Mysore
28
moderate rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಮಂಡ್ಯಕ್ಕೆ ಬೆಂಕಿ ಹಚ್ಚೋಕೆ ಯಾರಿಂದಲೂ ಸಾಧ್ಯವಿಲ್ಲ: ಚೆಲುವರಾಯಸ್ವಾಮಿ

ಬೆಂಗಳೂರು: ಬಿಜೆಪಿ-ಜೆಡಿಎಸ್ ಅವರು ಜನರನ್ನ ಪ್ರವೋಕ್ ಮಾಡ್ತಿದ್ದಾರೆ. ಕುಮಾರಸ್ವಾಮಿ ಮತ್ತು ಅಶೋಕ್ ತೀಟೆ ಮಾಡೋಕೆ ಹೋಗ್ತಿದ್ದಾರೆ. ಮಂಡ್ಯದಲ್ಲಿ ಇದು ನಡೆಯಲ್ಲ. ಬಂದ್ ಬೇಡ ಅಂತ ಜನರೇ ಮನವಿ ಮಾಡಿದ್ದಾರೆ. ಮಂಡ್ಯಕ್ಕೆ ಬೆಂಕಿ ಹಚ್ಚೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಹಿಂದೂ ವಿರೋಧಿ ಅಲ್ಲ, ಯಾವುದೇ ಧ್ವಜದ ವಿರೋಧಿಗಳೂ ಅಲ್ಲ. ಪಂಚಾಯತಿಯಲ್ಲಿ ರಾಷ್ಟ್ರ ಧ್ವಜ, ನಾಡ ಧ್ವಜಕ್ಕೆ ಅನುಮತಿ ಕೊಟ್ಟಿದ್ದರು, ಆದ್ರೆ ಬೇರೆ ಧ್ವಜ ಹಾರಿಸಿದ್ದಾರೆ. ಮಂಡ್ಯದಲ್ಲಿ ಅನೇಕ ಜನರು ಶಾಂತಿ ಹಾಳುಮಾಡೋಕೆ ಬರೋದು ಬೇಡ, ಮಂಡ್ಯದ ನೆಮ್ಮದಿ ಹಾಳು ಮಾಡಬೇಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ತಾಲೂಕು ಪಂಚಾಯ್ತಿ ಇಒ, ದಾಖಲಾತಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ. ಗೊಂದಲಗಳು ಆದಾಗ ಇಒ ದಾಖಲಾತಿ ತೆಗೆದುಕೊಂಡು ಹೋಗಿದ್ದಾರೆ. ಅವರು ತಮ್ಮ ಕಚೇರಿಗೇ ದಾಖಲಾತಿ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ, ಮನೆಗೆ ತೆಗೆದುಕೊಂಡು ಹೋಗಿಲ್ಲ ಎಂದು ಸಿಟ್ಟಾಗಿ ಹಾರಿಕೆ ಉತ್ತರ ನೀಡಿದ್ದಾರೆ.

ಕೆರಗೋಡು ಘಟನೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಗೆ ಆಗ್ತಿದೆ ಎಂಬ ಸಂಸದೆ ಸುಮಲತಾರ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯಿಸಿ, ಸುಮಲತಾ ಅವರು ಮಂಡ್ಯ ಜನರಿಗೆ ಸಲಹೆ ಮಾಡೋದು ಬೇಡ. ಬಿಜೆಪಿಯಿಂದ ಟಿಕೆಟ್ ಪಡೆಯೋಕೆ ಬಿಜೆಪಿ ಪರವಾಗಿ ಮಾತಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ದೇವೇಗೌಡರಿಂದ ಬೆಳೆದು ದೇವೇಗೌಡರ ವಿರುದ್ಧ ಮಾತಾಡೋದು ಸರಿಯಲ್ಲ ಎಂಬ ಪುಟ್ಟರಾಜು ಹೇಳಿಕೆಗೆ ಉತ್ತರಿಸಿದ ಸಚಿವರು, ನನ್ನ ಇತಿಹಾಸವನ್ನ ಅವನು ಓದೋಕೆ ಹೇಳಿ ಮೊದಲು. ನಾನು ಹೇಗೆ ಬಂದೆ ಅಂತ ಅವನು ತಿಳಿದುಕೊಳ್ಳಲಿ. ಮಂಡ್ಯಕ್ಕೆ ದೇವೇಗೌಡರ ಕೊಡುಗೆ ಏನು? ದೇವೇಗೌಡರಿಗೆ ಮಂಡ್ಯದ ಕೊಡುಗೆ ಏನು? ಅಂತ ತಿಳಿದುಕೊಳ್ಳಲಿ ಎಂದು ಪುಟ್ಟರಾಜು ವಿರುದ್ಧ ಏಕವಚನದಲ್ಲೇ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