ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿನ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಇದ್ದ ವಿಘ್ನ ನಿವಾರಿಸಿ ಕಾಮಗಾರಿಗೆ ಅನುಮತಿ ಕೊಡಿಸುವಲ್ಲಿ ಶಾಸಕ ಎಂಆರ್ ಮಂಜುನಾಥ್ ಅವರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಆಲಂಬಾಡಿ ಗ್ರಾಮದಲ್ಲಿ ಅಳಿವಿನಂಚಿನಲ್ಲಿದ್ದ ಇತಿಹಾಸ ಪ್ರಸಿದ್ಧ 400 ವರ್ಷಗಳ ಹಿಂದೆ ಆಲಂಬಾಡಿ ಜಂಜೇ ಗೌಡರು ನಿರ್ಮಾಣ ಮಾಡಿದ್ದ ರಂಗನಾಥ ಸ್ವಾಮಿ ದೇವಸ್ಥಾನವನ್ನು 3.36 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಮಾಡಲು ಆಗಸ್ಟ್ 18, 2025 ರಂದು ಭೂಮಿ ಪೂಜೆ ಸಲ್ಲಿಸಿದ್ದರು.
ಇತಿಹಾಸ ಪ್ರಸಿದ್ಧ ಶ್ರೀ ರಂಗಸ್ವಾಮಿ ದೇವಸ್ಥಾನ ಸಮರ್ಪಕ ನಿರ್ವಹಣೆ ಇಲ್ಲದೆ ಶಿಥಿಲಗೊಂಡು ಅಳಿವಿನಂಚಿನಲ್ಲಿತ್ತು. ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವುದರಿಂದ ಪ್ರವಾಸೋದ್ಯಮ, ಹಾಗೂ ಪ್ರಸಿದ್ಧ ದೇವಾಲಯದ ಅಭಿವೃದ್ಧಿ ಆಗಲಿದೆ ಎಂಬ ನಿಟ್ಟಿನಲ್ಲಿ ಶಾಸಕ ಎಂಆರ್ ಮಂಜುನಾಥ್ ರವರು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಂರಕ್ಷಣಾ ಕಾಮಗಾರಿಗೆ ಕ್ರಮ ವಹಿಸಿದ್ದರು.
ಈ ಕಾಮಗಾರಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಅಡಿಗಲ್ಲು ಹಾಕಿದ್ದರು. ಆದರೆ ಅರಣ್ಯ ಇಲಾಖೆಯ ಕೆಲವು ನಿಯಮಗಳಿಂದ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಸ್ಥಗಿತವಾಗಿತ್ತು. ಶಾಸಕ ಎಂ ಆರ್ ಮಂಜುನಾಥ್ ರವರು ಯಾವುದೇ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ ಛಲದಂಕ ಮಲ್ಲನಂತೆ ಹಿಡಿದ ಕೆಲಸವನ್ನು ಪೂರ್ಣ ಮಾಡುವವರೆಗೂ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿ ದೇವಸ್ಥಾನದ ಮಹತ್ವವನ್ನು ತಿಳಿಸಿ ಕಾಮಗಾರಿಗೆ ಅನುಮತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮಗಾರಿ ವಿಳಂಬವೇಕೆ?: ಗೋಪಿನಾಥಂ ವಲಯ ಅರಣ್ಯ ಅಧಿಕಾರಿ ಸಪ್ಟೆಂಬರ್ 17, 2025 ರಂದು ಪತ್ರ ವ್ಯವಹಾರ ಮಾಡಿ ಶ್ರೀರಂಗಸ್ವಾಮಿ ದೇವಾಲಯವು ಕಾವೇರಿ ವನ್ಯಜೀವಿ ವಿಭಾಗದ ಗೋಪಿನಾಥಂ ವನ್ಯಜೀವಿ ವಲಯದ ಆಲಂಬಾಡಿ ಶಾಖೆಯ ಗೌಡಿಕೆರೆ ಗಸ್ತಿನ ಸಿಪಿಟಿ 88ರ ಕಾವೇರಿ ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಮಲೆ ಮಹದೇಶ್ವರ ಮೀಸಲು ಅರಣ್ಯದ ಎನ್ ಕ್ಲೋಸರ್ ದೇವಾಲಯವಾಗಿರುತ್ತದೆ ಎಂದು ಉಲ್ಲೇಖ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಇದರಿಂದ ಕಾಮಗಾರಿ ಸ್ಥಗಿತವಾಗಿತ್ತು.
ಎ.ಸಿ.ಎಫ್ ಹಾಗೂ ವಲಯ ಅರಣ್ಯ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಗೊಂದಲ ಉಂಟಾಗಿದ್ದರಿಂದ ಮತ್ತೊಮ್ಮೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು.
ಹಿರಿಯ ಅಧಿಕಾರಿಗಳ ಸೂಚನೆಯಂತೆ 2026 ಏಪ್ರಿಲ್ 14ರಂದು ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸದರಿ ದೇವಾಲಯದ ಪ್ರದೇಶವು ಮಹದೇಶ್ವರ ಮಲೈ ಆರ್ ಎಫ್ ವ್ಯಾಪ್ತಿಯಲ್ಲಿದೆ ಎಂದು ವರದಿ ನೀಡಿದ್ದರು.
ಎಲ್ಲಾ ವರದಿಗಳನ್ನು ಪರಿಶೀಲನೆ ನಡೆಸಿದ ನಂತರ ಶ್ರೀ ರಂಗಸ್ವಾಮಿ ದೇವಾಲಯದ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿರುವ ಸ್ಥಳವು ಮಹದೇಶ್ವರ ಮಲೈ ಮೀಸಲು ಅರಣ್ಯದ ಒಳಗಡೆ ಬರುತ್ತಿದ್ದು, 10 ಸೆಂಟ್ ಜಾಗದಲ್ಲಿ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಂತೆ ಪೂರ್ವ ಅನುಮತಿ ಪಡೆದು ಕಾಮಗಾರಿಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಸದರಿ ದೇವಸ್ಥಾನದ ಸಂರಕ್ಷಣಾ ಕಾಮಗಾರಿ ಕೈಗೊಂಡು ಸ್ಥಳೀಯ ಗ್ರಾಮಸ್ಥರಿಗೆ ಪೂಜಾ ಕೈಂ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಒಟ್ಟಾರೆ ಕಳೆದ ಎಂಟು ತಿಂಗಳಿನಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು ಕಾಮಗಾರಿ ಪ್ರಾರಂಭವಾಗಿರಲಿಲ್ಲ ಸತತ ಹೋರಾಟದ ಫಲವಾಗಿ ಇಂದು ದೇವಸ್ಥಾನ ನಿರ್ಮಾಣಕ್ಕೆ ಅನುಮತಿ ಸಿಕ್ಕಿರುವುದರಿಂದ ಶ್ರೀ ರಂಗನಾಥ ಸ್ವಾಮಿ ಭಕ್ತಾದಿಗಳಲ್ಲಿ ಸಂತಸ ಉಂಟು ಮಾಡಿದೆ ಮುಂದಿನ ದಿನಗಳಲ್ಲಿ ದೇವಸ್ಥಾನ ಕಾಮಗಾರಿ ಪೂರ್ಣಗೊಂಡ ನಂತರ ದರ್ಶನಕ್ಕೆ ಅವಕಾಶ ಸಿಗಲಿದೆ.




