ಮೈಸೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿರುವ ಪ್ರಕರಣ ಖಂಡಿಸಿ ಮೈಸೂರಿನ ವಿಜಯನಗರದ ನಿವಾಸಿ ಕಾರ್ತಿಕ್ ಎಂಬುವವರು ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಮುಂಭಾಗ ಇರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರ್ತಿಕ್ ಬೆಳಿಗ್ಗೆ 9 ಗಂಟೆಯಿಂದಲೂ ನಿಲುಗಾಲಲ್ಲೇ ನಿಂತು ಉಗ್ರರ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಭಾರತೀಯರಿಗೆ ರಕ್ಷಣೆ ಎಲ್ಲಿ.? ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾರ್ತಿಕ್, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ದಿಟ್ಟ ಕ್ರಮ ತೆಗೆದುಕೊಳ್ಳಬೇಕು. ದೇಶದ ರಕ್ಷಣೆಗೆ ಪ್ರತಿಯೊಬ್ಬ ಭಾರತೀಯನು ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗಟ್ಟಾಗಬೇಕು. ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.





