ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ರಾಜ್ಯಸಭೆಗೆ ಹೋಗಿ ಅಂತ ನನಗೆ ಹೇಳಿದ್ರು. ನಾನು ಬಹಳ ವಿನಮ್ರವಾಗಿ ಆಗಲ್ಲ ಅಂತ ಹೇಳಿದೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಅಂತ ಹೇಳಿದ್ದೇನೆಂದು ತಿಳಿಸಿದರು.
ನಾನು ರಾಜಕಾರಣಿ, ನನಗೆ ಸಂವಿಧಾನವೇ ಧರ್ಮವಾಗಿದೆ. ಮತದಾರರೇ ನಮ್ಮ ಅಭಿಮಾನಿ ದೇವರು ಕನ್ನಡ ನಾಡಿನ ಏಳು ಕೋಟಿ ಜನರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿತ್ತು ಎಂದರು.
ಹಳ್ಳಿಯಿಂದ ಬಂದವನು
ನಾನು ಹಳ್ಳಿಯಿಂದ ಬಂದವನು. ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ಸಿಎಂ ಆಗುತ್ತೇನೆ ಎಂಬ ಕನಸು ಕಂಡಿಲ್ಲ. ರಾಜ ಕಾರಣಕ್ಕೆ ಬಂದಿದ್ದು ಆಕಸ್ಮಿಕವಾಗಿತ್ತು. ರಾಜಕಾರಣಕ್ಕೆ ಬಂದಂದಿನಿಂದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೆ. ಸಂವಿಧಾನದಲ್ಲಿ ಅಪಾರ ಗೌರವ ಇಟ್ಟುಕೊಂಡವನು ಎಂದು ತಮ್ಮ ಬದ್ಧತೆಯನ್ನು ತಿಳಿಸಿದರು. ಎಂಟು ವರ್ಷ ಸಿಎಂ ಆಗಿದ್ದ, ಎರಡು ಬಾರಿ ವಿಪಕ್ಷ ನಾಯಕನಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ ಹಾಗಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ರಾಜ್ಯಪಾಲರು ಬಂದ ಬಳಿಕ ರಾಜೀನಾಮೆ ಅಂಗೀಕಾರ
ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ, ಅವರು ಯಾವಾಗ ರಾಜೀನಾಮೆ ಕೊಡುವಂತೆ ಸೂಚಿಸುತ್ತಾರೆ, ಅವಾಗ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಮೊನ್ನೆ ಹೈಕಮಾಂಡ್ ನಾಯಕರು ರಾಜೀನಾಮೆ ಕೊಡಿ ಎಂದಾಗ, ಗುರುವಾರ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಹಾಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜ್ಯಪಾಲರು ಬಂದ ಬಳಿಕ ನನ್ನ ರಾಜೀನಾಮೆ ಪತ್ರ ಅಂಗೀಕಾರ ಮಾಡ್ತಾರೆ ಎಂದು ಸಂಪೂರ್ಣ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ಮಾಡಲೇ ಬೇಕಾಗಿದೆ. ಅವರು ಯಾವ ಪ್ರಕ್ರಿಯೆ ಪಾಲನೆ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಒಂದು ಬಾರಿ ಸಿಎಂ ರಾಜೀನಾಮೆ ಕೊಟ್ಟ ಬಳಿಕ ಅಂಗೀಕಾರ ಮಾಡುವುದು ಅವರ ಜವಾಬ್ದಾರಿಯಾಗಿದೆ. ನಮ್ಮ ಪಕ್ಷ 135+1 ಸ್ಥಾನ ಪಡೆದಿದ್ದೇವೆ. ಜೊತೆಗೆ ಇಬ್ಬರು ಪಕ್ಷೇತರರ ಬೆಂಬಲ ಇದೆ. ಹಾಗಾಗಿ ನಾವು ಸಂಪೂರ್ಣ ಬಹುಮತ ಹೊಂದಿದ್ದೇವೆ. ಹಾಗಾಗಿ ಮುಂದಿನ ಸಿಎಂಗೆ ಅವಕಾಶ ಮಾಡಿ ಕೊಡಬೇಕಾಗಿದ್ದು, ಸಂವಿಧಾನ ಬದ್ಧವಾಗಿದೆ.
ಹೈಕಮಾಂಡ್‌ಗೆ ಧನ್ಯವಾದ
ಎರಡು ಬಾರಿ ಸಿಎಂ, ಎರಡು ಬಾರಿ ವಿಪಕ್ಷ ನಾಯಕನಾಗಿದ್ದೆ. ಈ ಅವಕಾಶ ಒದಗಿಸಿಕೊಟ್ಟ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಈ ಸಂದರ್ಭದಲ್ಲಿ ಅಪಾರ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ಸೇರಿದ್ದು 2006 ರಲ್ಲಿ. ಅಲ್ಲಿಂದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಶಾಸಕರು, ಲೋಕಸಭೆ, ರಾಜ್ಯಸಭೆ ಸದಸ್ಯರು ಪ್ರೀತಿ ನೀಡಿದ್ದಾರೆ ಹಾಗೂ ಅವಕಾಶವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎರಡು ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ನನ್ನ ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಎಲ್ಲಾ ರೀತಿಯಲ್ಲಿ ಸಹಕಾರ, ಪ್ರೀತಿ ನೀಡಿದ್ದಾರೆ. ಅದಕ್ಕೆ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ.
ಜನರಿಗೆ ಕೊಟ್ಟ ವಚನ ಈಡೇರಿಸಿದ್ದೇವೆ : ತಲಾ ಆದಾಯದಲ್ಲಿ ರಾಜ್ಯವೇ ನಂಬರ್ 1
ಇಡೀ ಸಮಾಜ ಸಮಾನತೆ, ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಅಂದುಕೊಂಡವನು. ಸಮಾನ ಅವಕಾಶ ಇಲ್ಲದೆ ಸಮಾಜದಲ್ಲಿ ಅಸಮಾನತೆ ಇದೆ. ಇದು ತೊಲಗಬೇಕಾದರೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಅದಕ್ಕಾಗಿ ನಮ್ಮ ಸರ್ಕಾರ ಎಲ್ಲರಿಗೂ ಸಮಾನ ಅವಕಾಶ ಕೊಡಿಸುವ ಪ್ರಯತ್ನ ನಡೆಸಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
2023 ರಲ್ಲಿ ಪ್ರಣಾಳಿಕೆಯಲ್ಲಿ 550 ಭರವಸೆ ಕೊಡಲಾಗಿತ್ತು. ಈ ಪೈಕಿ 300 ಭರವಸೆ ಈಡೇರಿಸಲಾಗಿದೆ. ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಐದು ಯೋಜನೆಯನ್ನು ಈಡೇರಿಸಿದ್ದೇವೆ. 1,40,000 ಕೋಟಿ ಹಣ ಖರ್ಚು ಮಾಡಲಾಗಿದೆ. ಜನತೆಗೆ ಕೊಟ್ಟ ಭರವಸೆ, ವಚನ ಈಡೇರಿಸುವ ಪ್ರಯತ್ನ ಮಾಡಿದ್ದೇವೆ. ನನಗೆ ಮತ್ತು ನನ್ನ ಪಕ್ಷಕ್ಕೆ ಸಂತೃಪ್ತಿ ಕೊಟ್ಟ ವಿಚಾರವಾಗಿದೆ. ಆದರೆ ನಮ್ಮ ಮೇಲೆ ಅಪಪ್ರಚಾರ ಮಾಡಲಾಯಿತು. ಪ್ರಧಾನಿ ಮೋದಿ ಕೂಡಾ ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸಿದ್ದರು. ಆದರೆ ಇದೀಗ ಗ್ಯಾರಂಟಿ ಜಾರಿಯಾದ ಬಳಿಕ ಕರ್ನಾಟಕ ದೇಶದಲ್ಲಿ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ.
ಸಾಲದ ಆರೋಪ ರಾಜಕೀಯ
ಸಿದ್ದರಾಮಯ್ಯ ರಾಜ್ಯದ ಮೇಲೆ ಸಾಲ ಮಾಡಿದ್ದಾರೆ ಎಂಬ ಆರೋಪ ಸುಳ್ಳು. ಇದು ರಾಜಕೀಯ ಆರೋಪ. ಆರ್ಥಿಕ ಶಿಸ್ತನ್ನು ನಾವು ಪಾಲನೆ ಮಾಡಿದ್ದೇವೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಅಡಿಯಲ್ಲಿ ಸಾಲ ಮಾಡಿದ್ದೇವೆ. ಶೇ 3 ರ ಮಾನದಂಡ ಮೀರಿಲ್ಲ ಎಂದರು.
ಸಿದ್ಧಾಂತದಲ್ಲಿ ರಾಜಿಯಾಗಿಲ್ಲ
ಅಧಿಕಾರ, ಹಣದ ಹಿಂದೆ ಹೋಗಿಲ್ಲ.ಆಸ್ತಿ ಪಾಸ್ತಿ ಮಾಡುವ ಯೋಚನೆ ಮಾಡಿಲ್ಲ ಮತದಾರ ದೇವರು ಅಧಿಕಾರ ಕೊಟ್ಟಿದ್ದಾರೆ, 50 ವರ್ಷಗಳ ಸುದೀರ್ಘ ರಾಜಕಾರಣ ಜೀವನ ನಡೆಸಿದ್ದೇನೆ. ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ರಾಜಕೀಯದಲ್ಲಿ ಜನಶಕ್ತಿ ಮಾತ್ರ ಉಳಿಸುತ್ತದೆ. ಹಾಗಾಗಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿ ಮಾಡಿಲ್ಲ. ಸಿದ್ದಾಂತದಲ್ಲಿ ರಾಜಿಯಾಗಿಲ್ಲ. ಮನುಷ್ಯನಿಗೆ ಬದುಕಿನ ಪ್ರಾಥಮಿಕ ಆದ್ಯತೆ ಕೊಡಿಸಬೇಕು ಎಂದು ನಂಬಿದ್ದೇನೆ. ಅದಕ್ಕಾಗಿ ಸಮಾಜದ ಎಲ್ಲಾ ಬಡವರಿಗೆ ಗ್ಯಾರಂಟಿ ಮೂಲಕ ಅನುಕೂಲ ಮಾಡಲಾಗಿದೆ. ಬರ ಬಂದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನೆಲ, ಜಲ, ಭಾಷೆ ವಿಚಾರವಾಗಿ ರಾಜಿ ಮಾಡಿಲ್ಲ ಎಂದರು. ಕೊನೆ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಲ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು.




