ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ
ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ
ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ೧೫ ದಿನಗಳಿಂದ ಜನರೇಟರ್ ಸಮಸ್ಯೆಯಿಂದಾಗಿ ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಪರದಾಟ ಹೇಳತೀರದಾಗಿದೆ.
ಆಸ್ಪತ್ರೆಯಲ್ಲಿ ಜನರೇಟರ್ ದುರಸ್ತಿ ಮಾಡದೇ ಇರುವುದರಿಂದ ವಿದ್ಯುತ್ ಕಡಿತದ ಸಮಯದಲ್ಲಿ ಡಯಾಲಿಸಿಸ್ ಕೇಂದ್ರ ಮಾತ್ರವಲ್ಲದೆ ತುರ್ತು ನಿಗಾ ಘಟಕ ಮಾತ್ರವಲ್ಲದೇ ಇತರೆ ವಾರ್ಡ್ ಗಳಲ್ಲಿನ ರೋಗಿಗಳೂ ಪರದಾಡು ವಂತಾಗಿದೆ. ಅಲ್ಲದೆ ವೈದ್ಯರು ಮೊಬೈಲ್‌ಟಾರ್ಚ್ ಬೆಳಕಿನಲ್ಲಿ ರೋಗಿಗಳನ್ನು ಪರೀಕ್ಷಿಸಿ, ಔಷಧಿ ಚೀಟಿ ಬರೆಯುವುದು ಸಾಮಾನ್ಯವಾಗಿದೆ.
ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಕೆಲವರಿಗೆ ಎರಡು ದಿನಗಳಿಗೊಮ್ಮೆ, ಕೆಲವರಿಗೆ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲಾಗುತ್ತದೆ. ಒಂದು ವೇಳೆ ಡಯಾಲಿಸಿಸ್ ಮಾಡುವ ವೇಳೆ ವಿದ್ಯುತ್ ಹಾಗೂ ಇತರೆ ಸಮಸ್ಯೆಯಿಂದಾಗಿ ಅರ್ಧಕ್ಕೆ ನಿಂತು ಹೋದಲ್ಲಿ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಲೋ ಬಿಪಿ ಆಗುವ ಸಂಭವವಿದೆ. ಮಾತ್ರವಲ್ಲದೆ ಈಗಾಗಲೇ ಸಮಯ ನಿಗದಿಯಾಗಿರುವ ರೋಗಿಗಳು ದೂರದ ಊರುಗಳಿಂದ ಬಂದು ಕಾಯ್ದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
” ಹೆಚ್ಚಿನ ಹಣ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳಲಾಗದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಡಯಾಲಿಸಿಸ್ ಘಟಕಕ್ಕೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಸಿಬ್ಬಂದಿ , ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು, ಡಯಾಲಿಸಿಸ್ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಜನರೇಟರ್ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು.”
ರಾಮಚಂದ್ರ, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿ
” ನಾನು ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ವಾರದಲ್ಲಿ ಮೂರು ದಿನಗಳು ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಳೆದ ಮೂರು ಬಾರಿಯೂ ಡಯಾಲಿಸಿಸ್ ವೇಳೆ ವಿದ್ಯುತ್ ಅರ್ಧಕ್ಕೆ ನಿಂತು ಹೋಗಿ, ಇದೇ ಸಮಸ್ಯೆ ಎದುರಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಡಯಾಲಿಸಿಸ್ ಆಗದೇ ಇದ್ದಲ್ಲಿ ನಮಗೆ ಉಸಿರಾಟದ ಸಮಸ್ಯೆ ಎದುರಾಗಿ ಜೀವಕ್ಕೆ ಅಪಾಯವಾಗುತ್ತದೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾ ವ್ಶೆದ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು.
ಸರಿತಾ, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆ
” ಡಯಾಲಿಸಿಸ್ ಘಟಕಕ್ಕೆ ಸಂಪರ್ಕ ಹೊಂದಿರುವ ಜನರೇಟರ್‌ನ ಬ್ಯಾಟರಿಯೊಂದು ಕೆಟ್ಟು ಹೋಗಿದೆ. ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ಅದನ್ನು ಬದಲಿಸುವಂತೆ ಸೂಚಿಸಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಲಾಗುವುದು.”
ಡಾ.ಶ್ರೀಧರ್, ವೈದ್ಯಾಧಿಕಾರಿ, ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆ




