ಕನ್ನಡದ ಅತ್ಯಂತ ಜನಪ್ರಿಯ ನಟ-ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ ಜೋಡಿ ಎಂದರೆ ಅದು ರವಿಚಂದ್ರನ್ ಮತ್ತು ಹಂಸಲೇಖ ಅವರದ್ದು. ಈ ಜೋಡಿ ಒಂದೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಹಲವು ಒಳ್ಳೆಯ ಹಾಡುಗಳನ್ನು ಮತ್ತು ಯಶಸ್ವಿ ಚಿತ್ರಗಳನ್ನು ಕೊಟ್ಟರು. ಆ ನಂತರ ಇಬ್ಬರೂ ಒಂದು ದಿನ ಇದ್ದಕ್ಕಿದ್ದಂತೆ ದೂರವಾದರು. ಆಮೇಲೆ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರೂ, ಹಿಂದಿನ ಮ್ಯಾಜಿಕ ಪುನರಾವರ್ತನೆಯಾಗಲಿಲ್ಲ. ಇಷ್ಟಕ್ಕೂ ರವಿಚಂದ್ರನ್ ಮತ್ತು ಹಂಸಲೇಖ ದೂರಾಗಿದ್ದು ಯಾಕೆ?
ಈ ವಿಷಯದ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ. ‘ಓಕೆ’ ಎಂಬ ಹಂಸಲೇಖ ನಿರ್ದೇಶನದ ಮೊದಲ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರವ ಅವರು, ನಾವು ದೂರಾಗಿದ್ದೇಕೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾವಿಬ್ಬರು ದೂರ ಆಗಿದ್ದು ಯಾಕೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ನಾವಿಬ್ಬರೂ ದೂರ ಆಗಿಬಿಟ್ಟೆವು. ನಾವಿಬ್ಬರೂ ಇದುವರೆಗೂ ಜಗಳ ಆಡಿಲ್ಲ. ಯಾಕೆ ದೂರ ಆಗಿದ್ದು ಎಂದು ನನಗೂ ಗೊತ್ತಿಲ್ಲ. ಯಾವುದೂ ಬಿಟ್ಟು ಹೋಗುವಂತಹ ಕಾರಣಗಳಲ್ಲ. ಸಮಯ, ವಿಧಿ ನಮ್ಮನ್ನು ಹೇಗೆ ಸೇರಿಸಿತೋ, ಹಾಗೆಯೇ ದೂರ ಮಾಡಿತು. ಬಹುಶಃ ಬೇರೆ ದಾರಿಗಳು ಓಪನ್ ಆಗಬೇಕಿತ್ತೇನೋ? ಗೊತ್ತಿಲ್ಲ. ಅದರಿಂದ ನಾವಿಬ್ಬರೂ ದೂರ ಆಗಬೇಕಾದಂಥಹ ಪರಿಸ್ಥಿತಿ ಬಂದಿರಬಹುದು. ಈಗ ಅವರು ನಿರ್ದೇಶಕರಾಗಿದ್ದಾರೆ. ಇಷ್ಟು ದಿವಸ ನಾವು ಆ್ಯಕ್ಷನ್ ಹೇಳುತ್ತಿದ್ವಿ. ಅವರು ಎಸಿ ರೂಂನಲ್ಲಿ ಕೂತು ಪ್ರತಿಕ್ರಿಯೆ ನೀಡುತ್ತಿದ್ದರು. ಈಗ ನಾವು ಪ್ರತಿಕ್ರಿಯೆ ನೀಡಬೇಕು’ ಎಂದರು.
ನಾನು ಹೃದಯ ಆದರೆ, ಹಂಸಲೇಖ ನನ್ನ ಹಾರ್ಟ್‍ಬೀಟ್ ಎಂದ ರವಿಚಂದ್ರನ್, ‘ನಾನು ನಗೋದು ಕಡಿಮೆ. ಹಂಸಲೇಖ ಇದ್ದಾಗ ಮಾತ್ರ ನಾನು ಜಾಸ್ತಿ ನಗುತ್ತೇನೆ. ಅವರ ಜೊತೆಗೆ ಬರುವ ನಗು, ಬೇರೆ ಯಾರ ಜೊತೆಗೂ ಬರುವುದಿಲ್ಲ. ನಾವು ದೂರ ಆಗಿರಬಹುದು. ಆದರೆ, ನಮ್ಮ ನಡುವೆ ಸ್ನೇಹ ಕಡಿಮೆ ಆಗಿಲ್ಲ. ಗಟ್ಟಿಯಾಗಿಯೇ ಇದೆ. ನಾವು ಜೊತೆಗೆ ಸಿನಿಮಾ ಮಾಡೋಕೆ ಆಗಿಲ್ಲದಿರಬಹುದು. ಸಮಯ ಬಂದಾಗ, ಮತ್ತೆ ಜೊತೆಗೆ ಸಿನಿಮಾ ಮಾಡಬಹುದು’ ಎಂದರು.