ಡಾ. ಮಾನಸ ಎಸ್.ಡಿ.
ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ
ಆರೋಗ್ಯವೆಂದರೆ ಕೇವಲ ರೋಗದ ಅನುಪಸ್ಥಿತಿಯಲ್ಲ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಪರಿಸರದ ಸಮತೋಲನದೊಂದಿಗೆ ಉತ್ತಮ ಗುಣಮಟ್ಟದ ಜೀವನ ನಡೆಸುವುದೇ ಸಮಗ್ರ ಆರೋಗ್ಯ. ಇಂದು ಜಗತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳು, ಮಾನಸಿಕ ಒತ್ತಡ, ನಿದ್ರೆಯ ಸಮಸ್ಯೆಗಳು, ಪರಿಸರ ಮಾಲಿನ್ಯ ಮತ್ತು ಬದಲಾಗುತ್ತಿರುವ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ಆಯುರ್ವೇದದ ಸಮಗ್ರ ಆರೋಗ್ಯ ದೃಷ್ಟಿಕೋನವು ಮಹತ್ವದ ಮಾರ್ಗದರ್ಶನ ನೀಡಬಲ್ಲದು.
‘ಆರೋಗ್ಯಕರ ನಾಳೆಗಾಗಿ ಆಯುರ್ವೇದ-ಒಂದು ಆರೋಗ್ಯ, ಒಂದು ಭವಿಷ್ಯ’ ಎಂಬ ೨೦೨೬ರ ವಿಶ್ವ ಆಯುರ್ವೇದ ದಿನದ ಧ್ಯೇಯವು ವೈಯಕ್ತಿಕ ಆರೋಗ್ಯದೊಂದಿಗೆ ಸಮಾಜ ಮತ್ತು ಪರಿಸರದ ಆರೋಗ್ಯವನ್ನೂ ಪರಿಗಣಿಸುವ ಸಮಗ್ರ ದೃಷ್ಟಿಕೋನವನು ಪ್ರತಿಪಾದಿಸುತ್ತದೆ. ಆರೋಗ್ಯಕರ ವ್ಯಕ್ತಿ, ಆರೋಗ್ಯಕರ ಸಮಾಜ ಮತ್ತು ಆರೋಗ್ಯಕರ ಪರಿಸರದ ಮೂಲಕವೇ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಬಹುದು ಎಂಬ ಸಂದೇಶವನ್ನು ಇದು ಸಾರುತ್ತದೆ.
ದೈನಂದಿನ ಜೀವನದಿಂದಲೇ ಆರೋಗ್ಯದ ಆರಂಭ: ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ, ರೋಗ ಬರುವುದನ್ನು ತಡೆದು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಯುರ್ವೇದ ವಿಶೇಷ ಮಹತ್ವನೀಡುತ್ತದೆ. ಸ್ವಸ್ಥ ವೃತ್ತದ ಅಂಗಗಳಾದ ದಿನ ಚರ್ಯೆ, ಋತುಚರ್ಯೆ ಮತ್ತು ಆಹಾರ ವಿಧಿಗಳು ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ದಿನ ಚರ್ಯೆಯು ದಿನದ ನೈಸರ್ಗಿಕ ಲಯಕ್ಕೆ ಅನುಗುಣವಾಗಿ ಅನುಸರಿಸಬೇಕಾದ ಆರೋಗ್ಯಕರ ಕ್ರಮಗಳನ್ನು ಒಳಗೊಂಡಿದೆ. ಸಮಯಕ್ಕೆ ಸರಿಯಾಗಿ ಎದ್ದೇಳುವುದು ಮತ್ತು ಮಲಗುವುದು, ವೈಯಕ್ತಿಕ ಸ್ವಚ್ಛತೆ, ದೈಹಿಕ ಚಟುವಟಿಕೆ, ಸೂಕ್ತ ಆಹಾರ ಪದ್ಧತಿ, ಅಭ್ಯಂಗ, ನಸ್ಯ, ಅಂಜನ ಮುಂತಾದ ಆಚರಣೆಗಳು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಬೆಂಬಲಿಸುತ್ತವೆ.
