Mysore
32
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ವಾರೆ ನೋಟ: ಆತ್ಮಗಳ ಆತ್ಮನಿವೇದನೆ!!

-ಅಷ್ಟಾವಕ್ರಾ

ರುದ್ರಭೂಮಿ ಮತ್ತು ಖಬ್ರಿಸ್ತಾನ್ ನಿಂದ ಎರಡು ಆತ್ಮಗಳು ಸ್ವರ್ಗದತ್ತ ಹೊರಟಿದ್ದವು. ಇನ್ನೆನ್ನು ಸ್ವರ್ಗ ಬರೀ ಸಾವಿರ ಕಿ.ಮೀ. ದೂರದಲ್ಲಿದೆ ಎನ್ನುವಾಗ ಎರಡೂ ಆತ್ಮಗಳು ಮುಖಾಮುಖಿಯಾದವು!

ಏನಚ್ಚರಿ! ಎರಡೂ ಆತ್ಮಗಳಿಗೆ ಪರಸ್ಪರ ಪರಿಚಯ ಇದ್ದಂತಿತ್ತು. ನಗೆ ವಿನಿಮಯ ಮಾಡಿಕೊಂಡು ಜತೆಜತೆಗೆ ಸ್ವರ್ಗದ ಕಡೆಗೆ ಪ್ರಯಾಣ ಮುಂದುವರೆಸಿದವು.

ಖಬ್ರಿಸ್ತಾನ್ ಆತ್ಮ ಕೇಳಿತು, ‘ಲೇ ನೀನು ಪ್ರವೀಣ ಅಲ್ವೇನೋ?’ ಅಂತಾ. ರುದ್ರಭೂಮಿ ಆತ್ಮಕ್ಕೆ ಅಚ್ಚರಿ. ‘ಅದ್ಸರಿ, ನಾನೇ ಪ್ರವೀಣ ಅಂತಾ ನಿಂಗೆ ಹ್ಯಂಗೆ ಗೊತ್ತಾಯ್ತು?‘ ಅಂತ ಕೇಳಿತು.

‘ಅಯ್ಯೋ ನೀನು ಬಿಡು ಮಾರಾಟ, ಎಂಥಾ ಫೇಮಸ್ಸಾಗಿದ್ದಿ. ನಿನ್ ಫೋಟೋನಾ ಟೀವೀಲಿ, ಪೇಪರ್‌ನಲ್ಲಿ ನೋಡಿದ್ದೀನಿ. ಎಲ್ಲೆಲ್ಲೂ ನಿಂದೇ ವಿಷ್ಯ ನಿಂದೇ ಡಿಸ್ಕಷನ್ನು..’ ಅಂತ ಹೊಗಳಿತು ಖಬ್ರಿಸ್ತಾನ್ ಆತ್ಮ.
‘ನೀನು ಫಾಜಿಲ್ ಅಲ್ವಾ? ಏಯ್ ನೀನ್ ಕಮ್ಮೀನಾ ಮಾರಾಯ? ನಿಂದೂ ಪೇಪರ್‌ನಲ್ಲಿ ಫೋಟೋ ಬಂದಿದೆ. ಟಿವೀಲಿ ಕೂಡಾ ಪ್ರೈಮ್ ಟೇಮ್‌ನಲ್ಲಿ ಸುದ್ದಿ ಬಂದುಂಟು!’ ಅಂತಾ ಖುಷಿಯಾಗಿ ಹೇಳಿತು ರುದ್ರಭೂಮಿ ಆತ್ಮ.

‘ಎಂಥಾ ಸಾವು ಮಾರಾಯಾ ಎಲ್ಲಾ ಸತ್ತ ಮೇಲೆ ಬಂದಂದ್ದು ನೋಡು’ ಅಂತ ಖಬ್ರಿಸ್ತಾನ್ ಆತ್ಮ ಹೇಳಿತು.
ರುದ್ರಭೂಮಿ ಆತ್ಮ ಏನೂ ಪ್ರತಿಕ್ರಿಯಿಸಲಿಲ್ಲ. ಆತ್ಮಗಳ ಪ್ರಯಾಣ ಮುಂದುವರೆಯಿತು.

‘ಅಲ್ಲಾ ಮಾರಾಯಾ ನೀನ್ ಎಂತಾ ಮಾಡ್ಕೊಂಡಿದ್ದೆ?’ ಖಬ್ರಿಸ್ತಾನ್ ಆತ್ಮ ಕೇಳಿತು.
‘ನಾನು ಡ್ರೈವ್ಜರ್ ಆಗಿದ್ದೆ ಮಾರಾಯ..’ ಎಂದಿತು ರುದ್ರಭೂಮಿ ಆತ್ಮ. ‘ಏಯ್ ಎಂತಾ ಕೋಇನ್ಸಿಡೆಂಟು ನೋಡು.. ನಾನು ಕ್ಲೀನರ್ ಆಗಿದ್ದೆ’ ಅಂತಾ ಖುಷಿಯಾಗಿ ಹೇಳಿತು ಖಬ್ರಿಸ್ತಾನ್ ಆತ್ಮ.
‘ಹೌದು ಕಣೋ.. ನಂದು ನಿಂದು ಹೆಸರು ‘ಪ’ಕಾರದಿಂದಲೇ ಇದೆ. ನಾನು ಪ್ರವೀಣ. ನೀನು ಫಾಜಿಲ್. ನೀನು ಕರಾವಳಿ. ನಾನೂ ಕರಾವಳಿ. ಈಗ ನೋಡು ಮಾರಾಯ ಒಟ್ಟೊಟ್ಟಿಗೆ ಹೊರಟಿದ್ದೀವಿ ಸ್ವರ್ಗದತ್ತ. ನಾವಿಬ್ಬರೂ ಸಹಪಯಣಿಗರು’ ಎಂದು ಖುಷಿಯಾಗಿ ಹೇಳಿತು ರುದ್ರಭೂಮಿ ಆತ್ಮ.

‘ಮತ್ತೆ ನಿಂಗೆ ಗಾಯದ ನೋವು ಹಾಗೆ ಉಂಟಾ?’ ಅಂತ ಕೇಳಿತು.
‘ಹೌದು ಮಾರಾಯಾ ನೋವುಂಟು.. ಆದರೆ, ದೇಹಕ್ಕೆ ಆದ ನೋವು ಆ ಕ್ಷಣಕ್ಕೆ ಮುಗಿದೋಯ್ತು ಮಾರಾಯ. ಆದ್ರೆ ಮನಸ್ಸಿಗೆ ಆದ ನೋವು ಮಾತ್ರ ಕಡಿಮೆ ಆಗ್ತಾ ಇಲ್ಲ.. ಆ ನೋವಿಗೆ ಮದ್ದೇ ಇಲ್ಲವೇನೋ ಅನಿಸುತ್ತದೆ..’ ಅಂತ ಹೇಳಿತು.
‘ಬೇಜಾರಾಗಬೇಡ ಮಾರಾಯ ಇವೆಲ್ಲ ಇದ್ದಿದ್ದೇ ನಂಗೂ ಅದೇ ಫೀಲಿಂಗು ದೇಹದ ನೋವು ಆ ಕ್ಷಣಕ್ಕೆ ನಿಂತಿತು.. ಮನಸ್ಸಿಗಾಗಿರೋ ನೋವು ಹಾಗೆ ಇದೇ.. ನಾವಿಬ್ಬರೂ ಒಂದೇ ಊರಿನಿಂದ ಹೊರಟ ಸಹ ಪ್ರಯಣಿಗರು..’

‘ಏಯ್ ಪ್ರವೀಣ ನಿನ್ ಮನೆಗೆ ಸಿಎಂ ಬಂದಿದ್ರಂತೆ, ಸಮಾಧಾನ ಮಾಡಿ ಪರಿಹಾರ ಕೊಟ್ರಂತೆ ಗೊತ್ತಾಯ್ತಾ ಸುದ್ದಿ ನೋಡಿದ್ಯಾ?’

‘ಹೌದಪ್ಪ ಬಂದು ಹೋಗಿದ್ದಾರೆ.. ಸಾಂತ್ವನ ಹೇಳಿದ್ದಾರೆ.. ನೀನ್ ಏನ್ ಕಮ್ಮೀನಾ ಮಾರಾಯ ನಿಮ್ಮ ಮನೆ ಕೇವಲ ಒಬ್ಬ ಸಿಎಂ ಬರಲಿಲ್ಲ ಅಂತಾ ಬೇಜಾರ್ ಆಗಬೇಡಾ ತುಂಬಾ ಸಿಎಂಗಳು ಬಂದು ಹೋಗಿದ್ದಾರೆ’ ಅಂದ ರುದ್ರಭೂಮಿ ಆತ್ಮ ಸಮಾಧಾನ ಮಾಡಿತು.
‘ಯಾವ್ ಸಿಎಂ ಬಂದ್ ಹೋದ್ರು ಮಾರಾಯ ನಮ್ ಮನೆಗೆ ನಂಗೆ ಗೊತ್ತಿಲ್ವಲ್ಲಾ’ ಅಂತಾ ಖಬ್ರಿಸ್ತಾನ್ ಆತ್ಮ ಕೇಳಿತು.

‘ಏಯ್ ಸಿಎಂ ಅಂದ್ರೆ ’ಕಾಮನ್ ಮ್ಯಾನ್’ ಅಂತಾ. ನಿಮ್ ಮನೆಗೆ ಎಷ್ಟೆಲ್ಲಾ ಜನ ಬಂದಿದ್ರು ಜನ ಇದ್ರೆನೇ ಮಾರಾಯ ನಾಯಕರು ಹುಟ್ಟೋದು ನಿಮ್ಮನೆಗೆ ಸಾಮಾನ್ಯ ಜನ ಬಂದಿದ್ದಾರೆ ಅಂದ್ರೆ ನಾಯಕರು ಬಂದಿದ್ರು ಅಂತಾನೇ ಅರ್ಥ’ ಅಂತ ಮತ್ತೆ ಸಮಾಧಾನ ಹೇಳಿತು.

‘ಪ್ರವೀಣ ನೀನ್ ಪೆಟ್ರೋಲ್ ಗೆ ಎಷ್ಟು ಕೊಡ್ತೀಯಾ ಮಾರಾಯ?

‘ನೂರು ಚಿಲ್ಲರೆ ರೂಪಾಯಿ’.

‘ಮೊಸರಿಗೆ?’

’೨೨ ಇದ್ದದ್ದು ಈಗ ವಾರದಿಂದ ೨೪’

‘ಅಕ್ಕಿಗೆ’?

‘ಅದೂ ೫೦ ರೂಪಾಯಿ ಇದ್ದದ್ದು ವಾರದಿಂದ ೫೪ ರೂಪಾಯಿ..’

‘ಪ್ರವೀಣ ನಾನೂ ಅಷ್ಟೇ ಕೊಡ್ತೀನಿ ಮಾರಾಯ…
ನೀನು ಯಾರಿಗಾದ್ರು ರಕ್ತ ಕೊಟ್ಟಿದ್ದೀಯಾ?’

‘ಹೌದು ಕೊಟ್ಟಿದ್ದೀನಿ’

‘ಕಲರ್ ಯಾವ್ದ?’

‘ಕೆಂಪು’

‘ನಾನೂ ಕೊಟ್ಟಿದ್ದೀನಿ ನಂದೂ ಕೆಂಪೇ ಮಾರಾಯ…
ಆದ್ರೆ ಜನಾ ಯಾಕೆ ಹೊಡ್ತಾಡ್ತಾರೆ ನಿಂಗೆ ಗೊತ್ತಾ? ಖಬ್ರಿಸ್ತಾನ್ ಅತ್ಮ ಕೇಳಿತು.

‘ಅದು ಫೈವ್ ಟ್ರಿಲಿಯನ್ ಎಕಾನಮಿ ಪ್ರಶ್ನೆ ಸದ್ಯಕ್ಕೆ ಉತ್ತರ ಇಲ್ಲ ’ಎಂದಿತು ರುದ್ರಭೂಮಿ ಆತ್ಮ.

ರುದ್ರಭೂಮಿ ಮತ್ತು ಖಬ್ರಿಸ್ತಾನ್ ಆತ್ಮಗಳ ಮಾತುಕತೆ ಸಾಗಿತ್ತು.
ದೂರದಲ್ಲೆಲ್ಲೋ ಇನ್ನೂ ಎರಡು ಆತ್ಮಗಳು ಸ್ವರ್ಗದತ್ತ ವೇಗವಾಗಿ ಬರುವುದು ಕಾಣಿಸಿತು.
ರುದ್ರಭೂಮಿ ಆತ್ಮ- ಖಬ್ರಿಸ್ತಾನ್ ಆತ್ಮಗಳು ಹೊಸ ಆತ್ಮಗಳತ್ತ ಕೈಬೀಸಿ ಕರೆದವು.
‘ಬನ್ನಿ ನಮ್ಮೊಂದಿಗೆ ಸೇರಿಕೊಳ್ಳಿ ಒಟ್ಟಿಗೆ ಹೋಗೋಣ’ ಎಂದಿತು ಖಬ್ರಿಸ್ತಾನ್ ಆತ್ಮ. ಹೊಸ ಎರಡೂ ಅತ್ಮಗಳೂ ಕೂಡಿಕೊಂಡವು.

ರುದ್ರಭೂಮಿ ಆತ್ಮವು ಹೊಸ ಅತ್ಮಗಳನ್ನು ಗುರುತಿಸಿತು. ‘ನೀವಿಬ್ರೂ- ಫ್ಲೈಟ್ ಲೆಫ್ಟಿನೆಂಟ್ ಅದ್ವೈತ ಬಾಲ, ವಿಂಗ್ ಕಮಾಂಡರ್ ಎಂ. ರಾಣಾ ಅಲ್ವಾ?’ ಅಂತ ಕೇಳಿತು.

ಹೊಸ ಆತ್ಮಗಳಿಗೆ ಅಚ್ಚರಿ. ರುದ್ರಭೂಮಿ ಆತ್ಮ ಹೇಳಿತು. ‘ನಾನು ರಂಗ್ ದೇ ಬಸಂತಿ ಸಿನಿಮಾ ನೋಡಿದ್ದೀನಿ. ಮಿಗ್ ೨೧ ಅಪಘಾತ ಆಗೋದನ್ನು ಓದಿದ್ದೀನಿ’ ಅಂತಾ ಹೇಳಿತು.
ಎರಡೂ ಹೊಸ ಆತ್ಮಗಳು ಒಕ್ಕೊರಳಿಂದ ಹೇಳಿದವು- ನಮ್ಮದು ‘ಮೆಷಿನ್ ಎರರ್’ನಿಂದಾದ ಸಾವು !

ರುದ್ರಭೂಮಿ- ಖಬ್ರಿಸ್ತಾನ್ ಆತ್ಮಗಳೂ ಒಕ್ಕೊರಲಿಂದ ಹೇಳಿದವು- ನಮ್ಮದು ‘ಹ್ಯೂಮನ್ ಎರರ್’ನಿಂದಾದ ಸಾವು!

(ಚಿತ್ರಕೃಪೆ- ಡೈಲಿಟೈಮ್ಸ್)

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