‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ ಒಂದೇ ತರಹ ಇದೆ’ಎಂಬ ದೂರು ಕೇಳುತ್ತಿದ್ದೇನೆ; ಮಕ್ಕಳು ಎಲ್ಲಕ್ಕೂ ‘ಎಐ’ ಬಳಸುವ ಮೂಲಕ, ಓದುವ, ಬರೆಯುವ ಕೌಶಲಗಳನ್ನು ಕಳೆದುಕೊಳ್ಳುವುದಿರಲಿ, ಸ್ವತಃ ಯೋಚಿಸುವ, ತರ್ಕಿಸುವ, ವಿವೇಚಿಸುವ ‘ಸಹಜ ಬುದ್ಧಿವಂತಿಕೆ’ಯನ್ನೂ ಕಳೆದುಕೊಳ್ಳುತ್ತಿದ್ದಾರೆ.
ಜೊತೆಗೆ ಮನುಷ್ಯ ಮನುಷ್ಯರೊಡನೆ ಒಡನಾಡುವ, ದಿಟ ಜಗತ್ತಿನೊಡನೆ ಸಂವಹಿಸುವ ಸಾಮರ್ಥ್ಯ ಲುಪ್ತವಾಗುತ್ತಿದೆ. ನಮಗೆ ಸದಾ ಅರಿವಿರಬೇಕು, ‘ಎಐ’ ಉತ್ತರಿಸುವುದು ‘ಡಾಟಾ’ ಮತ್ತು ‘ಅಲ್ಗಾರಿದಮ್’ ಅನ್ನು ಅವಲಂಬಿಸಿ. ಅದರಲ್ಲಿ ಉಣಿಸಿರುವ ಮಾಹಿತಿಯೇ ತಪ್ಪಿರಬಹುದು. ಬರೆದಿರುವ ಅಲ್ಗಾರಿದಮ್ ಪೂರ್ಣ ವಿಕಾಸಗೊಂಡಿರದೆ ಇರಬಹುದು; ಎಲ್ಲಕ್ಕಿಂತ ಅಪಾಯದ್ದು ಅಲ್ಗಾರಿದಮ್ ಯಾರದೋ ಲಾಭಕ್ಕೆ ದುಡಿಯುತ್ತಿರಬಹುದು, ಯಾರತ್ತಲೋ ಪಕ್ಷಪಾತಿಯಾಗಿರಬಹುದು, ಪೂರ್ವಗ್ರಹದ್ದಾಗಿರಬಹುದು. ‘ಎಐ ಹೇಳುವುದೆಲ್ಲವೂ ಪರಮಸತ್ಯವಲ್ಲ’ ಎಂಬ ಎಚ್ಚರಿಕೆಯಿಂದ ಬಳಸಬೇಕು, ನಮ್ಮ ಸ್ವಂತದ ವಿವೇಚನೆ ಸದಾ ಜಾಗೃತವಿರಬೇಕು.
‘ಎಐ’ ಅನ್ನು ಒಂದು ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ನಾವು ಬಳಸುವುದು ಸೂಕ್ತ. ಉದಾಹರಣೆಗೆ ಎಂ.ಆರ್.ಐ., ಸಿ.ಟಿ. ಸ್ಕ್ಯಾನ್ ಯಂತ್ರಗಳು ದೇಹದೊಳಗೆ ಇಣುಕಿ ಒಂದು ಚಿತ್ರವನ್ನು ನೀಡುತ್ತವೆ. ಅದನ್ನು ಅರ್ಥೈಸಿ ರೋಗಪತ್ತೆ ಮಾಡುವಲ್ಲಿ ಮಾನವಸಹಜ ತಪ್ಪುಗಳಾಗುವುದನ್ನು ನೋಡುತ್ತೇವೆ. ಇಂತಹ ಸಮಸ್ಯೆಗೆ ‘ಎಐ’ ಸಹಾಯಕನಾಗಬಲ್ಲದು. ಅಗಾಧ ಮಾಹಿತಿಯನ್ನು ಉಣಿಸಿ, ತಜ್ಞರ ಸಹಾಯದಿಂದ ರೋಗಪತ್ತೆಯ ಕಾರ್ಯಕ್ಕೆ ವಿಕಾಸಗೊಳಿಸಿದ ‘ಎಐ’ ಸಲಕರಣೆ ವೈದ್ಯರಿಗೆ ಸಹಾಯಕನಾಗ ಬಲ್ಲದು. ‘ಎಐ’ ತಂತ್ರಜ್ಞಾನದಿಂದ ದೂರ ಓಡಬೇಕಿಲ್ಲ, ಆದರೆ ಅದರ ಅತಿಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಬೇಕು; ಜವಾಬ್ದಾರಿಯುತ ‘ಎಐ’ ಬಳಕೆ ಸದ್ಯದ ಅಗತ್ಯವಾಗಿದೆ.
ನೇಮಿಚಂದ್ರ, ಖ್ಯಾತ ಬರಹಗಾರ್ತಿ, ಮತ್ತು ಹಿರಿಯ ವೈಮಾನಿಕ ಇಂಜಿನಿಯರ್




