Mysore
21
overcast clouds

Social Media

ಬುಧವಾರ, 23 ಸೆಪ್ಟೆಂಬರ್ 2026
Light
Dark

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ

ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಾರಂಭಕ್ಕೆ ದಿನಗಣನೆ ಶುರುವಾಗುತ್ತಿರುವಂತೆ ನಗರದ ರಾಜಮಾರ್ಗ ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ದಸರಾ ಕಾಮಗಾರಿಗಳು ಭರದಿಂದ ಸಾಗಿದ್ದು, ಸೆ.೩೦ರೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಕಳೆದ ಒಂದು ವಾರದಿಂದ ದಿನದ ೨೪ ಗಂಟೆಗಳ ಕಾಲವೂ ಕಾಮಗಾರಿ ನಡೆಯುತ್ತಿದ್ದು, ದಸರಾ ಪ್ರಾರಂಭಕ್ಕೂ ಮುನ್ನ ರಸ್ತೆ ಕಾಮಗಾರಿ ಸೇರಿದಂತೆ ಎಲ್ಲಾ ರೀತಿಯ ಸಿವಿಲ್ ಕಾಮಗಾರಿಗಳನ್ನು ಮುಗಿಸುವುದಕ್ಕೆ ನಗರಪಾಲಿಕೆ ಕ್ರಮ ಕೈಗೊಂಡಿದೆ.

ಹೀಗಾಗಿ, ಮಳೆ ಬಂದ ಮೇಲೆ ಹಾಳಾಗಿದ್ದ ಕೆಲವು -ಟ್‌ಪಾತ್, ಯುಜಿಡಿ ಕಾಮಗಾರಿಗೆ ತೆಗೆದಿದ್ದ ಹಳ್ಳಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಗುತ್ತಿದೆ. ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸಿದಾಗ ಯುದ್ಧ ಕಾಲದಲ್ಲಿ ಶಸಾಭ್ಯಾಸ ಎನ್ನುವಂತೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರಿಂದ ದಸರಾನಡುವೆಯೂ ಕಾಮಗಾರಿಗಳು ಮುಂದುವರಿಯುತ್ತಿದ್ದವು. ಇದರಿಂದಾಗಿ ಅನೇಕ ಕಡೆಗಳಲ್ಲಿ ತರಾತುರಿ, ಕಳಪೆ ಕಾಮಗಾರಿಗೆ ಕಾರಣವಾಗುತ್ತಿತ್ತು. ಇದನ್ನು ಮನಗಂಡ ಮೈಸೂರು ನಗರಪಾಲಿಕೆ ಆಯುಕ್ತರಾದ ಎಂ.ಕೆ.ಸವಿತಾ ಅವರು ಎರಡು ತಿಂಗಳ ಮುನ್ನವೇ ದಸರಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆಯನ್ನು ಮುಗಿಸುವಂತೆ ನೋಡಿಕೊಂಡಿದ್ದರು. ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಿದ್ದರಿಂದ ಎಲ್ಲಾ ಕಡೆಗಳಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಿದೆ.

೫.೯೬ ಕೋಟಿ ರೂ.ವೆಚ್ಚ: ದಸರಾ ಮಹೋತ್ಸವದ ಅಂಗವಾಗಿ ೫.೯೬ ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಆರಂಭಿಸಲಾಗಿದೆ. ನಗರದ ಕೆ.ಆರ್.ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ಚಾಮರಾಜ ಒಡೆಯರ್ ವೃತ್ತ, ಆಯುರ್ವೇದ ವೃತ್ತಗಳ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ಗ್ರಿಲ್ಗಳನ್ನು ಸರಿಪಡಿಸುವ, ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ. ಫುಟ್‌ಪಾತ್‌ನ ಎರಡೂ ಬದಿಗಳಲ್ಲಿ ಹಾಳಾಗಿರುವ ಟೈಲ್ಸ್‌ಗಳನ್ನು ಬದಲಿಸಿ ಹೊಸದಾಗಿ ಅಳವಡಿಸಿ, ಬಣ್ಣ ಬಳಿಯಲಾಗುತ್ತಿದೆ. ಆಯುರ್ವೇದ ಕಾಲೇಜು ವೃತ್ತದ ಬಳಿ ಟೈಲ್ಸ್‌ಗಳನ್ನು ಬದಲಿಸುವ ಕೆಲಸ ಭರದಿಂದ ಸಾಗಿದ್ದರೆ, ಬಂಬೂಬಜಾರ್‌ನಿಂದ ಬನ್ನಿಮಂಟಪದವರೆಗೆ, ನೆಲ್ಸನ್ ಮಂಡೇಲಾ ರಸ್ತೆವರೆಗೆ ಫುಟ್‌ಪಾತ್ ರಿಪೇರಿ, ಪೇಂಟಿಂಗ್, ಕರ್ಬ್ ಪೇಂಟಿಂಗ್, ಫೌಂಟನ್ ರಿಪೇರಿ ಮಾಡಲಾಗುತ್ತಿದೆ. ಯುಜಿಡಿ ಕಾಮಗಾರಿಗೆ ತೆಗೆದಿದ್ದ ಪ್ರದೇಶಗಳಿಗೆ ಜಲ್ಲಿ, ಮಣ್ಣನ್ನು ಮುಚ್ಚಿ ಅದರ ಮೇಲೆ ಡಾಂಬರೀಕರಣ ಮಾಡಿ ಅಂದಗೊಳಿಸುವ ಕಾರ್ಯ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಬೆಂಗಳೂರು ರಸ್ತೆ, ಗನ್‌ಹೌಸ್ ವೃತ್ತದಿಂದ ಎಲೆತೋಟದ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆಯಿಂದ ಏಕಲವ್ಯ ವೃತ್ತ, ವಿನೋಬಾ ರಸ್ತೆ, ಧನ್ವಂತ್ರಿ ರಸ್ತೆಯ ಮಾರ್ಗಗಳಲ್ಲಿ ಪೇಂಟಿಂಗ್, ಕರ್ಬ್ ಪೇಂಟಿಂಗ್, ಟೈಲ್ಸ್ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

” ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅಂದಾಜು ೬ ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಸೆ.೩೦ರೊಳಗೆ ಮುಗಿಯಲಿದೆ. ಪೇಂಟಿಂಗ್,ಫುಟ್ಪಾತ್‌ನಲ್ಲಿ ಹಾಳಾಗಿರುವ ಟೈಲ್ಸ್‌ಗಳ ಬದಲಾವಣೆ, ಫೌಂಟನ್ ದುರಸ್ತಿ ಮತ್ತಿತರ ಕಾಮಗಾರಿಗಳನ್ನು ಮುಗಿಸಲಾಗುತ್ತದೆ.”

ಕೆ.ಜೆ.ಸಿಂಧು, ಅಧೀಕ್ಷಕ ಅಭಿಯಂತರರು, ನಗರಪಾಲಿಕೆ

 

 

Tags:
error: Content is protected !!