ಮೈಸೂರು: ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ಆಗಿದೆ ಎನ್ನಲಾದ ಅಕ್ರಮವನ್ನು ಕುಮಾರಸ್ವಾಮಿ ಅವರು ಸಾಬೀತು ಮಾಡಿದ್ರೆ ನಾನೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯನಗರ 2ನೇ ಹಂತದಲ್ಲಿ ಸಿಎಂ ಸಿದ್ದರಾಮಯ್ಯ 1997-99ರಲ್ಲಿ ನಿರ್ಮಿಸಿ ಮಾರಾಟ ಮಾಡಿದ ಮನೆಯ ಪ್ರತಿಯೊಂದು ದಾಖಲೆಗಳು ಸಕ್ರಮವಾಗಿವೆ.
ಅಲ್ಲಿದ್ದ ನಿವೇಶನವನ್ನು ಸಿಎಂ ಸಿದ್ದರಾಮಯ್ಯ ಅವರು ಪಾಪಣ್ಣ ಕುಟುಂಬದವರಿಂದ ಖರೀದಿ ಮಾಡಿದ್ದರು. ಆ ಜಮೀನನ್ನು ಮುಡಾ ನೋಟಿಫೈ ಮಾಡಿಲ್ಲ. ಸುಪ್ರೀಂ ಕೂಡ ಸಿದ್ದರಾಮಯ್ಯ ಪರ ತೀರ್ಪು ನೀಡಿದೆ. ಇದೆಲ್ಲದರ ನಡುವೆ ಇಲ್ಲಿ ಅಕ್ರಮ ಆಗಿದೆ ಎನ್ನುವ ಪ್ರಶ್ನೆಯೇ ಬರಲ್ಲ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬರೀ ಇಲ್ಲಸಲ್ಲದ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಒಂದು ವೇಳೆ ಈ ಆರೋಪವನ್ನು ಸಾಬೀತು ಮಾಡಿದರೆ ನಾನೇ ಸಿಎಂ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸುತ್ತೇನೆ. ಇಲ್ಲದಿದ್ದರೆ ಕೇಂದ್ರ ಸಚಿವ ಸ್ಥಾನಕ್ಕೆ ಎಚ್‌ಡಿಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.