Mysore
26
few clouds

Social Media

ಮಂಗಳವಾರ, 19 ಮೇ 2026
Light
Dark

ಮತ್ತೆ ಗ್ರಾಹಕರಿಗೆ ಶಾಕ್ ; ಪೆಟ್ರೋಲ್, ಡೀಸೆಲ್ ದರ 95 ಪೈಸೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಮೇಲಿನ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಮಂಗಳವಾರ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆಯಷ್ಟು ಏರಿಸಿವೆ.

ಹೊಸ ದರ ಏರಿಕೆ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 98 ಪೈಸೆ ಏರಿಕೆಯಾಗಿದೆ. ಹೊಸ ದರದ ಅನ್ವಯ ಪೆಟ್ರೋಲ್ ಲೀಟರ್‌ಗೆ 107.12 ರೂಪಾಯಿ ತಲುಪಿದರೆ, ಡೀಸೆಲ್ ಬೆಲೆ 95.04 ರೂ.ಗಳಿಗೆ ಏರಿಕೆಯಾಗಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 97.77ರೂಪಾಯಿಯಿಂದ 98.64 ರೂಪಾಯಿಗೆ ಹೆಚ್ಚಿಸಲಾಗಿದ್ದು, ಡೀಸೆಲ್ ದರವು 90.67 ರೂಪಾಯಿಯಿಂದ 91.58 ರೂಪಾಯಿಗೆ ಏರಿಕೆಯಾಗಿದೆ. ಇದಕ್ಕೂ ಮೊದಲು ಮೇ 15ರಂದು ಲೀಟರ್‌ಗೆ 3 ರೂಪಾಯಿ ದರ ಏರಿಕೆ ಮಾಡಲಾಗಿತ್ತು.

ಒಂದೇ ವಾರದಲ್ಲಿ ಎರಡನೇ ಬಾರಿ ಏರಿಕೆ
ಇದು ಒಂದೇ ವಾರದಲ್ಲಿ ಎರಡನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದೆ. ಕಳೆದ ಶುಕ್ರವಾರ ತೈಲ ಬೆಲೆಯಲ್ಲಿ 3 ರೂ. ಹೆಚ್ಚಾಗಿತ್ತು. ಇಂದು ಮತ್ತೆ 90 ಪೈಸೆಯಷ್ಟು ಏರಿಸಲಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬಿಕ್ಕಟ್ಟು ಉಂಟಾಗಿದೆ. ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸುವಂತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದರು. ಹಾಗೆಯೇ ಅನಗತ್ಯ ಚಿನ್ನಾಭರಣ ಖರೀದಿಸದಂತೆ ಪ್ರಧಾನಿ ಸಲಹೆ ನೀಡಿದ್ದರು.

ದೇಶದ ಆರ್ಥಿಕತೆ ಕಾಪಾಡಲು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಬೇಕಾಗುತ್ತದೆ ಎಂದು ಇತ್ತೀಚೆಗಷ್ಟೇ ಆರ್‌ಬಿಐ ಗವರ್ನರ್ ಸಹ ಹೇಳಿದ್ದರು. ಈ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಆಗಿದೆ.

ಕೇಂದ್ರದ ಸಮರ್ಥನೆ
ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ಭಾರತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳವನ್ನು ಈವರೆಗೂ ಏರಿಸದೆ ನಿಯಂತ್ರಿಸಿತ್ತು. ಈಗಾಗಲೇ ವಿಶ್ವದ ಹಲವು ದೇಶಗಳಲ್ಲಿ ಇಂಧನ ಬೆಲೆ ಶೇಕಡಾ 20 ರಿಂದ ಶೇಕಡಾ 100 ರಷ್ಟು ಏರಿಕೆ ಮಾಡಲಾಗಿದೆ. ಆದರೆ, ಭಾರತದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ ಶೇಕಡಾ 3.2 ಮತ್ತು ಶೇಕಡಾ 3.4 ರಷ್ಟು ಮಾತ್ರ ಏರಿಕೆಯಾಗಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 900 ರೂ. ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ, ಚಿನ್ನದ ಆಮದು ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಶುಕ್ರವಾರವಷ್ಟೇ ಪೆಟ್ರೋಲ್, ಡೀಸೆಲ್ ದರವನ್ನು 3 ರೂ. ಹೆಚ್ಚಳ ಮಾಡಿತ್ತು. ಸಿಎನ್‌ಜಿ ದರವನ್ನು ಕೆ.ಜಿ.ಗೆ 2 ರೂ. ಏರಿಸಿತ್ತು. ಶನಿವಾರ 1ರೂ. ಹೆಚ್ಚಳ ಮಾಡಿದೆ. ಹೀಗಾಗಿ ಮೂರು ದಿನಗಳಲ್ಲೇ 3ರೂ. ಹೆಚ್ಚಳವಾದಂತಾಗಿದೆ. ಇದೀಗ ಡೀಸೆಲ್ ಪೆಟ್ರೋಲ್ ದರವನ್ನು 9- ಪೈಸೆ ಹೆಚ್ಚಳ ಮಾಡಿದೆ.

Tags:
error: Content is protected !!