Mysore
25
overcast clouds

Social Media

ಶನಿವಾರ, 02 ಮೇ 2026
Light
Dark

ಸಮೀಕ್ಷೆ ಭವಿಷ್ಯ : ದ್ರಾವಿಡ ಕೋಟೆ ಅಲುಗಾಟ ; ಕಿಂಗ್‌ ಮೇಕರ್‌ ಆಗ್ತಾರಾ ದಳಪತಿ ವಿಜಯ್?‌

ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಈಗ ಎಲ್ಲರ ಚಿತ್ತ ತನ್ನತ್ತ ಸೆಳೆದಿದೆ. ಬಾಕ್ಸ್ ಆಫೀಸ್ ಕಿಂಗ್ ಈಗ ಮತಪೆಟ್ಟಿಗೆಯ ಕಿಂಗ್ ಆಗ್ತಾರಾ? ಉತ್ತರಕ್ಕೆ ಮೇ 4ರವರೆಗೆ ಕಾಯಲೇಬೇಕು.

ಡಿಎಂಕೆ vs ಎಐಎಡಿಎಂಕೆ ಫೈಟ್‌ಗೆ ಬ್ರೇಕ್?
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಡಿಎಂಕೆ-ಎಐಎಡಿಎಂಕೆ ನೇರಾನೇರ ಕಾಳಗದ ಸೂತ್ರವನ್ನೇ ಟಿವಿಕೆ ಮುರಿಯುವ ಲಕ್ಷಣ ಕಾಣುತ್ತಿದೆ. ಹಲವು ಚುನಾವಣಾ ಸಮೀಕ್ಷೆಗಳು ವಿಜಯ್ ‘ಕಿಂಗ್ ಮೇಕರ್’ ಆಗುವುದಷ್ಟೇ ಅಲ್ಲ, ‘ಕಿಂಗ್’ ಆಗುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ.

ಆಕ್ಸಿಸ್ ಮೈ ಇಂಡಿಯಾ ಶಾಕಿಂಗ್ ವರದಿ
ಮತಗಟ್ಟೆ ಸಮೀಕ್ಷೆಯಲ್ಲಿ ನಂಬಿಕೆ ಗಳಿಸಿರುವ ಆಕ್ಸಿಸ್ ಮೈ ಇಂಡಿಯಾ ವರದಿ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ. ಟಿವಿಕೆ ಪಕ್ಷ 98ರಿಂದ 120 ಸ್ಥಾನ ಗೆದ್ದು, ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆಯನ್ನು ಮೂರನೇ ಸ್ಥಾನಕ್ಕೆ ತಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 118 ಸ್ಥಾನ ಬೇಕು. ಒಂದು ವೇಳೆ ಸಮೀಕ್ಷೆ ನಿಜವಾದರೆ, ಮೊದಲ ಪ್ರಯತ್ನದಲ್ಲೇ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಿಜಯ್ ಮುಖ್ಯಮಂತ್ರಿ ಗಾದಿಗೆ ಲಗ್ಗೆ ಇಡಬಹುದು.

ಯುವ-ಮಹಿಳಾ ವೋಟ್‌ಬ್ಯಾಂಕ್ ವಿಜಯ್ ಕಡೆಗೆ
18ರಿಂದ 39 ವರ್ಷದ ಯುವ ಮತದಾರರಲ್ಲಿ ಶೇ.38ರಷ್ಟು ಮಂದಿ ಟಿವಿಕೆ ಪರ ಒಲವು ತೋರಿದ್ದಾರೆ ಎಂದು ಸಮೀಕ್ಷೆಗಳು ಬೊಟ್ಟು ಮಾಡಿವೆ. ಮಹಿಳಾ ಮತದಾರರ ದೊಡ್ಡ ವರ್ಗವೂ ವಿಜಯ್ ಕಡೆಗೆ ವಾಲಿದೆ. ಇದು ಡಿಎಂಕೆ-ಎಐಎಡಿಎಂಕೆ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ನೇರ ಹೊಡೆತ ಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಅತಂತ್ರವಾದರೆ ವಿಜಯ್ ಕೈಯಲ್ಲಿ ಕೀಲಿಕೈ
ಟಿವಿಕೆ ಮೊದಲ ಬಾರಿ ಕಣದಲ್ಲಿರುವುದರಿಂದ ಯಾರ ಮತ ಸೆಳೆದಿದೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಡಿಎಂಕೆ-ಎಐಎಡಿಎಂಕೆ ಮೈತ್ರಿಕೂಟದ ಮತಗಳಿಗೆ ಕತ್ತರಿ ಬೀಳುವುದು ಖಚಿತ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, 100ರ ಆಸುಪಾಸು ಶಾಸಕರೊಂದಿಗೆ ವಿಜಯ್ ‘ಕಿಂಗ್ ಮೇಕರ್’ ಆಗಿ ಯಾರಿಗೆ ಪಟ್ಟ ಕಟ್ಟಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.

ಸದ್ಯಕ್ಕೆ ಎಲ್ಲರ ಚಿತ್ತ ಮೇ 4ರ ಫಲಿತಾಂಶದ ಮೇಲೆ ನೆಟ್ಟಿದೆ. ದಳಪತಿಯ ರಾಜಕೀಯ ಎಂಟ್ರಿ ತಮಿಳುನಾಡಿನ ದ್ರಾವಿಡ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತಾ? ಕಾದು ನೋಡಬೇಕಿದೆ.

Tags:
error: Content is protected !!