ಕಳೆದ ವರ್ಷ ‘ದ್ವಂದ್ವ’ ಚಿತ್ರದಲ್ಲಿ ಕನ್ನಡಿಗರಿಗೆ ಮುಖ ತೋರಿಸಿದ್ದ ತಿಲಕ್, ಈಗ ಇನ್ನೊಂದು ಹೊಸ ಚಿತ್ರದೊಂದಿಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರು ‘ಉಸಿರು’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರವನ್ನು ಆರ್.ಎಸ್.ಪಿ. ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ಲಕ್ಷ್ಮಿ ಹರೀಶ್ ನಿರ್ಮಿಸಿದರೆ, ಪ್ರಭಾಕರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶ್ರೀನಗರ ಕಿಟ್ಟಿ ಮತ್ತು ರವಿ ಆರ್. ಗರಣಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬ ಆತಂಕಕಾರಿ ವ್ಯಕ್ತಿಯಿಂದ ತನ್ನ ಹೆಂಡತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ‘ಉಸಿರು’ ಚಿತ್ರದ ಕಥೆಯಾಗಿದ್ದು, ಈ ಚಿತ್ರಕ್ಕಾಗಿ ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ನಿರ್ದೇಶಕರಾಗಬೇಕೆಂಬುದು ಪ್ರಭಾಕರ್ ಅವರ 12 ವರ್ಷಗಳ ಕನಸಂತೆ. ‘ಈ ಹಿಂದೆ ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದು ನನ್ನ ನಿರ್ದೇಶನದ ಪ್ರಥಮ ಚಿತ್ರ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಚಿತ್ರದಲ್ಲಿ ಎಲ್ಲಾ ರೀತಿಯ ಎಮೋಶನ್ಸ್ ಇದ್ದು, ಪ್ರತಿ ಪಾತ್ರಕ್ಕೂ ಅದರದೇ ಆದ ಗುರುತು ಇರುತ್ತದೆ, ಯಾವ ಪಾತ್ರವೂ ಹೀಗೆ ಬಂದು ಹೋಗುವುದಲ್ಲ. ಚಿತ್ರಕ್ಕೆ ‘07.08.09’ ಎಂಬ ಅಡಿಬರಹವಿದೆ. ಇಡೀ ಚಿತ್ರ ಈ ವಿಷಯದ ಮೇಲೆ ಸುತ್ತುತ್ತದೆ. ಈ ಚಿತ್ರದಲ್ಲಿ ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ’ ಎಂದು ಹೇಳಿದರು.
ಈ ತರಹದ ಪರಿಕಲ್ಪನೆ ತಾನೆಲ್ಲೂ ಕೇಳಿರಲಿಲ್ಲ ಎನ್ನುವ ತಿಲಕ್, ‘07.08.09 ಎನ್ನುವ ಕೋಡ್ ವರ್ಡ್ ಚಿತ್ರದಲ್ಲಿ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಈ ಚಿತ್ರ ಪ್ರೇಕ್‍ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರೆ, ‘ನನ್ನ ಪಾತ್ರಕ್ಕೆ ಹಲವಾರು ಆಯಾಮಗಳಿವೆ ಇದೆ. ನನ್ನ ಪಾತ್ರದಿಂದ ಚಿತ್ರಕಥೆಗೆ ದೊಡ್ಡ ತಿರುವು ಸಿಗುತ್ತದೆ’ ಎಂದು ನಾಯಕಿ ಪ್ರಿಯಾ ಹೆಗ್ಡೆ.
ನಿರ್ಮಾಪಕಿ ಲಕ್ಷ್ಮಿ ಹರೀಶ್ ಮಾತನಾಡಿ, ‘ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಅಂಶವನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಈ ಕಥೆ ಬಹಳ ಇಷ್ಟವಾಗಿ ಚಿತ್ರ ಪ್ರಾರಂಭಿಸಿದೆವು. ಚಿತ್ರದ ಡಿಐ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದರು.
‘ಉಸಿರು’ ಚಿತ್ರಕ್ಕೆ ಗಣೇಶ್ ನಾರಾಯಣನ್ ಸಂಗೀತ ಸಂಯೋಜಿಸಿದರೆ, ಭೈರವರಾಮ ಸಂಭಾಷಣೆ ರಚಿಸಿದ್ದಾರೆ.





