ಶುಭಾ ಖಟಾವಕರ ಮ್ಹೆತ್ರಸ್
ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ
ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ
೧೯೦೦ ರಿಂದ ೨೦೨೫ರವರೆಗೆ ೭ ಯುವ ಪೀಳಿಗೆಗಳ ಸಂಕ್ರಮಣ
೨ನೇ ವಿಶ್ವ ಯುದ್ಧದಲ್ಲಿ ಹೋರಾಡಿದ ‘ಜಿಐ’ ಯುವ ಸಮೂಹ
“ಪೊಲೀಸ್ ಅಂಕಲ್, ವಾಸ್ತೆಗುನಾ ಹುಯಿಯಾ?” ಎಂದು ಯುವತಿಯೊಬ್ಬಳು ಪೊಲೀಸ್ ಪೇದೆಯೊಬ್ಬನನ್ನು ಕೇಳುತ್ತಾಳೆ. ಆ ಪೇದೆ ತಬ್ಬಿಬ್ಬುಗೊಳ್ಳುತ್ತಾನೆ. ಇದು ‘ಜೆನ್ ಝೀ’ ಯ ಅಂತರ್ಜಾಲದ ಆಡು ಭಾಷೆಯ ವಾಕ್ಯ (ಸ್ಲ್ಯಾಂಗ್). ಆ ವಾಕ್ಯದ ಟ್ರೆಂಡ್ ಕೆಲವೇ ದಿನಗಳಲ್ಲಿ ಮುಗಿಯುತ್ತದೆ. ಇತ್ತೀಚೆಗೆ ಹೊಸದಿಲ್ಲಿಯ ಜಂತರ್ ಮಂಥರ್ ಹಾಗೂ ದೇಶದಾದ್ಯಂತ ಪಟ್ಟು ಬಿಡದೆ ಆಂದೋಲನ ನಡೆಸಿ ಭಾರತದ ಇತಿಹಾಸದಲ್ಲೇ ಅತ್ಯಂತ ಛಲವಾದಿ ಸರ್ಕಾರದ ತಲೆ ಬಾಗಿಸಿದ ‘ಜೆನ್ ಝೀ’ ತಲೆಮಾರಿನ ಯುವಕರು ಈಗ ಸುದ್ದಿಯಲ್ಲಿದ್ದಾರೆ. ಸಕ್ರಿಯ ಹೋರಾಟಕ್ಕೆ ಹೆಸರಾದ ಈ ಯುವ ಪೀಳಿಗೆಯು ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ.
ಪೀಳಿಗೆಗಳು ಎಂಬುದು ವಿಶಾಲ ಜನಸಂಖ್ಯಾ ಗುಂಪುಗಳನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಒಂದೇ ಅವಽಯಲ್ಲಿ ಜನಿಸಿದ ಮತ್ತು ಒಂದೇ ರೀತಿಯ ಐತಿಹಾಸಿಕ ಘಟನೆಗಳು, ತಂತ್ರಜ್ಞಾನ, ಆರ್ಥಿಕ ಪರಿಸ್ಥಿತಿಗಳು ಹಾಗೂ ಸಾಮಾಜಿಕ ಪ್ರವೃತ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಪರಿಗಣಿಸಲ್ಪಡುವ ಜನರು ಈ ಗುಂಪುಗಳಿಗೆ ಸೇರಿರುತ್ತಾರೆ.
