ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ ಸರಿಯಾಗಿ ಅರ್ಧ ಕತ್ತರಿಸಿ ಇಟ್ಟಂತೆ ಆ ಬೆಟ್ಟ ಕಾಣುತ್ತಿತ್ತು. ಅದನ್ನು ಅಷ್ಟು ಕೊರೆದು ಕತ್ತರಿಸಿ ಹಾಕಿದ್ದಾರೆ. ಈಗಲೂ ಅಲ್ಲಿ ಕ್ವಾರಿ ಕಾಮಗಾರಿ ನಡೆಯುತ್ತಿದೆ. ಇದಕ್ಕೂ ಒಂದೆರಡು ದಿನಗಳ ಹಿಂದಷ್ಟೇ ಪ್ರೊಫೆಸರ್ ಒಬ್ಬರು ಎ.ಐ. ತಂತ್ರಜ್ಞಾನದ ಬಗ್ಗೆ ಮಾತನಾಡಿದ ವಿಡಿಯೋ ಒಂದನ್ನು ಸ್ನೇಹಿತರು ಹಂಚಿಕೊಂಡಿದ್ದರು. ಶಿಕ್ಷಣದ ಬಗೆಗಿನ ಅವರ ಕಾಳಜಿ ಕಳವಳ ಅದರಲ್ಲಿ ವ್ಯಕ್ತವಾಗಿತ್ತು. ಸರಿಯಾದದ್ದೇ. ಜೊತೆಗೆ ಜನರು ಕೆಲಸ ಕಳೆದುಕೊಳ್ಳುವ ಬಗ್ಗೆಯೂ ಆತಂಕವಿತ್ತು ಅಥವಾ ಖಚಿತತೆಯಿತ್ತು.
ಇತ್ತೀಚೆಗೆ ಹಲವರು ಎ.ಐ. ಬಗೆಗೆ ಮನಸ್ಸಿಗೆ ಬಂದ ಹಾಗೆ ಮಾತನಾಡುವ ವಿಡಿಯೋಗಳು ಲೇಖನಗಳು ಬರುತ್ತಿವೆ. ಪ್ಯಾನಿಕ್ ಬಟನ್ ಒತ್ತಿ ಜನರಲ್ಲಿ ಆತಂಕ ತುಂಬುವ ಮಾತುಗಳೇ ಹೆಚ್ಚು. ಒಬ್ಬರು ಮಹಾಶಯರು, ಇತ್ತೀಚೆಗೆ ದೇಶದ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯಿಂದ ಕೆಲಗಾರರನ್ನು ವಜಾಗೊಳಿಸಿದ್ದು ಕೂಡ ಎ.ಐ. ಕಾರಣಕ್ಕಾಗಿ ಅನ್ನುವ ತೀರ್ಮಾನವನ್ನು ಹೊರಡಿಸಿದರು. ಇಂತಹ ಮಾತುಗಳು ಆತಂಕಗಳು ತಂತ್ರಜ್ಞಾನ ಯುಗದ ಹುಟ್ಟಿನಿಂದಲೂ ಇದೆ. ಕಂಪ್ಯೂಟರ್ ಬಂದ ಕೂಡಲೇ ಕೆಲಸ ಹೋಗುತ್ತದೆ. ಮೆಟ್ರೋ ಬಂದ ಕೂಡಲೇ ಆಟೋದವರಿಗೆ ಕೆಲಸವಿರುವುದಿಲ್ಲ. ಇತ್ಯಾದಿ. ಗಮನಿಸಿದರೆ, ತಂತ್ರಜ್ಞಾನ ಬದಲಾದಂತೆಲ್ಲ ಜನರು ತಮ್ಮ ಕಾರ್ಯಕ್ಷೇತ್ರಗಳನ್ನು ಬದಲಾಯಿಸಿಕೊಳ್ಳುತ್ತಾ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ರಸ್ತೆ ರಸ್ತೆಯಲ್ಲೂ ಸರ್ಫಿಂಗ್ ಸೆಂಟರ್ ಇದ್ದವು. ಅಂಗಡಿ ಅಂಗಡಿಯಲ್ಲು ಟೆಲಿಫೋನ್ ಬೂತುಗಳಿದ್ದವು.
ಏರಿಯಾ ಏರಿಯಾದಲ್ಲೂ ಕೇಬಲ್ ಆಪರೇಟರ್ಗಳು ಇದ್ದರು. ಅದೊಂದು ಮಾಫಿಯಾ ಆಗಿತ್ತು. ಆ ಸಂಪಾದನೆ ನಂಬಿಕೊಂಡಿದ್ದವರೆಲ್ಲ ಇವತ್ತು ಏನು ಮಾಡುತ್ತಿದ್ದಾರೆ? ಇನ್ನೇನೋ ಮಾಡುತ್ತಿದ್ದಾರೆ. ಸುಮ್ಮನೆ ಯೋಚಿಸಿ. ಕ್ಯಾಲ್ಕುಲೇಟರ್ ಇರುವ ಮಾತ್ರಕ್ಕೆ ಶಾಲೆಯಲ್ಲಿ ಮಕ್ಕಳಿಗೆ ಮಗ್ಗಿ ಕಂಠಪಾಠ ಮಾಡಿಸುವುದು ನಿಂತಿದೆಯೇ? ಅದರ ಅವಶ್ಯಕತೆ ಏನಿದೆ ಎಂದು ಯಾರಾದರೂ ಪ್ರತಿಭಟನೆ ನಡೆಸಿದ್ದಾರೆಯೇ? ಏಕೆಂದರೆ ಮನುಷ್ಯನ ಬುದ್ಧಿಮತ್ತೆಯ ಮಹತ್ವ ನಮಗೆ ತಿಳಿದಿದೆ. ಲೆಕ್ಕಾಚಾರ, ಕುತಂತ್ರ, ರಾಜಕೀಯ, ವ್ಯವಹಾರ ಚಾಣಾಕ್ಷತೆ ಇವೆಲ್ಲ ಮನುಷ್ಯನ ಸ್ವತ್ತು. ಅದನ್ನು ಮೀರಿಸುವ ಯಾವ ತಂತ್ರಜ್ಞಾನವೂ ಬರಲಾರದು. ಅದನ್ನು ಕುಂದಿಸುವ ಯೋಚನೆಯನ್ನು ಮನುಷ್ಯ ಮಾಡಲಾರ. ಅದನ್ನು ಮತ್ತಷ್ಟು ಸಾಣೆ ಹಿಡಿಯುವ ಕಡೆಗೇ ಅವನ ಪ್ರಯತ್ನವಿರುತ್ತದೆ.
ಎ.ಐ. ಸಂಪೂರ್ಣವಾಗಿ ಕಾರ್ಯ ಬಾಹುಳ್ಯವನ್ನು ಇಳಿಸಿದ ಮೇಲೂ ಮನುಷ್ಯ ಇನ್ನೇನನ್ನೋ ಮಾಡುತ್ತಾನೆ. ಅಥವಾ ಮಾಡಲುಕೆಲಸವಿಲ್ಲದೆ ಬೋರ್ ಆಗಿ ಕಂಡಕಂಡವರ ಮೇಲೆ ಗುಂಡು ಹಾರಿಸುತ್ತಾನೆ. ಒಂದು ಅಧ್ಯಯನದ ಪ್ರಕಾರ – ಮುಂದೆ ಎಲ್ಲ ಸರಕುಗಳ ಆಹಾರ ಸಾಮಗ್ರಿಗಳ ಉತ್ಪಾದನೆ ಎಷ್ಟು ಅಽಕವಾಗಿರುತ್ತದೆ, ಕೆಲಸವೆಲ್ಲ ಎಷ್ಟು ಆಟೋಮೇಟ್ ಆಗಿರುತ್ತದೆ, ಆಯುಷ್ಯ ಎಷ್ಟು ಹೆಚ್ಚಿರುತ್ತದೆ ಎಂದರೆ, ಮನುಷ್ಯನಿಗೆ ಏನು ಮಾಡಬೇಕೆಂದು ತೋಚದೆ ಏನೇನೋ ಮಾಡುತ್ತಾನಂತೆ. ಮುಂದೊಂದು ದಿನ ನಾವೆಲ್ಲರೂ ಬದುಕಿರುವ ಕಾಲದಲ್ಲಿ ಅದನ್ನು ನೋಡೋಣವಂತೆ.
ಆದರೆ ಸದ್ಯ ಎ.ಐ.ನಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕ ಹಬ್ಬಿರುವ ಈ ಸಂದರ್ಭದಲ್ಲಿ ಒಂದು ಚೋದ್ಯವಿದೆ. ನೀರು, ಗಾಳಿ, ಭೂಮಿಯನ್ನು ಕಳೆದುಕೊಳ್ಳುವ ಕಳೆದುಕೊಂಡಿರುವ ಬಗ್ಗೆ ಇಲ್ಲದ ಆತಂಕ ಕಾಳಜಿ ಸಿಟ್ಟು, ನಮಗೆ ನಮ್ಮ ಕೆಲಸ ಕಳೆದುಕೊಳ್ಳುವ ಬಗ್ಗೆ ವಿಪರೀತವಾಗಿದೆ. ಜಗತ್ತು ಹಾಳಾಗಿಹೋಗಲಿ ನಮ್ಮ ಕೆಲಸ ಉಳಿದರೆ ಸಾಕು ಎನ್ನುವ ಟಿಪಿಕಲ್ ಮಧ್ಯಮವರ್ಗದ ಕ್ಷೇಮಭಾವ ಇದು. ಅದನ್ನು ಪೋಷಿಸುವಂಥ ಲೇಖನಗಳು ವಿಡಿಯೋಗಳು ಉದುರುತ್ತಿರುವುದು ಆಶ್ಚರ್ಯ ವೇನಲ್ಲ. ಎ.ಐ. ತರುವ ಬದಲಾವಣೆಗಳ ಬಗ್ಗೆ ಮತ್ತೆ ಮಾತಾಡೋಣ. ಏನೇನಾಗುತ್ತದೋ ನೋಡೋಣ!
ವಿಕ್ರಮ್ ಹತ್ವಾರ್, ಕಥೆಗಾರ ಮತ್ತು ಐಟಿ ತಜ್ಞ




