ಮೈಸೂರು : ವಿಕಸಿತ ಭಾರತದ ಕನಸು ನನಸಾಗಲಿದೆ. ಭಾರತದ ಸಂಪೂರ್ಣ ಆರ್ಥಿಕ ಅಭಿವೃದ್ಧಿ ರಾಷ್ಟ್ರವಾಗಿಸಲು ಮುನ್ನಡೆಯುತ್ತಿದ್ದು, ಅಂತಹ ಅಭಿವೃದ್ಧಿಗೆ ತಳಹದಿಯಾಗಿ ಭಾರತೀಯ ಸಂಸ್ಕೃತಿ ಮತ್ತು ಮನೋಶಕ್ತಿಯಿದೆ. ಅದಕ್ಕೆ ಕಾರಣ ಯೋಗವೇ ಹೊರತು ಬೇರೇನೂ ಅಲ್ಲ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದರು.
ನಗರದ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಯೋಗ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ೫೦ನೇ ಸುವರ್ಣ ಸಂಭ್ರಮ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಘ, ಗ್ಲೋಬಲ್ ಯೋಗ -ರಮ್, ಮೈಸೂರು ಜಿಲ್ಲಾ ಯೋಗ ಕ್ರೀಡಾ ಫೌಂಡೇಷನ್ ಹಾಗೂ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸೀನಿಯರ್ ನ್ಯಾಷನಲ್ ಯೋಗ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯೋಗ ಜಾಗತಿಕ ಹರಡುವಿಕೆಯ ಮೇಲೆ ಪ್ರಭಾವ ಬೀರಿ, ಅದರ ಅಭ್ಯಾಸದಿಂದ ಕ್ರಿಯಾತ್ಮಕವಾಗಿ ವಿಕಸನಗೊಂಡಿದೆ. ಭಾರತೀಯರು ತಮ್ಮ ಜೀವನವನ್ನು ನಡೆಸುವ ವಿಧಾನ ಮತ್ತು ಆಧ್ಯಾತ್ಮಿಕತೆಯು ಯೋಗಾಭ್ಯಾಸದಿಂದ, ಯೋಗದ ತಾತ್ವಿಕ ಆಧಾರದಿಂದ ಬಂದಿದೆ. ಈ ಅಂಶವನ್ನು ನಾವು ಆ ತಿಳುವಳಿಕೆಯೊಂದಿಗೆ ಮುಂದುವರಿಯಬೇಕು ಎಂದು ಸೂಚಿಸಿದರು.
ಯೋಗಾಭ್ಯಾಸಕ್ಕೆ ಕ್ರಿಯಾತ್ಮಕ ಮತ್ತು ಚಲನಶೀಲತೆ ಬಹಳ ಮುಖ್ಯವಾದರೂ, ಹೆಚ್ಚು ಚೈತನ್ಯಶೀಲ ಮತ್ತು ದೃಢವಾದ ದೈಹಿಕ ದೇಹವನ್ನಿಟ್ಟುಕೊಳ್ಳಲು, ನಾವು ಸಹಿಷ್ಣುತೆ ಮತ್ತು ಶಕ್ತಿಯ ಅಂಶಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಸ್ಪರ್ಧೆಗಳೂ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುವುದಕ್ಕಾಗಿಯೇ ಅನುಕರವಾಗಿವೆ. ಆ ದೃಷ್ಟಿಯಿಂದ ನಾವೆಲ್ಲರೂ ದೇಶದಲ್ಲಿ ಉತ್ತಮ ಯೋಗಾಭ್ಯಾಸಿಗಳನ್ನು ಹೊಂದಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇದನ್ನು ಓದಿ : ಯೋಗಾಭ್ಯಾಸ ಓದಿಗೆ ಪೂರಕ: ನಂದೀಶ್
ಆಧುನಿಕ ಯೋಗ ಹುಟ್ಟಿದ್ದು ಮೈಸೂರಿನಲ್ಲಿ. ಅದರ ಭಾಗವಾಗಿ ಆಧುನಿಕ ಯೋಗ ಪಿತಾಮಹಾ ಟಿ. ಕೃಷ್ಣಮಾಚಾರ್ಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಸಮಯದಲ್ಲಿ ಸ್ಥಾಪಕ ಕುಲಪತಿಯಾಗಿದ್ದರು. ಬಳಿಕ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜು ಯೋಗಾಭ್ಯಾಸ ತರಬೇತಿ ಆರಂಭಿಸಿದ ಟಿ. ಕೃಷ್ಣಮಾಚಾರ್ಯರು, ಬಿ.ಕೆ. ಸೆಂಗಾರ್ ಮತ್ತು ಶ್ರೀ ಪತಾಬಿ ಜಾಯ್ಸ್ ಅವರಿಗೆ ಯೋಗ ತರಬೇತಿ ನೀಡಿ ಯೋಗದಲ್ಲಿ ಮೈಸೂರನ್ನು ಅಂತರರಾಷ್ಟೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಶಾಸಕ ಜಿ.ಟಿ ದೇವೇಗೌಡ ಮಾತನಾಡಿ, ಯೋಗ ಅಭ್ಯಾಸದಿಂದ ಏಕಾಗ್ರತೆ ಹಾಗೂ ಮನಸ್ಸಿನ ಶಾಂತಿ ಹೆಚ್ಚು ವೃದ್ಧಿಸುತ್ತದೆ. ಯೋಗ ದೈಹಿಕವಾಗಿ, ಮಾನಸಿಕವಾಗಿ, ಮನುಷ್ಯನ ಮಾನವೀಯ ಗುಣಗಳ ಕಡೆಗೆ ಒತ್ತು ನೀಡುತ್ತದೆ ಎಂದರು.
