Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಹಠತ್ ಹೃದಯಾಘಾತ ಹೆಚ್ಚಳಕ್ಕೆ ಕಾರಣವೇನು? : ಸರ್ಕಾರಕ್ಕೆ ವರದಿ ಸಲ್ಲಿಸಿದ ತಜ್ಞರ ಸಮಿತಿ 

Increasing heart attacks: A growing concern among the common people

ಬೆಂಗಳೂರು : ಹಠಾತ್ ಹೃದಯಾಘಾತಕ್ಕೆ ಕೋವಿಡ್ -19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ತಾಂತ್ರಿಕ ಸಲಹಾಮಿತಿ ಅಧ್ಯಯನ ತಿಳಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದಿಂದ ಸರಣಿ ಸಾವುಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿಯು ಜುಲೈ 2 ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಈ ವರ್ಷದ ಏಪ್ರಿಲ್ ಮತ್ತು ಮೇ ನಡುವೆ ಹೃದ್ರೋಗ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ 45 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಎರಡು ತಿಂಗಳ ಪ್ರಾಯೋಗಿಕ ಅಧ್ಯಯನದ ನಂತರ ಈ ವರದಿ ಸಲ್ಲಿಸಲಾಗಿದೆ.

ಈ ಪೈಕಿ 19 ರೋಗಿಗಳಿಗೆ ಈ ಹಿಂದೆ ಕೋವಿಡ್ ಸೋಂಕು ತಗುಲಿದ್ದರೂ ಮತ್ತು ಬಹುತೇಕ ಎಲ್ಲರೂ (251 ರಲ್ಲಿ 249) ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ, ಈ ಅಂಶಗಳು ಹೃದಯಾಘಾತ ಅಥವಾ ಹಠಾತ್ ಹೃದಯಾಘಾತಕ್ಕೆ ನೇರವಾಗಿ ಕಾರಣವಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರ ಸಮಿತಿ ತೀರ್ಮಾನಿಸಿದೆ.

ಬೆಂಗಳೂರಿನಿಂದ ಶೇ. 47 ರಷ್ಟು ಬಂದಿದ್ದು, ತುಮಕೂರು ಶೇ. 8, ಮಂಡ್ಯ, ಕೋಲಾರ ಮತ್ತು ರಾಮನಗರ ತಲಾ ಶೇ. 5 ಮತ್ತು ಕರ್ನಾಟಕದ ಇತರ ಜಿಲ್ಲೆಗಳಿಂದ ಒಟ್ಟು ಶೇ. 22 ರಷ್ಟು ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಹೃದ್ರೋಗಿಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 31 ರಿಂದ 40 ವಯಸ್ಸಿನ 66 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಜೊತೆಗೆ 41 ರಿಂದ 45 ವಯಸ್ಸಿನ 172 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು.

ತಜ್ಞರ ವರದಿಯ ಪ್ರಕಾರ, ಒಟ್ಟು 251 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. 218 ಜನ ಪುರುಷರಿದ್ದು, 33 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 251 ರೋಗಿಗಳಲ್ಲಿ 87 ಮಂದಿಯಲ್ಲಿ ಮಧುಮೇಹ ಕಂಡುಬಂದಿದೆ. 102 ರೋಗಿಗಳಿಗೆ ಬಿಪಿ, 35 ಕೊಲೆಸ್ಟ್ರಾಲ್ ಇದೆ. 40 ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. 111 ಮಂದಿ ಧೂಮಪಾನಿಗಳಾಗಿದ್ದಾರೆ. 19 ಮಂದಿಗೆ ಕೊವಿಡ್ ಸೋಂಕಿನ ಹಿನ್ನೆಲೆ ಇತ್ತು. ಇನ್ನುಳಿದ 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ.

ಸದ್ಯ ನ್ಯೂರಾಲಜಿಕಲ್ ಸಮಸ್ಯೆಯ ಅಧ್ಯಯನ ಬಾಕಿ ಇದ್ದು, ನಿಮ್ಹಾನ್ಸ್ ತಜ್ಞರು ವರದಿ ಕೊಟ್ಟ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ.

ಸಮಿತಿಯ ಶಿಫಾರಸುಗಳು ಇಂತಿವೆ… 

ಯುವಕರು ಹಠಾತ್ ಹೃದಯಾಘಾತದಿಂದ ಸಾವು ಪತ್ತೆಹಚ್ಚಲು ರಾಷ್ಟ್ರೀಯ ನೋಂದಣಿ ಮತ್ತು ಹೃದಯ ಕಣ್ಗಾವಲು ಕಾರ್ಯಕ್ರಮ ಆರಂಭಿಸಿ.

ವಯಸ್ಸಿನ ಗುಂಪಿನಲ್ಲಿ ವಿವರಿಸಲಾಗದ ಸಾವುಗಳಿಗೆ ಶವಪರೀಕ್ಷೆ ಆಧಾರಿತ ವರದಿ ಕಡ್ಡಾಯಗೊಳಿಸಿ.

ಆನುವಂಶಿಕ ಹೃದಯ ಕಾಯಿಲೆಗಳನ್ನು ಮೊದಲೇ ಪತ್ತೆಹಚ್ಚಲು ಶಾಲೆಗಳಲ್ಲಿ ನಿಯಮಿತ ಹೃದಯ ತಪಾಸಣೆ ಪ್ರಾರಂಭಿಸಿ.

ಜೀವನಶೈಲಿಗೆ ಸಂಬಂಧಿಸಿದ ಹೃದಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಕೈಗೊಳ್ಳಿ.

ಧೂಮಪಾನವನ್ನು ನಿಲ್ಲಿಸುವುದು, ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು, ಸಕ್ಕರೆ/ಉಪ್ಪು ಸೇವನೆ ನಿಯಂತ್ರಣ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ.

Tags:
error: Content is protected !!