ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡಕ್ಕೆ ಸಂದ ಜಯ ಟೀಂ ಇಂಡಿಯಾಗೆ ವರದಾನವಾಗಿ ಪರಿಣಮಿಸಿದೆ. ಹೀನಾಯ ಸೋಲು ಅನುಭವಿಸಿದ ನ್ಯೂಜಿಲೆಂಡ್ WTC (world test championship) 2023-25 ಟೂರ್ನಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನ್ಯೂಜಿಲೆಂಡ್ ಕುಸಿತ ಕಂಡರೆ, ಎರಡನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ಮತ್ತು ಕಿವೀಸ್ ವಿರುದ್ಧ ಜಯ ದಾಖಲಿಸಿದ ಆಸೀಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇದುವರೆಗೆ 8 ಪಂದ್ಯಗಳನ್ನಾಡಿದ್ದು, 5 ಗೆಲುವು, 2 ಸೋಲು ಹಾಗೂ 1 ಡ್ರಾ ನೊಂದಿಗೆ ಒಟ್ಟು 62 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಅಲಂಕರಿಸಿದೆ.
ನ್ಯೂಝಿಲೆಂಡ್ ಈವರೆಗೆ ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿದೆ. ಹಾಗೆಯೇ 2 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ತಂಡ 11 ಪಂದ್ಯಗಳ ಪೈಕಿ 7 ಜಯ, 3 ಸೋಲು ಹಾಗೂ 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಸದ್ಯ 59.09% ಗೆಲುವಿನ ಶೇಕಡಾವಾರು ಹೊಂದಿದ್ದು 3ನೇ ಸ್ಥಾನದಲ್ಲಿದೆ.
ಬಾಂಗ್ಲಾದೇಶ ಕೇವಲ 2 ಪಂದ್ಯಗಳನ್ನಾಡಿದ್ದು, 1 ಪಂದ್ಯದಲ್ಲಿ ಗೆದ್ದರೆ, ಮತ್ತೊಂದು ಪಂದ್ಯ ಸೋತಿದೆ. ಈ ಮೂಲಕ 50.00% ಗೆಲುವಿನ ಶೇಕಡಾವಾರಿನೊಂದಿಗೆ 4ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ಇದುವರೆಗೆ 5 ಪಂದ್ಯಗಳನ್ನಾಡಿದೆ. ಇದರಲ್ಲಿ 2 ಗೆಲುವು, 3 ಪಂದ್ಯಗಳಲ್ಲಿ ಸೋಲನುಭವಿಸಿ 5ನೇ ಸ್ಥಾನದಲ್ಲಿದೆ.