ನವದೆಹಲಿ: ‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಹೀಗೊಂದು ಪ್ರಶ್ನೆ ಎತ್ತಿದ್ದಾರೆ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್. ತಮ್ಮ ಬಂಧನ ಮತ್ತು ಭದ್ರತೆಗೆ ಸರ್ಕಾರ ಸುಮಾರು ಎರಡು ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಅವರು ‘ಎಕ್ಸ್’ನಲ್ಲಿ ಆರೋಪಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ತಮ್ಮನ್ನು ಆರು ತಿಂಗಳು ಜೋಧ್‌ಪುರ ಜೈಲಿನಲ್ಲಿ ಇರಿಸಲು ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚವಾಗಿದೆ. ಎರಡು ತಿಂಗಳ ಗೃಹಬಂಧನದ ಭದ್ರತೆಗೂ ಸುಮಾರು ಒಂದು ಕೋಟಿ ರೂಪಾಯಿ ಖರ್ಚಾಗಿದೆ. ಅದಕ್ಕಾಗಿ 24 ಭದ್ರತಾ ಸಿಬ್ಬಂದಿ ಮತ್ತು 12 ವಾಹನಗಳನ್ನು ಬಳಸಲಾಗಿದೆ ಎಂದು ವಾಂಗ್‌ಚುಕ್ ಹೇಳಿದ್ದಾರೆ.
ತೆರಿಗೆ ವಿನಾಯಿತಿಗೆ ಅರ್ಹನಾಗಿದ್ದರೂ ದೇಶಕ್ಕೆ ಕೊಡುಗೆ ನೀಡಲು ತೆರಿಗೆ ಕಟ್ಟುತ್ತಿದ್ದೆ ಎಂದಿರುವ ಅವರು, ಸಾರ್ವಜನಿಕರ ಹಣವನ್ನು ಲಡಾಖ್‌ನ ಶಾಲೆ, ಆಸ್ಪತ್ರೆಗಳ ಸುಧಾರಣೆಗೂ, ಗಡಿಯಲ್ಲಿರುವ ಸೈನಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದಕ್ಕೂ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.
ಲಡಾಖ್‌ನ ಕುರಿಗಾಹಿಗಳು ತಮ್ಮ ಸಾಂಪ್ರದಾಯಿಕ ಹುಲ್ಲುಗಾವಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದ ವಾಂಗ್‌ಚುಕ್, ಮುಂದಿನ ಚುನಾವಣೆಯಲ್ಲಿ ಬದಲಾವಣೆ ತರಲು ಜನರು ಒಂದಾಗುವಂತೆ ಕರೆ ನೀಡಿದ್ದಾರೆ.




