ ರಾಜಕೀಯ ಪ್ರವೇಶದ ಬಗ್ಗೆ ಒಂದು ಮಾತೂ ಆಡಿರಲಿಲ್ಲ. ಬಡತನ ನಿವಾರಣೆಗಾಗಿ ಅವರು ಮಾಡಿದ ಹೋರಾಟ, ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದ ರೀತಿಯನ್ನು ನಾನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೇನೆ. ಅವರು ತೋರಿಸಿಕೊಟ್ಟ ಹಾದಿಯಲ್ಲಿಯೇ ನಾನು ನಡೆಯುತ್ತಿದ್ದೇನೆ ಅಷ್ಟೇ. ಇದಕ್ಕೆ ಹೊರತಾಗಿ ಯಾವುದೇ ವಿಶೇಷವೂ ಇಲ್ಲ. ನಾನು ಶಾಸಕನಾಗಿ ಆಯ್ಕೆಯಾಗಿ ವಿಧಾನ ಸೌಧಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ, ರಾಜಕೀಯ ಕ್ಷೇತ್ರದ ಹಿರಿಯರು, ‘ನಿಮ್ಮ ತಂದೆ ಇಂತಹ ಕೆಲಸ ಮಾಡುತ್ತಿದ್ದರು, ನೀವು ಇದನ್ನು ಮಾಡಬೇಕು’ ಎಂದು ಸಲಹೆ ನೀಡಿದರು. ‘ನಿಮ್ಮ ತಂದೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದರು, ಅವರು ಎದ್ದು ನಿಂತು ಭಾಷಣ ಮಾಡುತ್ತಿದ್ದಾಗ, ನಾವೆಲ್ಲರೂ ನಮ್ಮ ಸಮಯವನ್ನು ಅವರಿಗೆ ನೀಡುತ್ತಿದ್ದೆವು’ ಎಂದು ಹೇಳಿದರು. ಈ ಮಾತುಗಳು ನನ್ನೊಳಗೆ ಅಭಿಮಾನವನ್ನೂ, ಜವಾಬ್ದಾರಿಯ ಎಚ್ಚರಿಕೆಯನ್ನೂ ಮೂಡಿಸಿದವು.
ಉನ್ನತ ವ್ಯಾಸಂಗ ಮಾಡಿ, ವಿದೇಶದಲ್ಲಿ ನನ್ನದೇ ಉದ್ಯೋಗ, ಉದ್ಯಮದಲ್ಲಿ ತೊಡಗಿಕೊಂಡರೂ ಅಪ್ಪ ನನ್ನೊಳಗೆ ಬಿತ್ತಿದ್ದ ಈ ನೆಲದ ಮೇಲಿನ ಪ್ರೀತಿ, ಜನರ ಮೇಲಿನ ಅಭಿಮಾನ ಮೊಳಕೆಯೊಡೆ ಯುವುದಕ್ಕೆ ಸಮಯಬೇಕಿತ್ತೇನೊ. ಅದು ತಡ ವಾಗಿ ಮೊಳೆಯಿತು. ಸ್ವಾತಂತ್ರ್ಯವನ್ನೂ, ವಿವೇಚನೆಯನ್ನೂ ಕೊಟ್ಟ ಅಪ್ಪ, ಜನರೊಂದಿಗೆ ಬದುಕುವುದನ್ನೂ ಹೇಳಿಕೊಟ್ಟರು. ನಿಜ ಹೇಳಬೇಕೆಂದರೆ ನನ್ನಪ್ಪ ಏನನ್ನೂ ಹೇಳದೆಯೇ ಎಲ್ಲವನ್ನೂ ಹೇಳಿಕೊಟ್ಟರು. ಯಾಕೆಂದರೆ ಅವರು ನಮ್ಮ ಮುಂದೆ ಹಾಗೆ ಬದುಕಿದ್ದರು.