ಅಮೇರಿಕಾ: ಭಾರತದ ಬಾಹ್ಯಾಕಾಶ ಯಾನದಲ್ಲಿ ಐತಿಹಾಸಿಕ ಕ್ಷಣ ಕೊನೆಗೂ ಬಂದಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ.
ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು ಹೊತ್ತ ಆಕ್ಸಿಯಮ್4 ಮಿಷನ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ.
ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಫಾಲ್ಕನ್-9 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದೆ.
ಇದಕ್ಕೂ ಮೊದಲು ಭಾರತದ ರಾಕೇಶ್ ಶರ್ಮಾ ಅವರು ಅಂತರಿಕ್ಷಯಾನ ಪ್ರವಾಸ ಕೈಗೊಂಡಿದ್ದರು. 1984ರಲ್ಲಿ ರಷ್ಯಾದ ಸೋಯುಜ್ ನೌಕೆಯಲ್ಲಿ ಅಂತರಿಕ್ಷ ಪ್ರವಾಸ ಮಾಡಿ ರಾಕೇಶ್ ಶರ್ಮಾ ಇತಿಹಾಸ ನಿರ್ಮಿಸಿದ್ದರು. ಇದೀಗ ಮತ್ತೊಬ್ಬ ಭಾರತೀಯ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯರಾಗಿದ್ದಾರೆ.
ಜೂನ್.26ರ ಸಂಜೆ ಬಾಹ್ಯಾಕಾಶ ನಿಲ್ದಾಣದಲ್ಲಿ ನೌಕೆ ಡಾಕಿಂಗ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಶುಭಾಂಶು ಶುಕ್ಲಾ ಜೊತೆಗೆ ಅಮೇರಿಕಾದ ಪೆಗ್ಗಿ ವಿಟ್ಸನ್, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಹಗೂ ಪೊಲೆಂಡ್‌ನ ಸ್ಲಾವೋಸ್ಜ್ ಉನ್ನಾನ್ಸ್ಕಿ ಪಯಣ ಬೆಳೆಸಿದ್ದಾರೆ.
ಇನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಶುಭಾಂಶು ಶುಕ್ಲಾ ಅವರ ಪೋಷಕರು ಈ ಕಾರ್ಯಾಚರಣೆಯ ವೀಕ್ಷಣೆ ಮಾಡಿ ಸಂತಸಪಟ್ಟರು.
ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಸಂದೇಶ ರವಾನಿಸಿದ್ದು, ಜೈಹಿಂದೆ, ಜೈ ಭಾರತ್. ಇದೊಂದು ಅದ್ಭುತ ಪ್ರಯಾಣ . ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ ಎಂದು ಸಂತಸಪಟ್ಟಿದ್ದಾರೆ.