Mysore
25
few clouds

Social Media

ಮಂಗಳವಾರ, 19 ಮೇ 2026
Light
Dark

ಸಂಶೋಧನೆಗೆ ಸಂಕಟ | ಶಿಷ್ಯವೇತನಕ್ಕೆ ಆಗ್ರಹಿಸಿ ಮೈ.ವಿ.ವಿ ಸಂಶೋಧಕರ ಪ್ರತಿಭಟನೆ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸಂಶೋಧಕರುಗಳಿಗೆ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಶಿಷ್ಯವೇತನರಹಿತ ಸಂಶೋಧಕರ ಬಳಗದ ವತಿಯಿಂದ ಮೈಸೂರು ವಿ.ವಿ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ವಿ.ವಿ ವ್ಯಾಪ್ತಿಯ ಕಾಲೇಜುಗಳು, ಮಾನಸಗಂಗೋತ್ರಿಯಲ್ಲಿ ಪಿಎಚ್.ಡಿ. ಪ್ರವೇಶಾತಿ ಪಡೆದು ಸಂಶೋಧನೆ ಕೈಗೊಂಡಿರುವ ಸಂಶೋಧಕರುಗಳು 2026-27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡಲಾಗುವ ಶಿಷ್ಯವೇತನಕ್ಕೆ 96 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಮೈಸೂರು ವಿ.ವಿ ಕೇವಲ 20 ಸಂಶೋಧಕರುಗಳಿಗೆ ಮಾತ್ರ ಶಿಷ್ಯವೇತನ ಮಂಜೂರು ಮಾಡುವ ವಿದ್ಯಾರ್ಥಿ ವಿರೋಧಿ ಮಾನದಂಡ ನಿಗದಿ ಮಾಡಿದೆ. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಶಿಷ್ಯವೇತನ ರಹಿತವಾಗಿ ಪಿಎಚ್.ಡಿ. ಪದವಿ ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಕಿಡಿಕಾರಿದರು.

ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳಿಗೆ ವರ್ಷಕ್ಕೆ 23 ಕೋಟಿ ರೂ.ಗಳನ್ನು ಅನಾವಶ್ಯವಾಗಿ ನೀಡುತ್ತಿದ್ದು, ಇದು ವಿಶ್ವವಿದ್ಯಾನಿಲಯದ ಹಣ ಪೋಲಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಅಲ್ಲದೆ, ಈ ವರ್ಷದ ವಿಶ್ವವಿದ್ಯಾನಿಲಯದ ಬಜೆಟ್‌ನ ಒಟ್ಟು 400 ಕೋಟಿ ರೂ.ಗಳಲ್ಲಿ ನಿಯಮಾನುಸಾರ ಶೇ.24ರಷ್ಟನ್ನು ಎಸ್‌ಸಿ, ಎಸ್‌ಟಿ ಉಪಯೋಜನೆಗಳಿಗೆ ಮೀಸಲಿಟ್ಟರೆ 96-97 ಕೋಟಿ ರೂ. ನೀಡಬೇಕಾಗುತ್ತದೆ. ಆದರೆ, ವಿಶ್ವವಿದ್ಯಾನಿಲಯ ಎಸ್‌ಸಿ, ಎಸ್‌ಟಿ ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ. ಕೂಡಲೇ ಪ್ರಸ್ತುತ ಸಾಲಿನಲ್ಲಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಸಂಶೋಧಕರುಗಳಿಗೂ ತಾರತಮ್ಯವಿಲ್ಲದೆ ಶಿಷ್ಯವೇತನವನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಂಚಾಲಕರಾದ ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್, ದೀಪ, ಮೌನ ದೊರೆ, ಧೀರಜ್, ನವೀನ್, ಬಿ.ಎನ್.ವಿಶಾಖ್, ಸಣ್ಣಮಾದು, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!