ಮೂರು ವರ್ಷಗಳ ಹಿಂದೆ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಟಿಸಿದ ನಂತರ ಇನ್ನು ನಟಿಸುವುದಿಲ್ಲ ಎಂದು ಬಾಲಿವುಡ್ ನಟ ಆಮೀರ್ ಖಾನ್, ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆ ನಂತರ ‘ಸಿತಾರೆ ಜಮೀನ್ ಪರ್’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಈ ಮಧ್ಯೆ, ಆಮೀರ್ ಖಾನ್, ಸಿಖ್ಖರ ಧರ್ಮ ಗುರು ಗುರು ನಾನಕ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾದ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಅಮೀರ್, ಈ ಚಿತ್ರದಲ್ಲಿ ಗುರು ನಾನಾಕ್ ಅವರ ಪಾತ್ರ ಮಾಡುತ್ತಿದ್ದಾರೆ ಮತ್ತು ಬಹುಶಃ ಅದೇ ಅವರ ಮುಂದಿನ ಚಿತ್ರವಾಗಲಿದೆ ಎಂದು ಅಭಿಮಾನಿಗಳು ಅಂದಾಜಿಸಿದ್ದರು. ಆದರೆ, ತಾನು ಗುರು ನಾನಕ್ ಸಿನಿಮಾ ಮಾಡುತ್ತಿಲ್ಲ ಎಂದು ಆಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ವಿಷಯವೇನೆಂದರೆ, ಆಮೀರ್ ಖಾನ್ ಅವರನ್ನು ಗುರು ನಾನಕ್ ಪಾತ್ರದಲ್ಲಿ AI ತಂತ್ರಜ್ಞಾನದ ಮೂಲಕ ಸೃಷ್ಟಿಸಿ, ನಕಲಿ ಪೋಸ್ಟರ್ ಮಾಡಿ, ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಪರ ವಿರೋಧದ ಚರ್ಚೆ ಶುರುವಾಗಿತ್ತು.
ಯಾವಾಗ ಈ ವಿಷಯವು ವಿವಾದದ ಮಟ್ಟಕ್ಕೇರಿತೋ, ಆಗ ಆಮೀರ್ ಖಾನ್ ತಮ್ಮ ಪ್ರಚಾರಕರ್ತರ ತಂಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾನು ಗುರು ನಾನಕ್ ಸಿನಿಮಾ ಮಾಡುತ್ತಿಲ್ಲ. ಇದೀಗ ಹರಿದಾಡ್ತಿರೋದು AI ನಿರ್ಮಿತ ಟೀಸರ್ ಆಗಿದೆ. ಅದು ನಕಲಿ ಪೋಸ್ಟರ್, ತನಗೂ ಇದಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ವಿವಾದಕ್ಕೆ ಆಮೀರ್ ಖಾನ್ ತೆರೆ ಎಳೆದಿದ್ದಾರೆ.
ಆಮೀರ್ ಖಾನ್ ಈ ಮಧ್ಯೆ, ಸನ್ನಿ ಡಿಯೋಲ್ ಅಭಿನಯದಲ್ಲಿ ‘ಲಾಹೋರ್ 1947’ ಎಂಬ ಚಿತ್ರವನ್ನು ತಮ್ಮ ಆಮೀರ್ ಖಾನ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಆ ಚಿತ್ರದಲ್ಲಿ ಅವರೂ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಚಿತ್ರವು ಮುಂದಿನ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ.