Mysore
31
few clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಬಿಜೆಪಿಯಲ್ಲಿ ಹೆಚ್ಚಿದ ಆಂತರಿಕ ಒಡಕು?

ಕ್ಷೀಣಿಸುತ್ತಿದೆ ಅಧಿಕಾರ ಹಿಡಿಯುವ ಮೈತ್ರಿಕೂಟದ ಕನಸು

ಕೆಲ ಕಾಲದ ಹಿಂದೆ ಕರ್ನಾಟಕದ ಬಿಜೆಪಿ-ಜಾ. ದಳ ಮಿತ್ರಕೂಟದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಅದೆಂದರೆ ರಾಜ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಏನಾದರೂ ಮಾಡಿ ಬಿಜೆಪಿಯ ರಣತಂತ್ರ ನಿಪುಣರು ಉರುಳಿಸುತ್ತಾರೆ. ಆ ಮೂಲಕ ಕರ್ನಾಟಕದಲ್ಲಿ ಮಿತ್ರಕೂಟ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬುದು.

ಮಿತ್ರಕೂಟದ ಈ ನಂಬಿಕೆಗೆ ಒಂದು ಕಾರಣವಿತ್ತು. ಅದೆಂದರೆ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಹಾ ರಾಷ್ಟ್ರಾದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸೇರಿ ಕರ್ನಾಟಕದ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರ ಸಂಪರ್ಕ ಸಾಧಿಸಿದ್ದಾರೆ ಎಂಬುದು. ಅದು ಸುಳ್ಳೇನೂ ಆಗಿರಲಿಲ್ಲ ಮತ್ತು ಪ್ರಮೋದ್ ಸಾವಂತ್ ಹಾಗೂ ದೇವೇಂದ್ರ ಫಡ್ನವೀಸ್ ಅವರು ರಾಜ್ಯದ ಯಾವ ಕಾಂಗ್ರೆಸ್ ಶಾಸಕರ ಜತೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗುತ್ತಿತ್ತೋ ಅವರೆಲ್ಲ ಸಹಜವಾಗಿಯೇ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದರು. ಕಾರಣ ಅಧಿಕಾರಕ್ಕೆ ಬಂದ ನಂತರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಅನುದಾನ ಸಿಗುತ್ತಿಲ್ಲ ಎಂಬುದು. ಹೀಗಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಪ್ರತಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಅಸಮಾಧಾನಿತ ಶಾಸಕರ ಧ್ವನಿ ಮೊಳಗುತ್ತಲೇ ಇತ್ತು.

ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದಿದ್ದರೆ ತಾವು ಮತ ದಾರರ ಬಳಿ ಹೋಗುವುದಾದರೂ ಹೇಗೆ? ಎಂಬುದರಿಂದ ಹಿಡಿದು ರಾಜ್ಯ ಸರ್ಕಾರದಲ್ಲಿರುವ ಹಲವು ಮಂತ್ರಿಗಳು ತಾವು ಹೇಳಿದ ಕೆಲಸವನ್ನು ಮಾಡುವುದಿರಲಿ, ಬದಲಿಗೆ ಸೌಜನ್ಯದಿಂದ ಮಾತನಾಡುತ್ತಲೂ ಇಲ್ಲ ಎಂಬಲ್ಲಿಯ ತನಕ ಶಾಸಕರ ಅಸಮಾಧಾನ ವಿಸ್ತರಗೊಳ್ಳುತ್ತಿತ್ತು. ಇದು ಹಲವು ಬಾರಿ ಯಾವ ಮಟ್ಟಕ್ಕೆ ಹೋಗುತ್ತಿತ್ತೆಂದರೆ ಹೈದರಾಬಾದ್ ಕರ್ನಾಟಕ ಭಾಗದ ಶಾಸಕರೊಬ್ಬರು ಇಂಧನ ಸಚಿವ ಕೆ. ಜೆ. ಜಾರ್ಜ್ ಅವರ ವಿರುದ್ಧ ಧ್ವನಿ ಎತ್ತಿ, ನನ್ನ ಕ್ಷೇತ್ರದಲ್ಲಿ ಕೆಲವು ವಿದ್ಯುತ್ ಕಂಬಗಳನ್ನು ಹಾಕಲೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬಲ್ಲಿಯವರೆಗೆ ಹೋಗಿತ್ತು.

ಇದರರ್ಥವೆಂದರೆ, ಸರ್ಕಾರದ ಮಟ್ಟದಲ್ಲಿ ಸಣ್ಣ ಮಟ್ಟದ ಕೆಲಸಗಳೂ ಆಗುತ್ತಿಲ್ಲ ಎಂಬುದು. ಈ ಅಂಶವನ್ನು ಗಮನಿಸಿದರೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಅವರು ಹೇಗೆ ಅತೃಪ್ತ ಕಾಂಗ್ರೆಸ್ ಶಾಸಕರ ಸಂಪರ್ಕ ಸಾಽಸಲು ಸಾಧ್ಯವಾಯಿತು? ಎಂಬುದು ಸ್ಪಷ್ಟವಾಗುತ್ತದೆ. ಹೀಗಾ ಗಿಯೇ ಈ ಬೆಳವಣಿಗೆ ಕರ್ನಾಟಕದ ಬಿಜೆಪಿ-ಜಾ. ದಳ ಮೈತ್ರಿಕೂಟದ ನಾಯಕರ ದೃಢ ನಂಬಿಕೆಗೆ ಕಾರಣವಾಗಿತ್ತು. ಅಂದರೆ ಸಿದ್ದರಾಮಯ್ಯ ಅವರ ಸರ್ಕಾರ ಉರುಳುವ ಕಾಲ ದೂರವಿಲ್ಲ ಎಂಬುದಾಗಿತ್ತು.

ಆದರೆ ದಿನ ಕಳೆದಂತೆ ಬಿಜೆಪಿ-ಜಾ. ದಳ ಮೈತ್ರಿಕೂಟದ ನಾಯಕರ ನಂಬಿಕೆ ಕ್ಷೀಣಿಸುತ್ತಾ ಹೋಗುತ್ತಿದೆ. ಕಾರಣ ಮೊದಲನೆಯದಾಗಿ, ಮಿತ್ರಕೂಟದ ಪಕ್ಷಗಳಲ್ಲಿ ನಿರಂತರವಾಗಿ ಕೇಳಿ ಬರುತ್ತಿರುವ ಒಡಕಿನ ಮಾತು. ಈ ಪೈಕಿ ಬಿಜೆಪಿಯನ್ನೇ ತೆಗೆದುಕೊಳ್ಳಿ. ಮೊನ್ನೆ ಮೊನ್ನೆಯವರೆಗೆ ಹಿರಿಯ ನಾಯಕ ಯತ್ನಾಳ್ ಅವರು ಕೆಲ ನಾಯಕರ ಜತೆ ಸೇರಿ ಹಾಲಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ವಿರುದ್ಧ ಧ್ವನಿ ಎತ್ತುತ್ತಿದ್ದರಾದರೆ, ಈಗ ಯತ್ನಾಳ್ ಬಣದ ನಾಯಕರ ಜತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿ. ವಿ. ಸದಾನಂದಗೌಡ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಸೇರಿ ದಂತೆ ಹಲವು ನಾಯಕರು ಸೇರಿಕೊಂಡಿದ್ದಾರೆ.

ಈ ಪೈಕಿ ಬಸವರಾಜ ಬೊಮ್ಮಾಯಿ, ಡಿ. ವಿ. ಸದಾನಂದಗೌಡ, ಆರ್. ಅಶೋಕ್, ಡಾ. ಅಶ್ವತ್ಥನಾರಾಯಣ ಅವರಂತಹ ನಾಯಕರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಕಾರದಿರಬಹುದು. ಆದರೆ ಆಳದಲ್ಲಿ ಅವರು ವಿಜಯೇಂದ್ರ ವಿರೋಧಿ ಬಣದಲ್ಲಿ ಸೇರಿಕೊಂಡಿದ್ದಾರೆ. ಈ ಮಧ್ಯೆ ಸಂಸದ ಡಾ. ಸುಧಾಕರ್ ಅವರಂತಹ ಕೆಲ ನಾಯಕರೂ ಯತ್ನಾಳ್ ಅಂಡ್ ಟೀಮಿನ ಮಾದರಿಯಲ್ಲೇ ಬಹಿರಂಗವಾಗಿ ಬಿ. ವೈ. ವಿಜಯೇಂದ್ರ ಅವರ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲಿಗೆ ರಾಜ್ಯ ಬಿಜೆಪಿಯ ಒಳಜಗಳ ದೊಡ್ಡ ಮಟ್ಟದಲ್ಲಿ ಪ್ರತಿಫಲಿಸುವುದು ನಿಶ್ಚಿತ.

ಅಂದ ಹಾಗೆ ಹೀಗೆ ವಿಜಯೇಂದ್ರ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ನಾಯಕರ ಸಂಖ್ಯೆ ಏಕೆ ಹೆಚ್ಚಾಗುತ್ತಿದೆ ಎಂಬುದು ರಹಸ್ಯವಲ್ಲ. ಏಕೆಂದರೆ ರಾಜ್ಯ ಬಿಜೆಪಿ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿಗಳಾಗಬೇಕು ಎಂಬ ಲೆಕ್ಕಾಚಾರ ಒಂದು ಡಜನ್‌ನಷ್ಟು ನಾಯಕರ ಮನಸ್ಸಿನಲ್ಲಿದೆ. ನೋಡುತ್ತಾ ಹೋದರೆ ಆರ್. ಅಶೋಕ್, ಡಾ. ಅಶ್ವತ್ಥ ನಾರಾಯಣ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದವರು. ಇದೇ ರೀತಿ ಡಾ. ಸುಧಾಕರ್ ಅವರು ಪಕ್ಷದ ವರಿಷ್ಠ ಅಮಿತ್ ಶಾ ಅವರ ಜತೆ ಉತ್ತಮ ಸಂಪರ್ಕ ದಲ್ಲಿದ್ದು, ಬೊಮ್ಮಾಯಿ ಅವಽಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬರಲು ಯತ್ನಿಸಿದ್ದವರು.

ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಇರಬಹುದು, ಆರ್ ಎಸ್‌ಎಸ್‌ನ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರೇ ಇರಬಹುದು, ಹೀಗೆ ನೋಡುತ್ತಾ ಹೋದರೆ ಕರ್ನಾಟಕದಲ್ಲಿ ಬಿಜೆಪಿ ಅಽಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ಹುದ್ದೆಗೇರಬೇಕು ಎಂದು ಹಲವು ನಾಯಕರು ಕಾದು ಕುಳಿತಿದ್ದಾರೆ. ಹೀಗಾಗಿ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಈಗ ನೆಮ್ಮದಿಯಾಗಿ ಮುಂದುವರಿದರೆ, ಭವಿಷ್ಯದಲ್ಲಿ ಪಕ್ಷ ಅಽಕಾರದ ಸನಿಹ ಬಂದಾಗ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಅವರೇ ಮುಂದಿರುತ್ತಾರೆ. ಹಾಗೆಂಬ ಲೆಕ್ಕಾಚಾರದೊಂದಿಗೆ ಈ ನಾಯಕರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ವಿಜಯೇಂದ್ರ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪರಿಣಾಮ? ರಾಜ್ಯ ಬಿಜೆಪಿಯ ಈ ಅಂತಃಕಲಹದ ಆಟ ನೋಡಿದ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಒಂದು ವಿಷಯ ಮನದಟ್ಟಾಗಿದೆ.

ಅದೆಂದರೆ, ಭವಿಷ್ಯದಲ್ಲಿ ತಾವು ಪಕ್ಷ ತೊರೆದು ಮಿತ್ರಕೂಟದ ಕೈ ಹಿಡಿದರೂ ಹೊಸ ಸರ್ಕಾರ ರಚಿಸುವುದು ಅಸಂಭವ ಎಂಬುದು. ಹೀಗೆ ಹೊಸ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಬಿಜೆಪಿ ಮಿತ್ರಕೂಟ ಇಲ್ಲದೆ ಇರುವುದರಿಂದ ತಾವು ಕೈ ಪಾಳೆಯ ತೊರೆದು ಅತ್ತ ಹೋದರೂ ತಮ್ಮ ಭವಿಷ್ಯ ಡೋಲಾಯಮಾನವಾಗಬಹುದೇ ಹೊರತು ಉದ್ಧಾರವಾಗಲು ಸಾಧ್ಯವಿಲ್ಲ ಎಂಬುದು ಬಹುತೇಕ ಶಾಸಕರ ಯೋಚನೆ.

