ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕುವೆಂಪು ನಗರದ ಎಂ -ಬ್ಲಾಕ್ ನಲ್ಲಿರುವ ಭಾರತ್ ಮಾತಾ ಉದ್ಯಾನವನವು ಕುವೆಂಪು ನಗರದ ಪ್ರಮುಖ ಉದ್ಯಾನವಾಗಿದೆ. ಇಲ್ಲಿಗೆ ಪ್ರತಿ ದಿನ ನೂರಾರು ಹಿರಿಯ ನಾಗರಿಕರು, ಮಹಿಳೆಯರು ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಬರುತ್ತಾರೆ.
ಈ ಉದ್ಯಾನದಲ್ಲಿ ಮಕ್ಕಳಿಗಾಗಿ ವಿಶೇಷ ಆಟದ ಉಪಕರಣಗಳಿದ್ದು ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂತಹ ಕಡೆ ಶೌಚಾಲಯದ ವ್ಯವಸ್ಥೆ ಅತ್ಯಗತ್ಯ. ಆದರೆ ಇಲ್ಲಿ ಆ ವ್ಯವಸ್ಥೆ ಇಲ್ಲದೇ ಹಿರಿಯ ನಾಗರಿಕರು ಮತ್ತು ಮಹಿಳೆಯರು ಪರದಾಡುವಂತಾಗಿದೆ.
ಸಕ್ಕರೆ ಕಾಯಿಲೆ ಇರುವ ಹಿರಿಯ ನಾಗರಿಕರು, ಅರ್ಧ ಗಂಟೆ ವಾಕ್ ಮಾಡಿ ಶೌಚಕ್ಕೋಸ್ಕರ ಮನೆಗೆ ಹೋಗಿ, ಮತ್ತೆ ಬಂದು ವಾಕ್ ಮಾಡಬೇಕಾದ ಪರಿಸ್ಥಿತಿ ಇದೆ.
ಈ ಪಾರ್ಕ್ ವಿಶಾಲವಾಗಿದ್ದು, ಯಾವುದಾದರೂ ಒಂದು ಕಡೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯದ ವ್ಯವಸ್ಥೆ ಮಾಡಬೇಕು. ಮೈಸೂರು ನಗರ ಪಾಲಿಕೆಯ ಆಯುಕ್ತರಾದ ಎಂ. ಕೆ. ಸವಿತಾ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ಇದು ನಗರಪಾಲಿಕೆಯಿಂದ ಮಾಡಲು ಸಾಧ್ಯವಾಗದಿದ್ದರೆ, ಯಾರಾದರೂ ಸ್ಥಳೀಯ ದಾನಿಗಳಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು, ನಗರಪಾಲಿಕೆ ಅನುಮತಿ ನೀಡಿದರೇ, ನಾವೇ ನಿಂತು ಇಲ್ಲಿ ಶೌಚಾಲಯ ನಿರ್ಮಿಸಿ ಕೊಡುತ್ತೇವೆ. – ಬೂಕನಕೆರೆ ವಿಜೇಂದ್ರ, ಮೈಸೂರು



