ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದಿನಕ್ಕೆ ೯ ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಅದನ್ನು ೫ ತಾಸಿಗೆ ಕಡಿತಗೊಳಿಸಿರುವುದು ಅಕ್ಷಮ್ಯ.
ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಸದೆ ಕಣ್ಣಾಮುಚ್ಚಾಲೆ ಆಡುತ್ತಿರುವುದು ಸರ್ಕಾರದ ಧೋರಣೆ ಏನು ಎನ್ನುವುದನ್ನು ತೋರಿಸುತ್ತದೆ. ವಿದ್ಯುತ್ ಕೊರತೆಯಿಂದಾಗಿ ಬೆಳೆದ ಅಲ್ಪಸ್ವಲ್ಪ ಬೆಳೆಯೂ ಒಣಗಿ ಸಾಲದ ಸುಳಿಗೆ ಸಿಲುಕುತ್ತಿರುವ ರೈತರು ಈಗ ಬೀದಿಗಿಳಿದು ಹೋರಾಟ ಮಾಡುವಂತಾಗಿದೆ.
೮ ತಿಂಗಳ ವಿದ್ಯುತ್ ಕೊರತೆಯನ್ನು ನಿಭಾಯಿಸಲು ವಿಫಲವಾಗಿರುವ ಆಡಳಿತ, ಮುಂದಿನ ಜೂನ್‌ವರೆಗೆ ರಾಜ್ಯವನ್ನು ಹೇಗೆ ನಡೆಸುತ್ತದೆ ಎಂಬ ಚಿಂತೆ ಕಾಡತೊಡಗಿದೆ. ಸರ್ಕಾರ ಎಚ್ಚೆತ್ತುಕೊಂಡು ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಪೂರ್ಣಪ್ರಮಾಣದ ವಿದ್ಯುತ್ ಪೂರೈಸಬೇಕಾಗಿದೆ.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