ಇವತ್ತು ಯೋಗದಲ್ಲಿ ಪರಿಣಿತಿ ಪಡೆದವರಿಗೆ ಪ್ರತಿಭಾ ಪುರಸ್ಕಾರ ಪಡೆಯುವಂತಹ ಹಲವು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಯುವಕರು ವಿದ್ಯಾರ್ಥಿ ಜೀವನದಿಂದಲೇ ಯೋಗ ಅಭ್ಯಾಸ ಮಾಡುವ ಕಡೆಗೆ ಒತ್ತು ನೀಡಬೇಕು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸಿ ಕಡ್ಡಾಯ ಶಿಕ್ಷಣವನ್ನಾಗಿಸಲು ಕಾರ್ಯಚಟುವಟಿಕೆಗಳು ನಡೆದಿದ್ದವು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಆಶೀರ್ವಚನ ನೀಡಿದ ಮೈಸೂರು ಅಧ್ವೈತ ದತ್ತಪೀಠಂನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಇಂದು ಎಲ್ಲರು ಅನಗತ್ಯವಾದ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗುತಿದ್ದಾರೆ ಇದಕ್ಕೆಲ್ಲ ಯೋಗಾ ಮದ್ದಾಗಿದೆ. ಚಿಕ್ಕ ವಿಚಾರಗಳಿಗೂ ಕೊಪಗೊಳ್ಳುವುದರಿಂದ ಉತ್ತಮವಾದ ಉಸಿರಾಟದ ಕ್ರಿಯೆಯನ್ನುಕಳೆದುಕೊಳ್ಳುತ್ಯೇವೆ. ಎಲ್ಲಾ ವಿಚಾರಗಳಿಗೂ ಕೊಪ ಮಾಡಿಕೊಳ್ಳುವ, ಉದ್ವೇಗಕ್ಕೊಳಗಾಗುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನಶಾಂತಿಗಾಗಿ ಮಾನಸಿಕವ್ಯಾಯಾಮಕ್ಕಾಗಿ ಧ್ಯಾನದ ಅಗತ್ಯವಿದೆ. ಸಾಂಸಾರಿಕ ಜೀವನದಲ್ಲಿ ಸ್ವಾಸ್ಥ್ಯ ಜೀವನ ನಡೆಸಲು ಯೋಗ ಸಹಕಾರಿಯಾಗಿದೆ. ಕಾಲಾಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿಬೇಕು. ಉತ್ತಮ ಜೀವನಕ್ಕೆ ಏಕಾಗ್ರತೆ ಬಹಳ ಮುಖ್ಯವಾಗಿದ್ದು, ಯೋಗದ ಮೊರೆಹೋಗಬೇಕು. ಆತ್ಮ ಅರ್ಪಣೆ ಮಾಡಿಕೊಳ್ಳಬೇಕು ಅದಕ್ಕೂ ಮೊದಲು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು. ೧೯೭೬ ರಿಂದ ನಾನು ಯೋಗವನ್ನು ಪರಿಚಯಿಸಿದೆ. ಮೊದಲು ಭಾರತದಲ್ಲಿ ಅಪಹಾಸ್ಯ ಮಾಡಿದರು. ನಂತರ ವಿದೇಶದಾದ್ಯಂತ ಯೋಗದ ಅಭ್ಯಾಸಗಳನ್ನು ಹೇಳಿಕೊಡುವ ಕೆಲಸ ಮಾಡಿದೆ. ಇದೀಗ ಭಾರತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಯೋಗಕ್ಕೆ ಹೆಚ್ಚು ಮಹತ್ವ ನೀಡುವ ಕೆಲಸ ಮಾಡಿ, ಕೊಡುಗೆ ನೀಡಿದ್ದಾರೆ. ಅವರ ಜತೆಗೆ ನಾವು ಅದನ್ನು ಉಳಿಸಿಕೊಂಡು ಮುನ್ನಡೆಯಬೇಕಿದೆ ಎಂದು ತಿಳಿಸಿದರು.
ಅಧ್ವೈತ ದತ್ತಪೀಠಂನ ದತ್ತ ವಿಜಯಾನಂದ ಸ್ವಾಮೀಜಿ, ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಅಶೋಕ್ ಕುಮಾರ್ ಅಗರವಾಲ್, ಸಿಇಒ ಇಂದು ಅಗರ್ವಾಲ್, ಅಧ್ಯಕ್ಷ ಡಾ.ಅನಿವೃದ್ಧ್ ಗುಪ್ತಾ, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ಮೈಸೂರು ಮಂಜುನಾಥ್, ವಾಸುದೇವ್ ಭಟ್, ಶ್ರೀಹರಿ, ಡಾ ಗುರುರಾಜ್, ಕೆ.ಪ್ರಭು, ಪ್ರೊ.ಎಂ.ಜಿ ಅಮರನಾಥ್, ಡಾ.ಪಿ.ಎನ್ ಗಣೇಶ್ ಕುಮಾರ್, ಎ.ನಟರಾಜು ಉಪಸ್ಥಿತರಿದ್ದರು.





