ಸರಿಯಾಗಿ ಒಂದು ವರ್ಷದ ಹಿಂದೆ ‘ಎಲ್ಟು ಮುತ್ತಾ’ ಎಂಬ ಚಿತ್ರದ ಶೀರ್ಷಿಕೆ ಅನಾವರಣದ ಜೊತೆಗೆ ನಿರ್ಮಾಣ ಸಂಸ್ಥೆಯ ಉದ್ಘಾಟನೆ ನಡೆದಿತ್ತು. ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರು ಪತ್ನಿ ಶೈಲಜಾ ವಿಜಯ್ ಕಿರಗಂದೂರು, ಗಾಯಕಿ ಸಂಗೀತ ಕಟ್ಟಿ, ಎ.ಎಂ.ಆರ್ ರಮೇಶ್ ಸಮಾರಂಭಕ್ಕೆ ಬಂದು ಹೊಸಬರ ಕನಸಿಗೆ ಬೆಂಬಲವಾಗಿ ನಿಂತಿದ್ದರು.
ಈಗ ಒಂದು ವರ್ಷದ ನಂತರ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇದನ್ನು ಹೇಳಲೆಂದೇ, ಚಿತ್ರತಂಡದವರು ಮಾಧ್ಯಮದವರ ಮುಂದೆ ಬಂದಿದ್ದರು. ಮೊದಲು ಮಾತನಾಡಿದ ನಿರ್ಮಾಪಕ ಸತ್ಯ ಶ್ರೀನಿವಾಸನ್, ‘ಒಳ್ಳೆಯ ಸಿನಿಮಾ ಮಾಡಬೇಕು ಮತ್ತು ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಬೇಕು ಎಂಬ ಎರಡು ಕಾರಣಗಳಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದೆವು. ಮೊದಲ ಹಂತವಾಗಿ ‘ಎಲ್ಟು ಮುತ್ತಾ’ ಚಿತ್ರ ಮಾಡಿದ್ದೇವೆ. ಸುಮಾರು 50 ದಿನಗಳ ಕಾಲ ಕೊಡಗು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:- ‘ಎಡಗೈ’ ಜೊತಯಾದ ‘ಬ್ಲಿಂಕ್’ ಮತ್ತು ‘ಶಾಖಹಾರಿ’ ನಿರ್ಮಾಪಕರು
ನಿರ್ದೇಶಕರಾದ ರಾ. ಸೂರ್ಯ ಮಾತನಾಡಿ, ‘ಎಲ್ಟು ಮುತ್ತಾ ಎಂಬುದು ಎರಡು ಪಾತ್ರಗಳ ಸುತ್ತ ನಡೆಯುವ ಕಥೆ. ಟೆಕ್ನಿಷನ್ ಆಗಬೇಕು ಎಂದು ಬಂದವರು ಈ ಚಿತ್ರದಲ್ಲಿ ನಟಿಸಿದ್ದೇವೆ’ ಎಂದರು.
ನಾಯಕ ಶೌರ್ಯ ಪ್ರತಾಪ್ ಮಾತನಾಡಿ, ‘ನಮ್ಮದು ಹೊಸತಂಡ. ಜನ ದುಡ್ಡು ಕೊಟ್ಟು ನಮ್ಮ ಚಿತ್ರವನ್ನು ಏಕೆ ನೋಡಬೇಕು? ಎಂದು ನಾವೇ ಪ್ರಶ್ನೆಗಳನ್ನು ಹಾಕಿಕೊಂಡಿದ್ದೇವೆ. ನಮ್ಮನ್ನು ನೋಡಿ ಜನ ಚಿತ್ರಮಂದಿರಕ್ಕೆ ಬರುವುದು ಬೇಡ. ಚಿತ್ರದ ಕಂಟೆಂಟ್ ನೋಡಿ ಬರಲಿ’ ಎಂದರು.
ಶೌರ್ಯ ಪ್ರತಾಪ್‍ಗೆ ನಾಯಕಿಯಾಗಿ ಪ್ರಿಯಾಂಕಾ ಮಳಲಿ ನಟಿಸಿದ್ದು, ಮಿಕ್ಕಂತೆ ‘ಕಾಕ್ರೋಚ್’ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡಿಲ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣವಿದೆ. ಈ ಚಿತ್ರವನ್ನು ಹೈ5 ಸ್ಟುಡಿಯೋಸ್ ಮೂಲಕ ನಿರ್ದೇಶಕ ರಾ ಸೂರ್ಯ, ಶೌರ್ಯ ಪ್ರತಾಪ್, ಪ್ರಸನ್ನ ಕೇಶವ, ರುಹಾನ್ ಆರ್ಯ ಹಾಗೂ ಬಸವರಾಜೇಶ್ವರಿ ಭೂಮರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.