ದ ಗ್ರೇಟೆಸ್ಟ್ ಜನರೇಶನ್: ೧೯೦೧- ೧೯೨೭ ರ ಕಾಲಾವಧಿಯಲ್ಲಿ ಹುಟ್ಟಿದ ಇವರು ‘ಶ್ರೇಷ್ಠ ಪೀಳಿಗೆ’ ಅಥವಾ ‘ಜಿಐ ಪೀಳಿಗೆ’ ಎಂದು ಕರೆಯಲ್ಪಡುತ್ತಾರೆ. ಮಹಾ ಆರ್ಥಿಕ ಕುಸಿತದ ಕಷ್ಟಗಳನ್ನು ಅನುಭವಿಸಿದ ನಂತರ ಅವರು ಎರಡನೇ ವಿಶ್ವಯುದ್ಧದಲ್ಲಿ ಹೋರಾಡಲು ತೆರಳಿದರು. ಪೀಳಿಗೆಯವರು ಜಾಝ್ ಮತ್ತು ಸ್ವಿಂಗ್ ಸಂಗೀತವನ್ನು ಜನಪ್ರಿಯಗೊಳಿಸಿದ್ದರು. ಈ ಪೀಳಿಗೆಯವರು ಅನುಭವಿಸಿದ ಐತಿಹಾಸಿಕ ಘಟನೆಗಳ ಪರಿಣಾಮವಾಗಿ, ಕುಟುಂಬವನ್ನು ಬೆಳೆಸುವ ಸವಾಲು ಕಠಿಣ ಪರಿಶ್ರಮ, ದೃಢತೆ ಮತ್ತು ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯದಂತಹ ಗುಣಗಳಿಗೆ ಹೆಚ್ಚಿನ ಮಹತ್ವ ನೀಡಿತು. ಈಗ ಈ ತಲೆಮಾರಿನ ಕೆಲವೇ ಕೆಲವು ಸದಸ್ಯರು ಬದುಕುಳಿದಿದ್ದಾರೆ.
ದ ಸೈಲೆಂಟ್ ಜನರೇಶನ್: ದ ಸೈಲೆಂಟ್ ಜನರೇಶನ್ ಹುಟ್ಟಿದ ಕಾಲಾವಧಿ ೧೯೨೮-೧೯೪೫ವರೆಗೆ ಎನ್ನಲಾಗುತ್ತದೆ. ಕಮ್ಯೂನಿಸ್ಟರು ಅಮೆರಿಕದ ಸರ್ಕಾರ ಹಾಗೂ ಮಹತ್ವದ ಸಂಸ್ಥೆಗಳಲ್ಲಿ ನುಸುಳಿಬಿಟ್ಟಿದ್ದಾರೆ ಎಂದು ಮ್ಯಾಕ್ ಕಾರ್ಥಿ ಎಂಬ ಅಮೆರಿಕದ ಸೆನೆಟರ್ ಆರೋಪಿಸಿದ್ದರು. ೧೯೪೦ರ ಹಾಗೂ ೫೦ ರ ದಶಕದಲ್ಲಿ ಎರಡನೇ ಮಹಾಯುದ್ಧದ ನಂತರ ಸೋವಿಯತ್ ಯೂನಿಯನ್ ಹಾಗೂ ಅಮೆರಿಕಾಗಳು ಬದ್ಧವೈರಿಗಳಾಗಿದ್ದವು ಹಾಗೂ ಈ ಸಮಯದಲ್ಲಿ ಎರಡೂ ದೇಶಗಳ ನಡುವೆ ಶೀತಲ ಸಮರವಿತ್ತು. ಈ ಸಮಯದಲ್ಲಿ ಸೋವಿಯತ್ ಯೂನಿಯನ್ ಪರಮಾಣು ಬಾಂಬ್ ಅನ್ನು ತಯಾರಿಸಿತ್ತು. ಈ ಕಾಲಘಟ್ಟದಲ್ಲಿ, ಮಕ್ಕಳು ಕಠಿಣ ಪರಿಶ್ರಮದ ಮನೋಭಾವದ ಮೂಲಕ ತಮ್ಮ ಜೀವನವನ್ನು ಸ್ವತಃ ಕಟ್ಟಿಕೊಳ್ಳಬೇಕು ಮತ್ತು ತಮ್ಮ ಬದುಕಿಗೆ ಅಗತ್ಯವಾದುದನ್ನು ಸ್ವಂತ ಪ್ರಯತ್ನದಿಂದ ಗಳಿಸಬೇಕು ಎಂದು ನಿರೀಕ್ಷಿಸಲಾಗುತ್ತಿತ್ತು.
ಬೇಬಿ ಬೂಮ್ ಜನರೇಶನ್: ೧೯೪೬ ರಿಂದ ೧೯೬೪ ರ ವರೆಗೆ ಹುಟ್ಟಿದ ಈ ತಲೆಮಾರಿನವರು ಮುಂದಿನ ಎರಡು ತಲೆಮಾರಿನ ಸದಸ್ಯರ ಪೋಷಕರಾಗಿದ್ದಾರೆ. ವಾಸ್ತವವಾಗಿ, ಈ ಪೀಳಿಗೆಯವರು ನಾವು ಸಾಮಾನ್ಯವಾಗಿ ಕೇಳಿರದಷ್ಟು ಉತ್ಸಾಹಭರಿತ ಮತ್ತು ಸಂಪ್ರದಾಯಗಳನ್ನು ಪ್ರಶ್ನಿಸುವ ಯುವಜೀವನವನ್ನು ಹೊಂದಿದ್ದರು. ಎರಡನೇ ವಿಶ್ವಯುದ್ಧದ ನಂತರ ಸಂಭವಿಸಿದ ಜನಸಂಖ್ಯೆಯ ‘ಏರಿಕೆ’ ಅಥವಾ ಬೂಮ್‌ನಿಂದಾಗಿ ಈ ಪೀಳಿಗೆಗೆ ‘ಬೂಮರ್ಸ್’ ಎಂಬ ಹೆಸರು ಬಂದಿದೆ. ಈ ಪೀಳಿಗೆಯ ಅನೇಕ ಯುವಜನರು ತಮ್ಮ ಪೋಷಕರ ಮೌಲ್ಯಗಳು ಮತ್ತು ನಿರೀಕ್ಷೆಗಳನ್ನು ಽಕ್ಕರಿಸಿದರು, ವಿಯೆಟ್ನಾಂ ಯುದ್ಧದ ವಿರುದ್ಧ ಪ್ರತಿಭಟಿಸಿದರು.
ಜನರೇಶನ್ ಎಕ್ಸ್ : ಜೆನ್ ಎಕ್ಸ್ ಎಂದೂ ಕರೆಯಲ್ಪಡುವ ಈ ತಲೆಮಾರಿನವರು ಹುಟ್ಟಿದ ಕಾಲಾವಧಿ ೧೯೬೫ರಿಂದ ೧೯೮೦ ರವರೆಗೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ‘ಸೋಮಾರಿಗಳ ಪೀಳಿಗೆ’ ಎಂದು ತಳ್ಳಿಹಾಕಲ್ಪಡುವ ಜನರೇಷನ್ ಎಕ್ಸ್ ಪೀಳಿಗೆಯವರು ಏಡ್ಸ್ ಸಾಂಕ್ರಾಮಿಕ, ಎಂಟಿವಿ ಸಂಸ್ಕೃತಿ ಮತ್ತು ಎಲ್‌ಜಿಬಿಟಿಕ್ಯೂ+ ಹಕ್ಕುಗಳ ಉದಯಕ್ಕೆ ಕಾರಣವಾದ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ಅನುಭವಿಸಿದವರು. ತಮ್ಮ ಮಕ್ಕಳು ಬೀದಿ ದೀಪಗಳು ಹೊತ್ತುವವರೆಗೆ ಹೊರಗೆ ಆಟವಾಡಲು ಬಿಡುತ್ತಿದ್ದ ಬೂಮರ್ ಪೋಷಕರಿಗಿಂತ ಭಿನ್ನವಾಗಿ, ಜನರೇಷನ್ ಎಕ್ಸ್ ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದರು.
ಮಿಲೇನಿಯಲ್ ಜನರೇಶನ್ : ೧೯೮೧ ರಿಂದ ೧೯೯೬ ರ ಕಾಲಾವಧಿಯಲ್ಲಿ ಹುಟ್ಟಿದ ಮಿಲೇನಿಯಲ್ ಪೀಳಿಗೆಯನ್ನು ‘ಜನರೇಶನ್ ವಾಯ್’ ಎಂದೂ ಕರೆಯುತ್ತಾರೆ. ಮಿಲೇನಿಯಲ್‌ಗಳು, ೯/೧೧ ದಾಳಿಯ ಘಟನೆಗಳನ್ನು ಕಂಡ ಪೀಳಿಗೆಯವರು. ಇಂಟರ್‌ನೆಟ್ ಇಲ್ಲದ ಬಾಲ್ಯವನ್ನೂ ಮತ್ತು ಇಂಟರ್‌ನೆಟ್ ನೊಂದಿಗೆ ಬೆಳೆದ ಬಾಲ್ಯವನ್ನೂ ಅನುಭವಿಸಿದ ಮೊದಲ ಪೀಳಿಗೆ ಇವರದ್ದು. ಇಂದು ಇಂಟರ್‌ನೆಟ್ ಅವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಜನರೇಶನ್ ಝೆಡ್: ಜನರೇಶನ್ ಝೆಡ್ ಅಥವಾ ಜೆನ್ ಝೀ ಎಂದು ಸಾಮಾನ್ಯವಾಗಿ ಕರೆಸಿಕೊಳ್ಳುವ ಈ ತಲೆಮಾರಿನವರು ಹುಟ್ಟಿದ ಕಾಲಾವಧಿ ೧೯೯೭ ರಿಂದ ೨೦೧೦ ರವರೆಗೆ. ಈ ಪೀಳಿಗೆಯ ಮಕ್ಕಳು, ಮೊಬೈಲ್ ಫೋನ್ಗಳು, ಪರದೆಗಳು ಮತ್ತು ಟ್ಯಾಬ್ಲೆಟ್‌ಗಳ ಮೂಲಕ ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿರುವ ಜಗತ್ತಿನಲ್ಲೇ ಜನಿಸಿದ ಮೊದಲ ಪೀಳಿಗೆಯವರು. ಹೀಗಾಗಿ, ನಿರಂತರ ಸಂಪರ್ಕವಿಲ್ಲದ ಜಗತ್ತಿನ ಅನುಭವ ಅವರಿಗೆ ಇಲ್ಲವೆಂದೇ ಹೇಳಬಹುದು.
ಜೆನ್ ಝೀ ಯುವಜನರು ಸಾಮಾನ್ಯವಾಗಿ ಪರಿಸರದ ಬಗ್ಗೆ ಜಾಗೃತರಾಗಿದ್ದಾರೆ. ಅವರು ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಹೊಂದಿದ್ದು, ಇತರರನ್ನು ಸ್ವೀಕರಿಸುವ ಮತ್ತು ಗೌರವಿಸುವ ಗುಣವನ್ನು ತೋರಿಸುತ್ತಾರೆ. ಅಲ್ಲದೆ, ಅವರಲ್ಲಿ ಅನೇಕರಿಗೆ ಇನ್ನೂ ಮತ ಚಲಾಯಿಸುವ ವಯಸ್ಸಾಗದಿದ್ದರೂ, ಅವರು ರಾಜಕೀಯವಾಗಿ ಅತ್ಯಂತ ಜಾಗೃತರಾಗಿದ್ದಾರೆ. ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಈ ಪೀಳಿಗೆಯು ಪ್ರಭಾವಶಾಲಿ ವೈರಲ್ ಟ್ರೆಂಡ್‌ಗಳನ್ನು ಸೃಷ್ಟಿಸುವುದರಲ್ಲಿ ಪ್ರವೀಣರು.
ಜನರೇಶನ್ ಆಲ್ಛಾ: ೨೦೧೦ರಿಂದ ೨೦೨೪ರ ನಡುವೆ ಜನಿಸಿದ ಮಕ್ಕಳು ಜನರೇಷನ್ ಆಲ್ಛಾ ಪೀಳಿಗೆಗೆ ಸೇರಿದ್ದಾರೆ. ಸಾಮಾಜಿಕ ಮಾಧ್ಯಮಗಳು ಅಸ್ತಿತ್ವದಲ್ಲಿರದ ಕಾಲವನ್ನು ಎಂದಿಗೂ ಅನುಭವಿಸದ ಮೊದಲ ಪೀಳಿಗೆಯ ಮಕ್ಕಳು ಇವರಾಗಿದ್ದಾರೆ. ಅಲ್ಲದೆ, ಹಿಂದಿನ ಯಾವುದೇ ಪೀಳಿಗೆಗಿಂತ ಇವರು ತಂತ್ರಜ್ಞಾನದಲ್ಲಿ ಹೆಚ್ಚು ಪರಿಣತರಾಗಿದ್ದಾರೆ. ಜನರೇಷನ್ ಆಲ್ಛಾದ ಕೆಲವು ಮಕ್ಕಳು ಕೋವಿಡ್-೧೯ ಸಾಂಕ್ರಾಮಿಕದ ಅವಧಿಯಲ್ಲಿ ಜನಿಸಿದ ಮೊದಲ ಮಕ್ಕಳಲ್ಲಿ ಸೇರಿದ್ದಾರೆ. ಇವರು ವೈವಿಧ್ಯಮಯ ಹಿನ್ನೆಲೆಗಳನ್ನು ಹೊಂದಿದ್ದಾರೆ ಮತ್ತು ಏಕಪೋಷಕ ಕುಟುಂಬಗಳಲ್ಲಿ ಬೆಳೆಯುವ ಸಾಧ್ಯತೆಯೂ ಇವರಲ್ಲಿ ಹೆಚ್ಚು.
ಜನರೇಶನ್ ಬೀಟಾ: ೨೦೨೫ ಮತ್ತು ಅದರ ನಂತರ (೨೦೩೯ ರವರೆಗೆ) ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಪೀಳಿಗೆಗೆ ಸೇರಿಸಿದ್ದಾರೆ. ಆದರೆ, ಈ ಪೀಳಿಗೆಯವರು ಇನ್ನೂ ಬಹಳ ಹೊಸಬರಾಗಿರುವುದರಿಂದ, ಅವರ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವುದು ಸಾಧ್ಯವಿಲ್ಲ. ಜನರೇಷನ್ ಆಲ್ಛಾ ಪೀಳಿಗೆಯವರಂತೆ, ಇವರು ತಂತ್ರಜ್ಞಾನದಲ್ಲಿ ಪರಿಣತರಾಗಿದ್ದು, ಸಾಮಾಜಿಕವಾಗಿ ಜಾಗೃತರಾಗಿರುವ ಸಾಧ್ಯತೆ ಇದೆ. ಹಿಂದಿನ ಪೀಳಿಗೆಗಳಿಗಿಂತ ಭಿನ್ನವಾಗಿ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಸಂಪರ್ಕವು ಇವರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗುವ ಸಾಧ್ಯತೆ ಇದೆ.
ಪೀಳಿಗೆಗಳಿಗೆ ವಿಭಿನ್ನ ಹೆಸರುಗಳನ್ನು ನೀಡುವ ಈ ಪದ್ಧತಿಯು ಜನರೇಷನ್ ಎಕ್ಸ್ ನಿಂದ ಆರಂಭವಾಯಿತು. ೧೯೯೧ರಲ್ಲಿ ಲೇಖಕ ಡಗ್ಲಸ್ ಕೂಪ್ಲ್ಯಾಂಡ್ ಅವರು ತಮ್ಮ ಕಾದಂಬರಿಯಲ್ಲಿ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದ ಯುವಜನರನ್ನು ವಿವರಿಸಲು ಈ ಪದವನ್ನು ಜನಪ್ರಿಯಗೊಳಿಸಿದರು. ಇಲ್ಲಿ ಎಕ್ಸ್ ಅನ್ನು ಅಜ್ಞಾತ ಚರ ಎಂಬ ಅರ್ಥದಲ್ಲಿ ಬಳಸಲಾಗಿತ್ತು. ಮುಂದಿನ ಪೀಳಿಗೆಯ ಮಕ್ಕಳು ಜನಿಸಿದಾಗ, ಮಾಧ್ಯಮಗಳು ಮತ್ತು ಸಂಶೋಧಕರು ಸಹಜವಾಗಿಯೇ ಅವರನ್ನು ಜನರೇಷನ್ ವೈ ಎಂದು ಕರೆಯಲಾರಂಭಿಸಿದರು. ನಂತರ ಈ ಪೀಳಿಗೆಯು ಮಿಲೇನಿಯಲ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಅದೇ ತರ್ಕವನ್ನು ಅನುಸರಿಸಿ, ಜನರೇಷನ್ ವೈ ನಂತರದ ಪೀಳಿಗೆಗೆ ಜನರೇಷನ್ ಝೆಡ್ ಅಥವಾ ಜೆನ್ ಝೀ ಎಂದು ಹೆಸರಿಡಲಾಯಿತು. ಹೀಗೆ ತಾರ್ಕಿಕವಾಗಿ ಮುಂದಿನ ಪೀಳಿಗೆಯವರನ್ನು ಜೆನ್ ಗಾಮಾ, ಜೆನ್ ಡೆಲ್ಟಾ, ಜೆನ್ ಎಪ್ಸಿಲಾನ್ ಎಂದು ಇತ್ಯಾದಿಯಾಗಿ ವಿಂಗಡಿಸಲಾಗುವುದು. ಇದಲ್ಲದೆ ಲಾಸ್ಟ್ ಜನರೇಷನ್ ಎಂದು ಕರೆಯಲ್ಪಡುವ ಪೀಳಿಗೆಯು ಸುಮಾರು ೧೮೮೦ ಮತ್ತು ೧೯೦೦ರ ನಡುವೆ ಜನಿಸಿದವರನ್ನು ಒಳಗೊಂಡಿತ್ತು. ಈ ಪೀಳಿಗೆಯವರಲ್ಲಿ ಈಗ ಯಾರೂ ಜೀವಂತವಾಗಿಲ್ಲ.
ವಿಭಿನ್ನ ಪೀಳಿಗೆಗಳಿಗೆ ವಿಭಿನ್ನ ಕಾಲಘಟ್ಟಗಳಲ್ಲಿ ಹೆಸರುಗಳು ಬಂದಿವೆ. ಈ ಹೆಸರುಗಳು ಜನಸಂಖ್ಯಾ ತಜ್ಞರು, ಇತಿಹಾಸಕಾರರು, ಸಮಾಜಶಾಸ್ತ್ರಜ್ಞರು, ಲೇಖಕರು, ಪತ್ರಕರ್ತರು, ಮಾರುಕಟ್ಟೆ ತಜ್ಞರು ಮತ್ತು ಸಂಶೋಧನಾ ಸಂಸ್ಥೆಗಳ ಸಂಯುಕ್ತ ಪ್ರಭಾವದಿಂದ ರೂಪುಗೊಂಡಿವೆ. ಈ ಪೀಳಿಗೆಗಳ ಹೆಸರುಗಳು ಮೊದಲು ಅಮೆರಿಕ ದೇಶದ ಹಿನ್ನೆಲೆಗೆ ಅನ್ವಯವಾಗುತ್ತಿದ್ದರೂ, ಜಾಗತೀಕರಣದ ಪ್ರಭಾವದಿಂದ ಇವು ಈಗ ಪ್ರಪಂಚದ ಎಲ್ಲೆಡೆ ಸಲ್ಲುವಂತಾಗಿವೆ.
” ೨೦೨೫ ಮತ್ತು ಅದರ ನಂತರ (೨೦೩೯ ರವರೆಗೆ) ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಪೀಳಿಗೆಗೆ ಸೇರಿಸಿದ್ದಾರೆ. ಆದರೆ, ಈ ಪೀಳಿಗೆಯವರು ಇನ್ನೂ ಬಹಳ ಹೊಸಬರಾಗಿರುವುದರಿಂದ, ಅವರ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳುವುದು ಸಾಧ್ಯವಿಲ್ಲ.”




