ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೆ.ಆರ್.ಎಸ್. ಜಲಾಶಯಕ್ಕೆ ಸಾಕಷ್ಟು ಭದ್ರತೆ ಇಲ್ಲದೇ ಸಾರ್ವಜನಿಕರು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡುತ್ತಾರೆ. ಕ್ರೆಸ್ಟ್ ಗೇಟ್‌ಗಳ ಬಳಿ ಹೋಗಿ ವಿಡಿಯೋ, ರೀಲ್ಸ್ ಮಾಡುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆ.ಆರ್.ಎಸ್. ಜಲಾಶಯದ ಭದ್ರತೆಗಾಗಿ ಹತ್ತಾರು ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುವುದಾಗಿ ಹೇಳುತ್ತದೆ, ಆದರೆ ಈ ಹಣ ಯಾರ ಜೇಬು ಸೇರುತ್ತಿದೆ ಎಂಬುದು ತಿಳಿದಿಲ್ಲ.
ಸುಮಾರು ೨೫ ವರ್ಷಗಳ ಹಿಂದೆ, ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರಿಗಾಗಿ ಕ್ಯಾತೆ ತೆಗೆದಿದ್ದು, ಆಗ, ಕೆ.ಆರ್.ಎಸ್. ಅನ್ನು ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅಂದಿನಿಂದಲೂ ಭದ್ರತೆ ಒದಗಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ, ಯಾವುದೇ ರೀತಿಯ ಭದ್ರತೆ ಇಲ್ಲದೇ ರಾಜಾರೋಷವಾಗಿ ಯಾರು ಬೇಕಾದರೂ ಇಲ್ಲಿ ಓಡಾಡಬಹುದು ಎನ್ನುವಂತಾಗಿದೆ.
ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಕೆಲವರು ಮದ್ಯ ಸೇವಿಸಿ ಬಾಟಲಿಗಳನ್ನು ಅಲ್ಲಿಯೇ ಬಿಸಾಡುತ್ತಾರೆ, ಅಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಮಾರ್ಪಟ್ಟಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಐತಿಹಾಸಿಕ ಜಲಾಶಯ, ಹಾಗೂ ಪ್ರಸಿದ್ಧ ಪ್ರವಾಸಿ ತಾಣದ ಮಹತ್ವವನ್ನೇ ಅರಿತಿಲ್ಲ. ಭದ್ರತಾ ಲೋಪದಿಂದ ಒಂದು ವೇಳೆ ಏನಾದರೂ ಅವಘಡ ಸಂಭವಿಸಿದರೆ, ಅದಕ್ಕೆ ಯಾರು ಹೊಣೆ?
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