ಆರೋಗ್ಯದ ಆಧಾರ -ಆಹಾರ: ಆಹಾರವು ಜೀವನ ಮತ್ತು ಆರೋಗ್ಯದ ಪ್ರಮುಖ ಆಧಾರ ಸ್ತಂಭ. ಆದರೆ ಆರೋಗ್ಯಕರ ಆಹಾರ ಎಂದರೆ ಕೇವಲ ‘ಏನುತಿನ್ನಬೇಕು?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಲ್ಲ. ಹೇಗೆ, ಯಾವಾಗ, ಎಷ್ಟು ಮತ್ತು ಯಾವ ರೀತಿಯಲ್ಲಿ ಆಹಾರ ಸೇವಿಸಬೇಕು ಎಂಬುದಕ್ಕೂ ಆಯುರ್ವೇದ ಮಹತ್ವ ನೀಡುತ್ತದೆ. ಇದನ್ನೇ ಆಹಾರವಿಧಿ ಎಂದು ವಿವರಿಸಲಾಗಿದೆ.
ತಾಜಾ, ಹಿತಕರ ಮತ್ತು ಸೂಕ್ತವಾದ ಆಹಾರವನ್ನು ವ್ಯಕ್ತಿಯ ಪ್ರಕೃತಿ ಹಾಗೂ ಜೀರ್ಣಶಕ್ತಿಗೆ ಅನುಗುಣವಾಗಿ, ಯೋಗ್ಯ ಪ್ರಮಾಣದಲ್ಲಿ ಮತ್ತು ಹಿಂದಿನ ಆಹಾರವು ಜೀರ್ಣವಾದ ನಂತರ ಸೂಕ್ತ ಸಮಯದಲ್ಲಿ ಸೇವಿಸುವುದು ಮುಖ್ಯ. ಆತುರವಿಲ್ಲದೆ, ಅನಗತ್ಯ ವ್ಯತ್ಯಯಗಳಿಲ್ಲದೆ, ಜಾಗೃತ ಮನಸ್ಸಿನಿಂದ ಆಹಾರ ಸೇವಿಸುವುದು ಆರೋಗ್ಯಕರ ಆಹಾರ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ.
ಮಾನಸಿಕ ಕ್ಷೇಮ -ಆರೋಗ್ಯದ ಅವಿಭಾಜ್ಯ ಅಂಗ: ದೈಹಿಕ ಆರೋಗ್ಯವನ್ನು ಮಾನಸಿಕ ಕ್ಷೇಮದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಒತ್ತಡ, ಆತಂಕ, ನಿದ್ರಾಭಂಗ ಮತ್ತು ಭಾವನಾತ್ಮಕ ದಣಿವುಗಳು ಇಂದಿನ ಸಮಾಜದ ಪ್ರಮುಖ ಆರೋಗ್ಯ ಸವಾಲುಗಳಾಗಿವೆ. ಆಯುರ್ವೇದವು ಮನಸ್ಸನ್ನು ಆರೋಗ್ಯದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. ಸಮರ್ಪಕ ನಿದ್ರೆ, ಶಿಸ್ತಿನ ಜೀವನಕ್ರಮ, ಯೋಗ, ಧ್ಯಾನ, ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಸಾಮಾಜಿಕ ಸಂಬಂಧಗಳು ಮತ್ತು ಸಕಾರಾತ್ಮಕ ಚಿಂತನೆಯಂತಹ ಅಭ್ಯಾಸಗಳು ಮಾನಸಿಕ ಹಾಗೂ ಸಮಗ್ರ ಕ್ಷೇಮವನ್ನು ಬೆಂಬಲಿಸಬಲ್ಲವು.
