Mysore
23
overcast clouds

Social Media

ಭಾನುವಾರ, 17 ಮೇ 2026
Light
Dark

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕಳೆದ ಮೂರು ದಿನಗಳಿಂದ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದಿದ್ದಾರೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಎಣ್ಣೆ ಮಜ್ಜನ ಸೇವೆ, ಶನಿವಾರ ಅಮಾವಾಸ್ಯೆ ಹಾಗೂ ವಾರದ ರಜಾ ದಿನವಾದ ಭಾನುವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ ತಮ್ಮ ಹರಕೆ ಸಲ್ಲಿಸಿದ್ದಾರೆ.

ವಾರಾಂತ್ಯದ ದಿನಗಳಾದ ಶನಿವಾರ ಅಮಾವಾಸ್ಯೆ, ಹಾಗೂ ಮುಂದಿನ ವಾರ ಶಾಲೆಗಳು ಪ್ರಾರಂಭವಾಗುತ್ತಿರುವುದರಿಂದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಮುಂಜಾನೆಯು ಸಹ ಸಂಪ್ರದಾಯದಂತೆ ಬೆಳಗಿನಿಂದಲೇ ವಿಶೇಷ ಪೂಜೆಗಳು ವಿಧಿ ವಿಧಾನಗಳೊಂದಿಗೆ ನೆರವೇರಿತು. ಸ್ವಾಮಿಗೆ ಸಂಕಲ್ಪಾಧಿ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕವನ್ನು ನೆರವೇರಿಸಿದರು. 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ ಯನ್ನು ನೆರವೇರಿಸಲಾಯಿತು. ನವರತ್ನ ಕೀರಿಟಧಾರಣೆಯೊಂದಿಗೆ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಧೂಪ, ದೀಪದಾರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು.

ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲ ಭಕ್ತರು ಮುಡಿಸೇವೆ, ಉರುಳು ಸೇವೆ, ಪಂಜಿನ ಸೇವೆ, ಚಿನ್ನದ ತೇರು, ಬೆಳ್ಳಿ ತೇರು, ಹುಲಿ, ರುದ್ರಾಕ್ಷಿ ಹಾಗೂ ಬಸವ ವಾಹನದ ಉತ್ಸವಾದಿ ಸೇವೆಗಳಲ್ಲಿ ಭಾಗಿಯಾಗಿ ದಂಡಿನ ಕೋಲನ್ನು ಹೊತ್ತು ದೇಗುಲದ ಸುತ್ತ ಸಾಗುವುದರ ಮೂಲಕ ಹರಕೆ ತೀರಿಸಿದರು. ಇನ್ನು ಕೆಲ ಭಕ್ತರು ದೇಗುಲದ ಮುಂಭಾಗ ಗಂಧದಕಡ್ಡಿ, ಕರ್ಪೂರ ಹಚ್ಚಿ, ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು.

1.50 ಲಕ್ಷ ಲಾಡು ಮಾರಾಟ: ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಶನಿವಾರ ಭಾನುವಾರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಒಂದುವರೆ ಲಕ್ಷ ಲಾಡು ಪ್ರಸಾದವನ್ನು ಖರೀದಿಸಿದ್ದಾರೆ. ಸೋಮವಾರವು ಸಹ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ವಿವಿಧ ಉತ್ಸವಗಳಿಂದ 98 ಲಕ್ಷ ರೂ. ಆದಾಯ: ಬೆಟ್ಟಕ್ಕೆ ಆಗಮಿಸಿದ್ದ ಭಕ್ತಾದಿಗಳು ಹರಕೆ ರೂಪದ ಬಂಗಾರದ ರಥೋತ್ಸವ 600, ಬೆಳ್ಳಿ ರಥೋತ್ಸವ 63, ಹುಲಿವಾಹನ 1908, ಬಸವ ವಾಹನ 484, ರುದ್ರಾಕ್ಷಿ ವಾಹನ 165 ಉತ್ಸವಗಳಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದು, 26,95,513 ರೂ. ಆದಾಯ ಬಂದಿದೆ.

ಈ ಪೈಕಿ ಬಂಗಾರದ ರಥೋತ್ಸವದಿಂದ 18,00,600 ರೂ., ಬೆಳ್ಳಿ ರಥೋತ್ಸವದಿಂದ 1,26,063 ರೂ., ಹುಲಿ ವಾಹನದಿಂದ 5,73,400, ಬಸವ ವಾಹನದಿಂದ 1,46,200 ರುದ್ರಾಕ್ಷಿ ವಾಹನದಿಂದ 49,5000 ರೂ. ಸೇರಿ ಒಟ್ಟಾರೆ26 ಲಕ್ಷ ರೂ ಆದಾಯ ಬಂದಿದೆ.

ಉಳಿದಂತೆ ಮಾಹಿತಿ ಕೇಂದ್ರ, ಲಾಡು ಮಾರಾಟ, ತೀರ್ಥ ಪ್ರಸಾದ, ಕಲ್ಲು ಸಕ್ಕರೆ ಬ್ಯಾಗ್, ಅಕ್ಕಿ ಸೇವೆ, ಪುದುವಟ್ಟು ವಿಶೇಷ ಪ್ರವೇಶ ಶುಲ್ಕ, ಜನ ವಾಹನ, ನಗದು ಕಾಣಿಕೆ ಇತರೆ ಸೇವೆಗಳಿಂದ 98 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.

ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರಿಗೆ ನಿರಂತರ ದಾಸೋಹ, ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು.

Tags:
error: Content is protected !!