ಪ್ರೊ.ಆರ್.ಎಂ.ಚಿಂತಾಮಣಿ
ನಿರೀಕ್ಷೆಯಂತೆ ೨೦೨೫- ೨೬ ರ ಬಜೆಟ್ ಗಾತ್ರ ಐವತ್ತು ಲಕ್ಷ ಕೋಟಿ ರೂ. ಗಳನ್ನು ದಾಟಿ ೫೦,೬೫,೩೪೫ ಕೋಟಿ ರೂ. ಗಳನ್ನು ತಲುಪಿದೆ. ಈ ಒಟ್ಟು ವೆಚ್ಚದ ಅಂದಾಜಿನಲ್ಲಿ ೩೯,೪೪,೨೫೫ ಕೋಟಿ ರೂ. ರಾಜಸ್ವ ಖಾತೆ (Revenue) ವೆಚ್ಚವಾಗಿದ್ದು, ಇದರಲ್ಲಿ ಬಡ್ಡಿ ಪಾವತಿಯ ಅಂದಾಜು ೧೨,೭೬,೩೩೮ ಕೋಟಿ ರೂ. ಸೇರಿದ್ದು, ರಾಜ್ಯಗಳಿಗೆ ಆಸ್ತಿಗಳನ್ನು ನಿರ್ಮಾಣ ಮಾಡಲು ಕೊಡಲಿರುವ ಅನುದಾನದ ಮೊತ್ತ ೪,೨೭,೧೯೨ ಕೋಟಿ ರೂ. ಸೇರಿಕೊಂಡಿದೆ. ಉಳಿದಂತೆ ೧೧,೨೧,೦೯೦ ಕೋಟಿ ರೂ. ಬಂಡವಾಳ ವೆಚ್ಚವೆಂದು (ಬಹುತೇಕ ಹೂಡಿಕೆಗಳು) ಅಂದಾಜಿಸಲಾಗಿದೆ. ಈ ಖರ್ಚುಗಳಿಗಾಗಿ ಕೇಂದ್ರ ಅರ್ಥ ಸಚಿವರು ರಾಜಸ್ವ ಖಾತೆಯಲ್ಲಿ ತೆರಿಗೆ ಆದಾಯದಿಂದ ಕೇಂದ್ರಕ್ಕೆ ೨೮,೩೭,೪೦೯ ಕೋಟಿ ರೂ. ಮತ್ತು ತೆರಿಗೆಯೇತರ ಆದಾಯ ೫,೮೩,೦೦೦ ಕೋಟಿ ರೂ. ಬರಲಿದೆ ಎಂದು ಅಂದಾಜಿಸಿದ್ದಾರೆ. ಉಳಿದಂತೆ ಬಂಡವಾಳ ಖಾತೆಯಲ್ಲಿ ಕೊಟ್ಟ ಮುಂಗಡಗಳು ಮತ್ತು ಸಾಲಗ ಮರುಪಾವತಿಯಿಂದ ೨೯,೦೦೦ ಕೋಟಿ ರೂ. ಮತ್ತು ಇತರ ಸ್ವೀಕೃತಿಗಳಿಂದ ೪೭,೦೦೦ ಕೋಟಿ ರೂ. ಬರಲಿದೆ ಎಂದು ಅಂದಾಜು ಮಾಡಿದ್ದಾರೆ. ಉಳಿದ ಕೊರತೆ ೧೫,೬೮,೩೪೫ ಕೋಟಿ ರೂ. ಹೊಸ ಸಾಲ ಎತ್ತುವುದು ಮತ್ತು ಇತರ ಜವಾಬ್ದಾರಿಗಳಿಂದ ತುಂಬಿಕೊಳ್ಳಲಾಗುವುದೆಂದು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಇದರಲ್ಲಿ ಬಾಂಡುಗಳನ್ನು (Government Securities) – ಜಿ. ಪೆಕ್ಸ್ ಪೇಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಸಾಲ ಎತ್ತುವುದು, ಸಣ್ಣ ಉಳಿತಾಯಗಳ ಇಲಾಖೆಯಲ್ಲಿ ಪಡೆದ ಠೇವಣಿಗಳು ಮತ್ತು ಸಾಂಸ್ಥಿಕ ಸಾಲಗಳನ್ನು ಪಡೆಯುವುದು ಸೇರಿರುತ್ತವೆ.
ಈ ಬಜೆಟ್ ಕೊರತೆಯನ್ನೇ ಅಥವಾ ಹೊಸ ಸಾಲ ಪಡೆಯುವ ಅಂದಾಜನ್ನೇ ಸರ್ಕಾರದ ಆರ್ಥಿಕ ನೀತಿಯ ಪರಿಭಾಷೆಯಲ್ಲಿ ಕೋಶೀಯ ಕೊರತೆ (Fiscal Deficit) ಎಂದು ಕರೆಯಲಾಗುತ್ತದೆ. ಇದು ಸರ್ಕಾರದ ಹಣಕಾಸು ಸುರಕ್ಷತೆಯ ಮಾನದಂಡವೂ ಹೌದು. ಇದನ್ನು ಆಯಾ ವರ್ಷದ ರಾಷ್ಟ್ರೀಯ ಒಟ್ಟಾದಾಯದ (ಜಿ. ಡಿ. ಪಿ.) ಶೇಕಡಾವಾರು ಪ್ರಮಾಣದಲ್ಲಿ ಹೇಳಲಾಗುತ್ತದೆ. ೨೦೦೩ರ ಬಜೆಟ್ ನಿರ್ವಹಣೆ ಮತ್ತು ಕೋಶೀಯ ಜವಾಬ್ದಾರಿ ಕಾಯ್ದೆಯ ಪ್ರಕಾರ ಆದರ್ಶ ಸ್ಥಿತಿಯಲ್ಲಿ ಕೋಶೀಯ ಕೊರತೆ ಜಿ. ಡಿ. ಪಿ. ಯ ಶೇ. ೩.೦ರಷ್ಟು ಇರಬೇಕೆಂದು ಹೇಳಲಾಗಿದೆ. ಸರ್ಕಾರಗಳು ಈ ಸ್ಥಿತಿ ತಲುಪಲು ಯತ್ನಿಸಬೇಕು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏರುಪೇರುಗಳಿಂದ ಮತ್ತು ಅಭಿವೃದ್ಧಿಯ ಅವಶ್ಯಕತೆಗಳಿಂದ ಇದು ಹೆಚ್ಚಾಗಬಹುದು. ಕೋವಿಡ್ – ೧೯ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ನಮ್ಮ ಕೋಶೀಯ ಕೊರತೆ ಜಿ. ಡಿ. ಪಿ. ಯ ಶೇ. ೫. ೦ಕ್ಕಿಂತ ಮೇಲೆ ಹೋಗಿತ್ತು. ಕೋಶೀಯ ಕೊರತೆ ಹೆಚ್ಚಾದರೆ ಮರು ವರ್ಷ ಬಡ್ಡಿ ಭಾರ ಹೆಚ್ಚಾಗುತ್ತದೆ. ನಮ್ಮ ಅರ್ಥ ಸಚಿವರು ಅದನ್ನು ಕಡಿಮೆ ಮಾಡುತ್ತ ಬಂದು ೨೦೨೪-೨೫ರ ಬಜೆಟ್‌ನಲ್ಲಿ ಶೇ. ೪.೯ಕ್ಕೆ ಇಳಿಸಿದ್ದರು. ಪರಿಷ್ಕೃತ ಅಂದಾಜುಗಳಂತೆ ಅದು ಶೇ. ೪. ೮ ಕ್ಕೆ ಇಳಿದಿದೆ. ಈ ಮುಂಗಡಪತ್ರದಲ್ಲಿ ಶೇ. ೪. ೪ ಕ್ಕೆ ಇಳಿಸಿದ್ದಾರೆ. ಎಲ್ಲವೂ ಸರಿಯಾಗಿಯೇ ನಡೆದರೆ ನಮ್ಮ ಕೋಶೀಯ ಕೊರತೆ ೨೦೩೦ ರ ದಶಕದಲ್ಲಿ ಆದರ್ಶ ಸ್ಥಿತಿ (ಶೇ. ೩. ೦) ತಲುಪಬಹುದು.