ಈ ಮದ್ಯೆ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗಿರುವ ಮತ್ತೊಂದು ಯೋಚನೆ ಎಂದರೆ, ಇವತ್ತು ನಾವು ಐವತ್ತರಷ್ಟು ಶಾಸಕರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೂಚನೆ ನೀಡಿದ ಕೂಡಲೇ ಕಾಂಗ್ರೆಸ್ ಪಾಳೆಯ ತೊರೆಯಬಹುದು. ಆದರೆ ನಾವು ಹಾಗೆ ಪಕ್ಷ ತೊರೆಯುವ ಕಾಲಕ್ಕೆ ಜಾ. ದಳದ ಹದಿಮೂರು ಶಾಸಕರು ಮತ್ತು ಬಿಜೆಪಿಯ ಎಂಟ್ಹತ್ತು ಶಾಸಕರು ಕೈ ಪಾಳೆಯ ಸೇರಿದರೆ ಎಂಬುದು ಈ ಶಾಸಕರ ಆತಂಕ. ಅರ್ಥಾತ್, ತಾವು ನಲವತ್ತರಿಂದ ಐವತ್ತು ಶಾಸಕರು ಬಿಜೆಪಿ ಮಿತ್ರಕೂಟದ ಕಡೆ ಹೋಗುವ ಕಾಲಕ್ಕೆ ಮಿತ್ರಕೂಟದ ಪಾಳೆಯದಿಂದ ಇಪ್ಪತ್ತೈದರಷ್ಟು ಶಾಸಕರು ಕಾಂಗ್ರೆಸ್ ಸೇರಿದರೆ ಏನಾಗುತ್ತದೆ? ಸಹಜವಾಗಿಯೇ ಸರ್ಕಾರ ಉಳಿದು ತಾವು ಮಧ್ಯಂತರ ಚುನಾವಣೆಗೆ ಹೋಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ಹೀಗೆ ಸರ್ಕಾರ ಉರುಳದೆ ತಾವು ಮಧ್ಯಂತರ ಚುನಾವಣೆಗೆ ಹೋಗುವ ಸನ್ನಿವೇಶ ಬಂದರೆ ಮರಳಿ ತಾವು ಗೆದ್ದು ಬರುವುದು ಸುಲಭವಲ್ಲ. ಏಕೆಂದರೆ ಮೊದಲನೆಯದಾಗಿ ಮಿತ್ರಕೂಟದಲ್ಲಿ ಸ್ಥಿರತೆಯಿಲ್ಲ. ಎರಡನೆಯದಾಗಿ ಅಸ್ತಿತ್ವದಲ್ಲಿರುವ ಸರ್ಕಾರ ತನ್ನ ಬಲವನ್ನೆಲ್ಲ ಬಳಸಿ ನಮ್ಮನ್ನು ಬಡಿದು ಹಾಕುತ್ತದೆ.

ಈ ಆಟದಲ್ಲಿ ಕೆಲವರು ಬಚಾವಾಗಿ ಬರಬಹುದು, ಆ ಮಾತು ಬೇರೆ. ಆದರೆ ಉಪಚುನಾವಣೆಯ ಕಣದಲ್ಲಿ ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಕೂಡ ದೊಡ್ಡ ಮಟ್ಟದ ಯಶಸ್ಸು ಸಾಽಸುವುದು ನಿಶ್ಚಿತ. ಹಾಗಾದಾಗ ತಾವೆಲ್ಲ ತ್ರಿಶಂಕು ಸ್ವರ್ಗ ಸೇರುವುದು ಗ್ಯಾರಂಟಿ ಎಂಬುದು ಈ ಶಾಸಕರ ಲೆಕ್ಕಾಚಾರ. ಪರಿಣಾಮ ನೋಡ ನೋಡುತ್ತಿದ್ದಂತೆಯೇ ಕಾಂಗ್ರೆಸ್‌ನ ಅತೃಪ್ತ ಶಾಸಕರ ಸಂಖ್ಯೆ ಕ್ಷೀಣಿಸುತ್ತಾ ಕರ್ನಾಟಕದ ಮಿತ್ರಕೂಟದ ಪಾಳೆಯದಲ್ಲಿ ಒಂದು ಬಗೆಯ ನಿರಾಶೆ ಆವರಿಸಿದೆ. ಇದೇ ಸದ್ಯದ ಪರಿಸ್ಥಿತಿ.

Tags: