ಹುಬ್ಬಳ್ಳಿ: ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡದೇ ಕೇಂದ್ರದ ಮೇಲೆ ಅನವಶ್ಯಕವಾಗಿ ಗೂಬೆ ಕೂರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಯುಪಿಎ ಅವಧಿಗಿಂತ ಎನ್‌ಡಿಎ ಸರ್ಕಾರ ಎರಡರಷ್ಟು ಅನುದಾನವನ್ನು ನೀಡಿದೆ. ಅಲ್ಲದೇ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅನುದಾನ ಹಂಚಿಕೆ ಬಿಡುಗಡೆ ಮಾಡುವುದನ್ನು ನಿರ್ಧರಿಸಿಲ್ಲ. ಅದರ ಬದಲಾಗಿ ಕೇಂದ್ರ ಹಣಕಾಸು ನಿಯೋಗ ನಿಗದಿಪಡಿಸಿದಷ್ಟು ಹಣವನ್ನು ಮಾತ್ರ ಕೇಂದ್ರ ನೀಡಿದೆ ಎಂದು ಹೇಳಿದರು.
ಕಳೆದ 2016-17ರ ಅವಧಿಯಲ್ಲಿ ಕೇಂದ್ರ ಹಣಕಾಸು ಆಯೋಗ ಅನುದಾನ ಹಂಚಿಕೆಯನ್ನು ನಿಗದಿಪಡಿಸಿತ್ತು. ಆಗ ಅಧಿಕಾರದಲ್ಲಿದ್ದವರು ಸಿಎಂ ಸಿದ್ದರಾಮಯ್ಯನವರೇ. ಆ ಸಂದರ್ಭದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಯೋಗದ ಮುಂದೆ ಧ್ವನಿ ಎತ್ತದೆ ಈಗ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.