ಆಚಾರ ರಸಾಯನ- ಆರೋಗ್ಯಕರ ನಡವಳಿಕೆಯ ಮಹತ್ವ:
ಆರೋಗ್ಯವನ್ನು ಕೇವಲ ಆಹಾರ ಮತ್ತು ಔಷಧಿಗಳ ಮೂಲಕವೇ ಸಾಧಿಸಲಾಗುವುದಿಲ್ಲ. ನಮ್ಮ ಚಿಂತನೆ, ನಡವಳಿಕೆ ಮತ್ತು ಸಾಮಾಜಿಕ ಸಂಬಂಧಗಳು ಕೂಡ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಆಯುರ್ವೇದದ ಆಚಾರ ರಸಾಯನವು ಸತ್ಯವಂತಿಕೆ, ಅಹಿಂಸೆ, ಕರುಣೆ, ಆತ್ಮ ಸಂಯಮ, ಶಿಸ್ತು, ಗೌರವ, ಸಕಾರಾತ್ಮಕ ಮನೋಭಾವನೆ ಮತ್ತು ಭಾವನಾತ್ಮಕ ಸಮತೋಲನದಂತಹ ಮೌಲ್ಯಗಳಿಗೆ ಒತ್ತು ನೀಡುತ್ತದೆ. ಪಂಚಕರ್ಮ -ಆಯುರ್ವೇದದ ಶೋಧನಾ ಚಿಕಿತ್ಸಾ ಪರಂಪರೆಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಯಂತಹ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಪಂಚಕರ್ಮವನ್ನು ಚಿಕಿತ್ಸಾತ್ಮಕ ಶೋಧನಾ ವಿಧಾನಗಳಾಗಿ ವಿವರಿಸಲಾಗಿದೆ. ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣ ಎಂಬ ಪಂಚಕರ್ಮದ ಪ್ರಮುಖ ವಿಧಾನಗಳನ್ನು ವ್ಯಕ್ತಿಯ ಆರೋಗ್ಯಸ್ಥಿತಿ, ರೋಗ ಸ್ಥಿತಿ, ಋತು ಮತ್ತು ಚಿಕಿತ್ಸೆಯ ಅಗತ್ಯತೆಗೆ ಅನುಗುಣವಾಗಿ ಆಯುರ್ವೇದ ತಜ್ಞರು ಆಯ್ಕೆಮಾಡುತ್ತಾರೆ.
‘ರಸಾಯನ -ಆರೋಗ್ಯಕರ ವೃದ್ಧಾಪ್ಯದತ್ತ’:
ಆಯುರ್ವೇದದಲ್ಲಿ ರಸಾಯನವು ಆರೋಗ್ಯಕರ ದೀರ್ಘಾಯುಷ್ಯ ಮತ್ತು ಉತ್ತಮ ಜೀವನ ಮಟ್ಟವನು ಉತ್ತೇಜಿಸುವ ಪ್ರಮುಖ ಪರಿಕಲ್ಪನೆಯಾಗಿದೆ. ಚರಕ ಸಂಹಿತೆಯಲ್ಲಿ ರಸಾಯನವನ್ನು ದೀರ್ಘಾಯುಷ್ಯ, ಶಕ್ತಿ, ಬುದ್ಧಿ, ಸ್ಮರಣೆ, ಚೈತನ್ಯ ಮತ್ತು ಆರೋಗ್ಯವನ್ನು ಬೆಂಬಲಿಸುವ ವಿಧಾನವಾಗಿ ವಿವರಿಸಲಾಗಿದೆ. ರಸಾಯನವು ಕೇವಲ ಔಷಧ ಸೇವನೆಗೆ ಸೀಮಿತವಾಗಿಲ್ಲ. ಸೂಕ್ತ ಔಷಧಿಗಳು, ಹಿತಕರ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸದಾಚಾರಗಳ ಸಮನ್ವಯವೇ ಅದರ ವಿಶಾಲ ಪರಿಕಲ್ಪನೆ. ಇದರ ಉದ್ದೇಶ ಕೇವಲ ಜೀವಿತಾವಧಿಯನ್ನು ಹೆಚ್ಚಿಸುವುದಲ್ಲ; ಆರೋಗ್ಯಕರ ವರ್ಷಗಳನ್ನು ಹೆಚ್ಚಿಸುವುದು ಮತ್ತು ಉತ್ತಮ ಜೀವನಮಟ್ಟವನ್ನು ಕಾಪಾಡಿಕೊಳ್ಳುವುದು.
