Mysore
22
broken clouds

Social Media

ಶನಿವಾರ, 08 ಆಗಸ್ಟ್ 2026
Light
Dark

ನಾಡಿನುದ್ದಕ್ಕೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಂಪು

ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ

ಚಿರಂಜೀವಿ ಸಿ.ಹುಲ್ಲಹಳ್ಳಿ

ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು ಕಾದಂಬರಿಗಳ ಮೂಲಕ ಅಪಾರ ಕೊಡುಗೆ ನೀಡಿದವರು ರಸಋಷಿ ಕುವೆಂಪು. ತಮ್ಮ ಜೀವಪರ ಬರವಣಿಗೆಯ ಮೂಲಕ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಾವ್ಯ ಪರಂಪರೆಯ ಅಧ್ಯಯನ, ಸಂಶೋಧನೆ, ಪ್ರಸಾರಕ್ಕಾಗಿಯೇ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ. ಅದೇ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’. ಅದಕ್ಕೀಗ ಷಷ್ಠ್ಯಬ್ದಿಯ (೬೦ನೇ ವರ್ಷ)ಸಂಭ್ರಮ.

ಕನ್ನಡದ ಉನ್ನತ ಅಧ್ಯಯನ, ಸಂಶೋಧನೆ, ವಿಮರ್ಶೆ, ಭಾಷಾ ವಿಜ್ಞಾನ, ಜಾನಪದ, ಶಾಸನ ಅಧ್ಯಯನ ಹಾಗೂ ಪ್ರಕಟಣಾ ಕ್ಷೇತ್ರಗಳಲ್ಲಿ ಕಳೆದ ಆರು ದಶಕಗಳಿಂದ ಅಪಾರ ಸೇವೆ ಸಲ್ಲಿಸಿರುವ ಈ ಸಂಸ್ಥೆ, ಮುಂದಿನ ಡಿಸೆಂಬರ್‌ನಲ್ಲಿ ವಜ್ರ ಮಹೋತ್ಸ ವವನ್ನು ಆಚರಿಸಿಕೊಳ್ಳುವ ಲಗುಬಗೆಯಲ್ಲಿದೆ.

ಒಂದು ಭಾಷೆಯ ಬೆಳವಣಿಗೆ ಕೇವಲ ಸಾಹಿತ್ಯದಿಂದ ಮಾತ್ರ ಸಾಧ್ಯವಿಲ್ಲ. ಅದರ ಇತಿಹಾಸ, ಭಾಷಾ ವೈಜ್ಞಾನಿಕ ಅಧ್ಯಯನ, ಜನಪದ, ಶಾಸನಗಳು, ಸಂಸ್ಕೃತಿ, ನಿಘಂಟುಗಳು, ಭಾಷಾಂತರ, ಸಂಶೋಧನೆ ಮತ್ತು ಹೊಸ ತಲೆಮಾರಿನ ವಿದ್ವಾಂಸರನ್ನು ರೂಪಿಸುವುದೂ ಅಗತ್ಯ. ಈ ಎಲ್ಲ ಕ್ಷೇತ್ರಗಳನ್ನೂ ಒಟ್ಟಾಗಿ ಬೆಳೆಸಿದ ಕನ್ನಡದ ಅತ್ಯಂತ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಗುರುತಿಸಿಕೊಂಡಿದೆ.

ಕನ್ನಡ ಅಧ್ಯಯನದ ಪರಂಪರೆಗೆ ಹೊಸ ಅಧ್ಯಾಯ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನಕ್ಕೆ ಆರಂಭದಿಂದಲೇ ವಿಶೇಷ ಆದ್ಯತೆ ನೀಡಲಾಗಿತ್ತು. ಕನ್ನಡ ವಿಭಾಗದಲ್ಲಿ ನಡೆದ ಸಂಶೋಧನೆ ಮತ್ತು ಅಧ್ಯಯನ ಚಟುವಟಿಕೆಗಳು ವಿಸ್ತಾರಗೊಂಡಂತೆ ಪ್ರತ್ಯೇಕ ಸಂಸ್ಥೆಯ ಅಗತ್ಯತೆ ಎದುರಾಯಿತು. ಈ ಹಿನ್ನೆಲೆಯಲ್ಲಿ ೧೯೬೬ರ ಡಿಸೆಂಬರ್ ತಿಂಗಳಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪನೆಯಾಯಿತು. ನಂತರ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಸಂಸ್ಥೆಗೆ ನಾಮಕರಣ ಮಾಡಲಾಯಿತು. ಕನ್ನಡ ಭಾಷೆಯ ಬೆಳವಣಿಗೆಗೆ ಕುವೆಂಪು ಅವರ ಕೊಡುಗೆಯನ್ನು ಸ್ಮರಿಸುವ ಸಂಕೇತವಾಗಿ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ರೂಪುಗೊಂಡಿತು.

ಮೈಸೂರು ವಿವಿ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕನ್ನಡ ಲೇಖಕರ ಸಮ್ಮೇಳನವನ್ನು ಉದ್ಘಾಟಿಸುವ ಸಮಯದಲ್ಲಿಯೇ ೧೯೬೬ ಡಿಸೆಂಬರ್ ೮ರಂದು ಆಗಿನ ಕುಲಪತಿ ಕೆ. ಎಲ್. ಶ್ರೀಮಾಲಿ ಅವರು ಕನ್ನಡ ಅಧ್ಯಯನ ಸಂಸ್ಥೆಗೆ ಚಾಲನೆ ನೀಡಿದ್ದರು. ೧೯೯೪ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಹೆಸರನ್ನು ಕುವೆಂಪು ಅವರ ಗೌರವಾರ್ಥ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಂದು ಪುನರ್ ನಾಮಕರಣ ಮಾಡಲಾಯಿತು. ಜೊತೆಗೇ ಅದರ ಕಾರ್ಯಕ್ಷೇತ್ರವೂ ವಿಸ್ತಾರಗೊಂಡಿತು.

ವಿವಿಯಲ್ಲಿ ಮೊದಲ ಸಂಸ್ಥೆ:
ಶತಮಾನ ಪೂರೈಸಿರುವ ನಾಡಿನ ಪ್ರಸಿದ್ಧ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಮೊದಲ ಅಧ್ಯಯನ ಸಂಸ್ಥೆ. ಉಳಿದ ಅಧ್ಯಯನ ಸಂಸ್ಥೆಗಳ ಸ್ಥಾಪನೆಗೆ ನಾಂದಿ ಹಾಡಿತು.

೧೯೬೪ರಲ್ಲಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ರಚನೆಯ ಯೋಜನೆ ಹಾಕಿದವರು ವಿದ್ವಾಂಸ ದೇಜಗೌ (ದೇ. ಜವರೇಗೌಡ) ಅವರು. ಒಂದು ದಶಕದ ನಂತರ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆಯ ಮೊದಲ ಸಂಪುಟ ಹೊರಬಂತು. ಹಾಮಾನಾ ಇದರ ಪ್ರಧಾನ ಸಂಪಾದಕರು.

ಅನೇಕ ಸಾಹಿತ್ಯ ದಿಗ್ಗಜರ ಕರ್ಮಭೂಮಿ
ಹಲವು ದಶಕಗಳಲ್ಲಿ ಕನ್ನಡದ ಖ್ಯಾತ ಪ್ರಾಧ್ಯಾಪಕರು, ವಿಮರ್ಶಕರು, ಭಾಷಾವಿಜ್ಞಾನಿಗಳು, ಜಾನಪದ ತಜ್ಞರು, ಶಾಸನ ಸಂಶೋಧಕರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕನ್ನಡ ಅಧ್ಯಾಪಕರಾಗಿ, ಸಂಶೋಧಕರಾಗಿ, ಲೇಖಕರಾಗಿ, ಆಡಳಿತಗಾರರಾಗಿ ಹೆಸರು ಮಾಡಿದ್ದಾರೆ.

ಸಂಶೋಧನೆಯ ಮಹಾಗೃಹ
ಕನ್ನಡ ಸಾಹಿತ್ಯದ ಎಲ್ಲ ಕಾಲಘಟ್ಟಗಳ ಅಧ್ಯಯನದ ಜೊತೆಗೆ ಭಾಷಾ ವಿಜ್ಞಾನ, ವ್ಯಾಕರಣ, ಸಾಹಿತ್ಯ ವಿಮರ್ಶೆ, ಜಾನಪದ ಅಧ್ಯಯನ, ಸಂಸ್ಕೃತಿ, ಅಧ್ಯಯನ, ಶಾಸನ ಶಾಸ್ತ್ರ, ಹಸ್ತಪ್ರತಿಗಳ ಸಂಪಾದನೆ, ಪುರಾತತ್ವ, ಭಾಷಾಂತರ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸಂಶೋಧನೆಗಳು ನಡೆದಿವೆ.

ಜಾನಪದ ವಸ್ತು ಸಂಗ್ರಹಾಲಯ:

ಇದು ದಕ್ಷಿಣ ಮತ್ತು ಪೂರ್ವ ಏಷ್ಯದಲ್ಲಿಯೇ ಅತಿ ದೊಡ್ಡದಾದ ಮತ್ತು ಸುಸಜ್ಜಿತ ವಸ್ತು ಸಂಗ್ರಹಾಲಯವೆಂದು ಪ್ರಸಿದ್ಧಿ ಪಡೆದಿದೆ. ದೇಜಗೌ ಮತ್ತು ಹಾಮಾನಾ ಅವರ ದೂರದೃಷ್ಟಿಯ ಫಲವಾಗಿ ೧೯೬೮ರಲ್ಲಿ ಸಂಗ್ರಹಾಲಯ ಸ್ಥಾಪನೆಯಾಯಿತು. ೧೯೭೪ರಲ್ಲಿ ಮೊದಲ ಬಾರಿ ಜಾನಪದ ಎಂ. ಎ. ತರಗತಿಗಳನ್ನು ಆರಂಭಿಸಲಾಯಿತು.

ನಾಡಿನ ಹೆಸರಾಂತ ಜಾನಪದ ವಿದ್ವಾಂಸರಲೊಬ್ಬರಾದ ಜೀ. ಶಂ. ಪರಮಶಿವಯ್ಯ ಮತ್ತು ಪ್ರಸಿದ್ಧ ಚಿತ್ರಕಲಾವಿದ ಪಿ. ಆರ್. ತಿಪ್ಪೇಸ್ವಾಮಿ ಸಂಗ್ರಹಾಲಯವನ್ನು ಕಟ್ಟುವ ಕಾರ್ಯದಲ್ಲಿ ದುಡಿದಿದ್ದಾರೆ. ಈಗ ವಸ್ತು ಸಂಗ್ರಹಾಲಯದಲ್ಲಿ ೬೦೦ ವಸ್ತುಗಳ ಸಂಗ್ರಹವಿದೆ. ಇಷ್ಟು ದೊಡ್ಡ ಪ್ರಮಾಣದ ವಸ್ತುಗಳು ಬೇರಾವ ಜಾನಪದ ವಸ್ತು ಸಂಗ್ರಹಾಲಯದಲ್ಲಿಯೂ ಇಲ್ಲ. ೧೯೮೫ ಮತ್ತು ೧೯೯೨ರಲ್ಲಿ ಇಂಗ್ಲೆಂಡಿನಲ್ಲಿ ಸಂಸ್ಥೆಯ ವಸ್ತುಗಳು ಪ್ರದರ್ಶನಗೊಂಡಿದ್ದವು.

ಜಾನಪದ ಅಧ್ಯಯನ ಕೀರ್ತಿ ಹೆಚ್ಚಿಸಿದ ವಿಭಾಗ
ಕರ್ನಾಟಕದಲ್ಲಿ ಜಾನಪದ ಅಧ್ಯಯನಕ್ಕೆ ಒಂದು ಸ್ಥಿರವಾದ ಬುನಾದಿಯನ್ನು ಪ್ರಪ್ರಥಮವಾಗಿ ಹಾಕಿಕೊಟ್ಟ ಕೀರ್ತಿ ಕನ್ನಡ ಅಧ್ಯಯನ ಸಂಸ್ಥೆಗೆ ಸಲ್ಲುತ್ತದೆ. ಜಾನಪದ ಅಧ್ಯಯನಕ್ಕೆ ಪ್ರತ್ಯೇಕವಾದ ಪೂರ್ಣ ಪ್ರಮಾಣದ ಜಾನಪದ ಎಂ. ಎ. ಶಿಕ್ಷಣವನ್ನು ಭಾರತದಲ್ಲೇ ಮೊತ್ತ ಮೊದಲ ಬಾರಿಗೆ ೧೯೭೪ರಲ್ಲಿ ಆರಂಭಿಸಲಾಯಿತು.

ಅಪರೂಪದ ಗ್ರಂಥ ಸಂಪತ್ತು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥಾಲಯ ಕನ್ನಡ ಅಧ್ಯಯನಕ್ಕೆ ಅತ್ಯಂತ ಅಮೂಲ್ಯ ಸಂಪತ್ತು. ಇಲ್ಲಿ ಸಾವಿರಾರು ಅಪರೂಪದ ಪುಸ್ತಕಗಳು, ಸಂಶೋಧನಾ ಮಹಾಪ್ರಬಂಧಗಳು, ನಿಯತಕಾಲಿಕೆಗಳು, ಹಸ್ತಪ್ರತಿಗಳು ಹಾಗೂ ಅಪರೂಪದ ಉಲ್ಲೇಖ ಗ್ರಂಥಗಳು ಸಂಗ್ರಹವಾಗಿವೆ. ದೇಶ-ವಿದೇಶಗಳಿಂದ ಸಂಶೋಧಕರು ಈ ಗ್ರಂಥಾಲಯವನ್ನು ಬಳಸಿಕೊಂಡು ಕನ್ನಡದ ವಿವಿಧ ವಿಷಯಗಳನ್ನು ಕುರಿತು ಅಧ್ಯಯನ ನಡೆಸಿದ್ದಾರೆ.

ಡಿಜಿಟಲ್ ಯುಗದತ್ತ ಹೆಜ್ಜೆ
ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಸಂಶೋಧನೆ, ಇ-ಗ್ರಂಥಾಲಯ, ಅಪರೂಪದ ಹಸ್ತಪ್ರತಿಗಳ ಡಿಜಿಟಲೀಕರಣ, ಆಧುನಿಕ ಸಂಶೋಧನಾ ವಿಧಾನಗಳು ಹಾಗೂ ಅಂತರ್‌ಶಿಸ್ತೀಯ ಅಧ್ಯಯನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಹೊಸ ತಲೆಮಾರಿನ ಸಂಶೋಧಕರು ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಅಧ್ಯಯನ ಮಾಡುವಂತೆ ಅಗತ್ಯವಾದ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಂಸ್ಥೆ ಪ್ರಯತ್ನಿಸುತ್ತಿದೆ.

ಇಲ್ಲಿನ ಹಸ್ತಪ್ರತಿ ಭಂಡಾರದಲ್ಲಿ ಕ್ರಮಾಂಕ ೫೭೨ನೇ ಅಶ್ವ ಪರೀಕ್ಷೆ ಎಂಬ ಹಸ್ತಪ್ರತಿಯು ಚಾಮರಾಜ ಒಡೆಯರ ಕಾಲದಲ್ಲಿ ರಚಿತವಾಗಿದೆ. ಅಶ್ವ ಪರೀಕ್ಷೆಯ ಲಕ್ಷಣಗಳ ಬಗೆಗಿನ ೨೦೩ ಉಲ್ಲೇಖಗಳಿವೆ. ತಾಳೆಗರಿ ಹಸ್ತಪ್ರತಿಗಳಿಗೆ ಡಿಜಿಟಲ್ ಸ್ಪರ್ಶ ನೀಡುತ್ತಿದ್ದು, ಪಸ್ತುತ ೨,೯೧೪, ೧,೬೮೫ ಕಾಗದ ಹಸ್ತಪ್ರತಿಗಳು, ೧,೧೮೬ ಮೈಕ್ರೋಫಿಲಂಗಳು, ೩೬ ಕಡತಗಳು ಇಲ್ಲಿವೆ.