ಬಜೆಟ್ ಆದ್ಯತೆಗಳು
ನಿರೀಕ್ಷಿಸಿದಂತೆ ಹಣಕಾಸು ಸಚಿವರು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ಎರಡನೇ ಆದ್ಯತೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬೆಳವಣಿಗೆ, ನಂತರದ ಸ್ಥಾನಗಳಲ್ಲಿ ಉತ್ಪಾದಕ ಉದ್ದಿಮೆಗಳು, ಪ್ರವಾಸೋದ್ಯಮ, ನಗರಾಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಮೂಲಸೌಲಭ್ಯಗಳು ಮುಂತಾದವುಗಳು ಬರುತ್ತವೆ. ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರದ ಬಂಡವಾಳ ವೆಚ್ಚಗಳು (ಹೂಡಿಕೆಗಳು) ಮುಂದುವರಿಯುತ್ತಿವೆ. ಇದು ಖಾಸಗಿ ವಲಯದಲ್ಲಿ ಹೆಚ್ಚಿನ ಹೂಡಿಕೆಗಳಿಗೆ ಟಾನಿಕ್ ಕೊಟ್ಟಂತಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಪಿ. ಎಂ. ಧನ ಧಾನ್ಯ ಯೋಜನೆ ಜಾರಿಗೆ ತಂದು ಕೃಷಿ ಉತ್ಪಾದನೆ ಹೆಚ್ಚಿಸುವುದಲ್ಲದೆ ರೈತರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ.
ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸೇರಿದಂತೆ ಎಲ್ಲ ಆರ್ಥಿಕ ವಲಯಗಳಲ್ಲೂ ಒಂದಿಲ್ಲೊಂದು ಹೊಸ ಯೋಜನೆಗಳನ್ನು ಅರ್ಥಮಂತ್ರಿಗಳು ಪ್ರಕಟಿಸಿದ್ದಾರೆ. ಪ್ರಮುಖ ನಗರಗಳ ಅಭಿವೃದ್ಧಿಗಾಗಿ ಹೆಚ್ಚು ಹಣ ಒದಗಿಸುವ ಭರವಸೆ ದೊರೆತಿದೆ. ಇನ್ನೊಂದು ವಿಶೇಷತೆ ಎಂದರೆ ನಗರಾಭಿವೃದ್ಧಿಗಾಗಿ ಒಂದು ಕೋಟಿ ರೂ. ಗಳ ‘ಅರ್ಬನ್ ಚಾಲೆಂಜ್ ಫಂಡ್’ ಸೇರಿದಂತೆ ವಿವಿಧ ವಲಯಗಳಲ್ಲಿ ಹತ್ತಕ್ಕಿಂತ ಹೆಚ್ಚು ನಿಧಿಗಳನ್ನು ಸ್ಥಾಪಿಸುವ ಪ್ರಸ್ತಾವನೆಗಳು ಬಜೆಟ್ ನಲ್ಲಿವೆ. ರಾಜ್ಯ ಸರ್ಕಾರಗಳಿಗೆ ೫೦ ವರ್ಷ ಅವಧಿಯ ಬಡ್ಡಿರಹಿತ ಸಾಲದ ಯೋಜನೆಯನ್ನು ಪ್ರಕಟಿಸಲಾಗಿದೆ. ಇದಕ್ಕಾಗಿ ೧. ೫ ಲಕ್ಷ ಕೋಟಿ ರೂ. ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
೫೦ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಇದೆ. ಇದಕ್ಕಾಗಿ ಹಣ ಒದಗಿಸಲಾಗಿದೆ.
ತೆರಿಗೆ ಸುಧಾರಣೆಗಳು
ನಿರ್ಮಲಾ ಸೀತಾರಾಮನ್‌ರವರು ತಮ್ಮ ಹಿಂದಿನ ಯಾವ ಬಜೆಟ್‌ಗಳಲ್ಲೂ ಮಾಡದೇ ಇರುವಷ್ಟು ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಸುಧಾರಣೆಗಳನ್ನು ಮಾಡಿದ್ದಾರೆ. ಹಲವು ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಿ ಜನರ ಕೈಯಲ್ಲಿ ಹೆಚ್ಚು ಕೊಳ್ಳುವ ಶಕ್ತಿ ಉಳಿಯುವಂತೆ ಮಾಡಿದ್ದಾರೆ. ಇದು ಅವಶ್ಯವೂ ಆಗಿತ್ತು. ಇತ್ತೀಚಿನ ವರದಿಗಳಂತೆ ಹಣದುಬ್ಬರದಿಂದ ಜನರ ಉಪಭೋಗ ಕಡಿಮೆಯಾಗಿ ಬೆಳವಣಿಗೆಗೆ ಏಟು ಬಿದ್ದಿತ್ತು. ೧೨ ಲಕ್ಷ ರೂ. ಗಳವರೆಗಿನ ಆದಾಯವನ್ನು ಆದಾಯ ತೆರಿಗೆಯಿಂದ ಮುಕ್ತ ಮಾಡಿರುವುದು ಮಧ್ಯಮ ವರ್ಗಕ್ಕೆ ದೊಡ್ಡ ಕೊಡುಗೆಯೆ. ನೌಕರರ ಮತ್ತು ನಿವೃತ್ತರಿಗೆ ಇನ್ನೂ ೭೫,೦೦೦ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ ೧೨,೭೫,೦೦೦ ರೂ. ಗಳವರೆಗೆ ತೆರಿಗೆ ಕೊಡಬೇಕಾಗಿಲ್ಲ. ಇದಲ್ಲದೆ ಹಿರಿಯ ನಾಗರಿಕರಿಗ ಉಳಿತಾಯಗಳ ಮೇಲಿನ ಬಡ್ಡಿ ವಿಷಯದಲ್ಲಿ ಹಲವು ರಿಯಾಯಿತಿಗಳಿವೆ. ಕಂಪೆನಿಗಳ ಆದಾಯ ತೆರಿಗೆಯಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಳೀಯ ಮತ್ತು ವಿದೇಶಿ ಉದ್ಯಮಶೀಲರಿಗೆ ಹೆಚ್ಚು ಅನುಕೂಲತೆಗಳನ್ನು ಪ್ರಕಟಿಸಲಾಗಿದೆ. ವಿಮಾ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ (ಶೇ. ೧೦೦) ವಿದೇಶಿ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಟಾರ್ಟ್ ಅಪ್‌ಗಳ ಬೆಳವಣಿಗೆ ತೀವ್ರಗೊಳಿಸಲು ವಿಶೇಷ ಫಂಡ್ ಸ್ಥಾಪಿಸಲಾಗುವುದೆಂದು ಬಜೆಟ್ ಹೇಳಿದೆ. ಕೃತಕ ಬುದ್ಧಿಮತ್ತೆಯೂ ಸೇರಿದಂತೆ ತಂತ್ರಜ್ಞಾನ ಉನ್ನತೀಕರಣಕ್ಕಾಗಿ ಹಲವು ಉತ್ತೇಜನಗಳನ್ನು ಪ್ರಕಟಿಸಲಾಗಿದೆ.
ಪರೋಕ್ಷ ತೆರಿಗೆಗಳಲ್ಲಿ, ವಿಶೇಷವಾಗಿ ಕಸ್ಟಮ್ಸ್ ತೆರಿಗೆ ವಿಷಯದಲ್ಲಿ ಹೆಚ್ಚು ಬದಲಾವಣೆಗಳನ್ನು ಪ್ರಕಟಿಸಿ ನಮ್ಮ ನಿರ್ಯಾತಗಳು ಹೆಚ್ಚಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಉದ್ದಿಮೆಗಳಲ್ಲಿ ಅವಶ್ಯವಿರುವ ಆಮದು ಮಾಡಿಕೊಳ್ಳಬೇಕಿರುವ ಸರಕುಗಳ ಮೇಲಿನ ಆಮದು ಸುಂಕಗಳನ್ನು ಕಡಿಮೆ ಮಾಡಲಾಗಿದೆ. ಬಜೆಟ್‌ನಲ್ಲಿ ಒಂದಷ್ಟು ರಾಜಕೀಯವೂ ನುಸುಳಿಕೊಂಡಂತೆ ಭಾಸವಾಗುತ್ತದೆ. ಬಿಹಾರಕ್ಕೆ ಹಲವು ವಿಶೇಷ ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಿಹಾರದಲ್ಲಿರುವ ಆಡಳಿತ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿದೆ. ಅಲ್ಲದೆ, ಬಿಹಾರದಲ್ಲಿ ಬರುವ ದಿನಗಳಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆಯಲಿವೆ. ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದೊಂದನ್ನು ಹೊರತುಪಡಿಸಿದರೆ ಈ ಬಜೆಟ್‌ನಲ್ಲಿ ಹಲವು ಉತ್ತಮ ಅಂಶಗಳಿವೆ. ಇದನ್ನು ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ಹೇಳಲು ಅಡ್ಡಿ ಇಲ್ಲ. ಎಲ್ಲವೂ ಕಾರ್ಯರೂಪಕ್ಕೆ ಬರಬೇಕಷ್ಟೆ.