ಆರೋಗ್ಯಕರಭವಿಷ್ಯದತ್ತ: ಆಯುರ್ವೇದದ ವಿಶೇಷತೆ ರೋಗ ಬಂದ ನಂತರದ ಚಿಕಿತ್ಸೆಯಲ್ಲಷ್ಟೇ ಅಲ್ಲ; ರೋಗಬಾರದಂತೆಆರೋಗ್ಯವನ್ನುಕಾಪಾಡಿಕೊಳ್ಳುವ ಜೀವನ ಪದ್ಧತಿಯಲ್ಲಿಯೂ ಇದೆ. ದಿನಚರ್ಯೆ, ಋತುಚರ್ಯೆ, ಆಹಾರವಿಧಿ, ಆಚಾರರಸಾಯನ, ಯೋಗ, ಧ್ಯಾನ, ಪಂಚಕರ್ಮಮತ್ತುರಸಾ ಯನಮುಂತಾದಪರಿಕಲ್ಪನೆಗಳು ದೇಹ, ಮನಸ್ಸು, ಸಮಾಜ ಮತ್ತು ಪರಿಸರವನ್ನು ಒಳಗೊಂಡ ಸಮಗ್ರಆರೋಗ್ಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.
೨೦೨೬ರ ವಿಶ್ವ ಆಯುರ್ವೇದ ದಿನದ ಸಂದರ್ಭದಲ್ಲಿ, ವೈಯಕ್ತಿಕ ಆರೋಗ್ಯದ ಗಡಿಯನ್ನು ಮೀರಿ ಸಾಮೂಹಿಕ ಆರೋಗ್ಯ ಮತ್ತು ಪರಿಸರದ ಆರೋಗ್ಯವನ್ನೂ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂಬ ಸಂದೇಶವನ್ನು ಅಳವಡಿಸಿ ಕೊಳ್ಳೋಣ.
ಆರೋಗ್ಯಕರ ವ್ಯಕ್ತಿಯಿಂದ ಆರೋಗ್ಯಕರ ಸಮಾಜ; ಆರೋಗ್ಯಕರ ಸಮಾಜದಿಂದ ಆರೋಗ್ಯಕರಪರಿಸರ; ಆರೋಗ್ಯಕರ ಪರಿಸರದಿಂದ ಆರೋಗ್ಯಕರ ಭವಿಷ್ಯ. ಇದೇ “ಆರೋಗ್ಯಕರನಾಳೆಗಾಗಿ ಆಯುರ್ವೇದ? ಒಂದುಆರೋಗ್ಯ, ಒಂದುಭವಿಷ್ಯ” ಎಂಬ ಧ್ಯೇಯದ ಸಾರ.
(ಲೇಖಕರು ಸಹ ಪ್ರಾಧ್ಯಾಪಕರು ಪಂಚಕರ್ಮ ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಅಧ್ಯಯನ ವಿಭಾಗ , ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು)
” ಆರೋಗ್ಯಕರ ಮನಸ್ಸು ಅಗತ್ಯ ಮಾನಸಿಕ ಒತ್ತಡ ಮತ್ತು ಸಾಮಾಜಿಕ ಒತ್ತಡಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಆಚಾರ ರಸಾಯನದ ತತ್ವಗಳು ವಿಶೇಷವಾಗಿ ಪ್ರಸ್ತುತವಾಗಿವೆ. ಆರೋಗ್ಯಕರ ಮನಸ್ಸು, ಸೌಹಾರ್ದಯುತ ಸಂಬಂಧಗಳು ಮತ್ತು ಜವಾಬ್ದಾರಿಯುತ ನಡವಳಿಕೆಗಳು ವ್ಯಕ್ತಿಯಷ್ಟೇ ಅಲ್ಲ, ಸಮಾಜದ ಸಮಗ್ರ ಕ್ಷೇಮಕ್ಕೂ ಕೊಡುಗೆ ನೀಡುತ್ತವೆ”




