Mysore
28
few clouds

Social Media

ಬುಧವಾರ, 11 ನವೆಂಬರ್ 2026
Light
Dark

ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಯೋಗೇಶ್

ಮಡಿಕೇರಿ: ಮಗನನ್ನು ಕಳೆದುಕೊಳ್ಳುವ ನೋವಿನ ನಡುವೆಯೂ, ಆತನ ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಆಸರೆಯಾಗಲಿ ಎಂದು ಕುಟುಂಬವೊಂದು ಮಾನವೀಯ ನಿರ್ಧಾರ ಕೈಗೊಂಡಿದೆ. ಇದು ಮಡಿಕೇರಿಯ 22 ವರ್ಷದ ಯುವಕ ಯೋಗೇಶ್‌ ಅವರ ಕಥೆ.

ಶನಿವಾರ ತಡರಾತ್ರಿಯವರೆಗೂ ಸಪ್ತಗಿರಿ ಎಂಟರ್‌ಪ್ರೈಸಸ್‌ ಕಚೇರಿಯಲ್ಲಿ ದೀಪಾವಳಿ ಪೂಜೆಯ ಸಿದ್ಧತೆ ಹಾಗೂ ದೀಪಾಲಂಕಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಯೋಗೇಶ್‌, ಬಳಿಕ ಮನೆಗೆ ತೆರಳಿದ್ದರು.

ಆದರೆ ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದುಬಿದ್ದ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು, ಯೋಗೇಶ್‌ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಕುಟುಂಬಕ್ಕೆ ತಿಳಿಸಿದರು.

ಬಳಿಕ ಮಡಿಕೇರಿಯ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಮಗ ಚೇತರಿಸಿಕೊಳ್ಳಲಾರ ಎಂಬ ನೋವಿನ ಸತ್ಯದ ನಡುವೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.

ಮೈಸೂರಿನ ಮಣಿಪಾಲ್‌ ಆಸ್ಪತ್ರೆಯ ವೈದ್ಯಕೀಯ ತಂಡ ಹಾಗೂ ಮಡಿಕೇರಿಯ ಆಸ್ಪತ್ರೆಯ ವೈದ್ಯರು ಒಟ್ಟಾಗಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ಅಗತ್ಯ ಸಿದ್ಧತೆ ಮತ್ತು ಪ್ರಕ್ರಿಯೆಗಳನ್ನು ಕೈಗೊಂಡರು.

ಯೋಗೇಶ್‌ ಅವರ ಸೇವಾ ಮನೋಭಾವಕ್ಕೆ ಮತ್ತೊಂದು ನಿದರ್ಶನವೂ ಇದೆ. ಇತ್ತೀಚೆಗೆ ಕೆಮಿಸ್ಟ್‌ ಅಸೋಸಿಯೇಷನ್‌ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದರು.

ಅಂದು ರಕ್ತದಾನದ ಮೂಲಕ ನೆರವಾಗಿದ್ದ ಯುವಕ, ಇಂದು ಅಂಗಾಂಗ ದಾನದ ಮೂಲಕ ಇತರರಿಗೆ ಬದುಕಿನ ಭರವಸೆಯಾಗಿದ್ದಾರೆ.

ಮಗನ ಅಗಲಿಕೆಯ ದುಃಖದಲ್ಲೂ ಮತ್ತೊಬ್ಬರ ಬದುಕನ್ನು ನೆನೆದ ಯೋಗೇಶ್‌ ಅವರ ಕುಟುಂಬದ ನಿರ್ಧಾರ, ಮಾನವೀಯತೆಗೆ ಸಾಕ್ಷಿಯಾಗಿದೆ.

Tags:
error: Content is protected !!