ವಜ್ರ ಮಹೋತ್ಸವ ; ಸಂಭ್ರಮ ಮಾತ್ರವಲ್ಲ, ಸಂಕಲ್ಪವೂ ಹೌದು!
೬೦ ವರ್ಷಗಳ ಪಯಣ ಎಂದರೆ ಕೇವಲ ಒಂದು ಸಂಸ್ಥೆಯ ಇತಿಹಾಸವಲ್ಲ. ಅದು ಕನ್ನಡ ಭಾಷೆಯ ಬೆಳವಣಿಗೆಯ ಇತಿಹಾಸ, ಸಂಶೋಧನೆಯ ಇತಿಹಾಸ ಹಾಗೂ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಇತಿಹಾಸವೂ ಆಗಿದೆ. ಹೀಗಾಗಿ ಸಂಭ್ರಮವನ್ನು ಕುವೆಂಪು ಅವರ ಜನ್ಮ ದಿನಾಚರಣೆಯೊಂದಿಗೆ ಬಯಲು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನುತ್ತಾರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ಅವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೂಲ ಸಭಾಂಗಣವನ್ನು ದುರಸ್ತಿಗೊಳಿಸಿ ದೇಜಗೌ ಸಭಾಂಗಣವಾಗಿ ನಾಮಕರಣ ಮಾಡಲಾಗುವುದು, ವಿವಿಯಲ್ಲಿ ಅತ್ಯಂತ ಅಮೂಲ್ಯ ಗ್ರಂಥಾಲಯವನ್ನು ಹೊಂದಿರುವ ಕೇಂದ್ರಕ್ಕೆ ಕುವೆಂಪು ಅವರ ಗುರುಗಳಾದ ಟಿ. ಎಸ್. ವೆಂಕಣ್ಣಯ್ಯ ಹೆಸರು ನಾಮಕರಣ, ಗ್ರಂಥಾಲಯದ ಪುಸ್ತಕಗಳ ಡಿಜಿಟಲೀಕರಣ, ಮಹಿಳಾ ವಿಶ್ರಾಂತಿ ಕೊಠಡಿ ಸ್ಥಾಪನೆ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಕಟಣೆಗಳ ಮೂಲಕ ಕನ್ನಡಕ್ಕೆ ಹೊಸ ಸಂಪತ್ತು
ಸಂಸ್ಥೆಯ ಮತ್ತೊಂದು ಮಹತ್ವದ ಸಾಧನೆ ಅದರ ಪ್ರಕಟಣಾ ಕಾರ್ಯ. ಕಳೆದ ಆರು ದಶಕಗಳಲ್ಲಿ ನೂರಾರು ಸಂಶೋಧನಾ ಗ್ರಂಥಗಳು, ವಿಮರ್ಶಾ ಕೃತಿಗಳು, ಜಾನಪದ ಅಧ್ಯಯನ ಗ್ರಂಥಗಳು, ಭಾಷಾ ಅಧ್ಯಯನ ಕೃತಿಗಳು ಹಾಗೂ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಿದೆ. ೧೯ನೇ ಶತಮಾನದಲ್ಲಿ ಕರ್ನಲ್ ಮೆಕೆಂಜಿಯಿಂದ ಆರಂಭವಾಗಿ ಬಿ. ಎಲ್. ರೈಸ್, ಆರ್. ನರಸಿಂಹಾಚಾರ್ಯ ಮುಂತಾದವರು ಇಲ್ಲಿವರೆಗೆ ಸಂಗ್ರಹಿಸಿರುವ ಸುಮಾರು ೧೦ ಸಾವಿರ ಹಸ್ತಪ್ರತಿಗಳು ಈ ಭಂಡಾರದಲ್ಲಿವೆ. ಇಲ್ಲಿ ರನ್ನ ಕವಿಯ ಗದಾಯುದ್ಧ, ಎರಡನೆಯ ನಾಗವರ್ಮನ ವರ್ಧಮಾನ ಪುರಾಣ, ಸಂಸ್ಕೃತ ಭಾಷೆ ಮತ್ತು ಮಲಯಾಳಂ ಲಿಪಿಯಲ್ಲಿ ಬರೆದಿರುವಂಥ ಕನ್ನಡ ವ್ಯಾಕರಣ ಶಾಸವನ್ನು ಹೇಳುವ ನಾಗವರ್ಮನ ಭಾಷಾ ಭೂಷಣ, ಬಸವಪುರಾಣ, ಕ್ರಿ. ಶ. ೧೫೪೪ರಲ್ಲಿ ಪ್ರತಿ ಮಾಡಲಾದ ಗದುಗಿನ ಭಾರತ, ಪಗಡೆಯಾಟ, ಅಶ್ವಶಾಸ ಮುಂಥಾದ ಗ್ರಂಥಗಳ ಹಸ್ತಪ್ರತಿ ವಿಶಿಷ್ಟವಾಗಿವೆ.

Tags:
error: Content is protected !!