ಈಗಾಗಲೇ ಗಣೇಶ್ ಅಭಿನಯದ ಹೊಸ ಚಿತ್ರದ ಮುಹೂರ್ತ ಕೆಲವು ತಿಂಗಳುಗಳ ಹಿಂದೆಯೇ ಆಗಿದ್ದು, ಚಿತ್ರದ ಒಂದು ಹಂತದ ಚಿತ್ರೀಕರಣ ಸಹ ಆಗಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಚಿತ್ರದ ಶೀರ್ಷಿಕೆಯನ್ನು ಘೋಷಿಸಿರಲಿಲ್ಲ. ಇಂದು ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೆಸರನ್ನು ಅನಾವರಣ ಮಾಡಲಾಗಿದ್ದು, ಚಿತ್ರಕ್ಕೆ ‘ಡಿಜಾಂಗೋ ಕೃಷ್ಣಮೂರ್ತಿ’ ಎಂಬ ಹೆಸರನ್ನು ಇಡಲಾಗಿದೆ.
ಎಸ್.ಎನ್.ಟಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಎಸ್.ಸಿ. ರವಿ ಭದ್ರಾವತಿ ಅವರು ನಿರ್ಮಿಸುತ್ತಿರುವ, ಅರಸು ಅಂತಾರೆ ನಿರ್ದೇಶಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಅನಾವರಣವು ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಆಗಿದೆ. ಚಿತ್ರತಂಡವು ಚಿತ್ರದ ಹೆಸರು ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗಣೇಶ್ ಅವರಿಗೆ ಶುಭ ಕೋರಿದೆ.
‘ಡಿಜಾಂಗೋ ಕೃಷ್ಣಮೂರ್ತಿ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾಗಿದ್ದು, ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.
ಈ ಚಿತ್ರದಲ್ಲಿ ಗಣೇಶ್‍ಗೆ ನಾಯಕಿಯಾಗಿ ‘ಹನುಮಾನ್’ ಖ್ಯಾತಿಯ ಅಮೃತ ಅಯ್ಯರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಜ್ ಸುಧೀ, ಅರುಣ ಬಾಲರಾಜ್ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ. ರಾವ್ ಸಂಕಲನವಿದೆ.





