ಮೈಸೂರು: ಇಲ್ಲಿನ ಉದಯಗಿರಿ ಪೊಲೀಸ್ ಠಾಣೆ ಮುಂದೆ ಗಲಭೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿದ್ದ ಸಾವಿರಕ್ಕೂ ಅಧಿಕ ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಗಲಭೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಇದ್ದರು ಎಂದು ಹೇಳಿದ್ದಾರೆ.
ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧಿಸಿ ಠಾಣೆಯಲ್ಲಿ ಇರಿಸಲಾಗಿತ್ತು. ಆದರೆ ಫೆಬ್ರವರಿ.9ರಂದು ಆರೋಪಿ ಸತೀಶ್ ಎಂಬಾತನನ್ನು ಠಾಣೆಗೆ ಕರೆತರಲಾಗಿತ್ತು. ಬಳಿಕ ಅಂದು ರಾತ್ರಿ ಠಾಣೆ ಮುಂದೆ ಜಮಾಯಿಸಿದ ಅನ್ಯಕೋಮಿನ ಯುವಕರು ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಕೂಗಾಟ ಆರಂಭಿಸಿದ್ದರು.
ಬಳಿಕ ಸಾವಿರ ಜನರ ಗುಂಪೊಂದು ಠಾಣೆ ಮುಂದೆ ಜಮಾವಣೆ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೂಗಾಟ ಮಾಡಿದ್ದರು.
ಈ ವೇಳೆ ಪೊಲೀಸರು ಎಷ್ಟೇ ಹೇಳಿದರೂ ಕೇಳದ ಗುಂಪು, ಠಾಣೆ ಹಾಗೂ ವಾಹನಗಳ ಮೇಲೆ ಏಕಾಏಕಿ ಕಲ್ಲಿನ ದಾಳಿ ನಡೆಸಿದರು. ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಪೊಲೀಸರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಕಲ್ಲು ತೂರಾಟದಿಂದ ಸಾರ್ವಜನಿಕರಿಗೂ ಗಾಯಗಳಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಘಟನೆ ನಡೆಯುತ್ತಿದ್ದಂತೆ ಹೆಚ್ಚಿನ ಅನಾಹುತ ಸಂಭವಿಸದಂತೆ ಉದಯಗಿರಿ ಠಾಣೆ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿತ್ತು. ಈಗ ಪರಿಸ್ಥಿತಿ ಶಾಂತವಾಗಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ.