Mysore
25
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಯುವಕನ ಹತ್ಯೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

Life sentence for the accused who murdered a young man

ಮಂಡ್ಯ : ಯುವಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದ ಆರೋಪಿಗೆ ಶ್ರೀರಂಗಪಟ್ಟಣ 3ನೇ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಬೆಳಗೊಳ ಗ್ರಾಮದ ಶರತ್ ಕುಬೇರ ಅಲಿಯಾಸ್ ಅಪ್ಪಿ ಜೀವಾವಧಿ ಶಿಕ್ಷೆಗೆ ಗುರಿಯಾದನು.

ಘಟನೆ ಹಿನ್ನೆಲೆ: 2022ರ ಜು.27ರ ರಾತ್ರಿ 8.45ರ ಸಮಯದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಬೆಳಗೊಳ ಗ್ರಾಮದ ಸವಿತ ವೈನ್‌ಸ್ಟೋರ್ ಮುಂಭಾಗ ನಿಂತಿದ್ದ ಬಿ.ವಿ. ರವಿ (30) ಎಂಬಾತನ ಮೇಲೆ ಶರತ್ ಕುಬೇರ ಅಲಿಯಾಸ್ ಅಪ್ಪಿ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರವಿಯನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.

ಈ ಬಗ್ಗೆ ಮೃತನ ತಮ್ಮ ಚಂದ್ರು ಎಂಬವರು ಕೆ.ಆರ್. ಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಕೆ.ಆರ್. ಸಾಗರ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಸಿಪಿಐ ಡಿ. ಯೋಗೇಶ್ ಹಾಗೂ ಪಿಎಸ್‌ಐ ಟಿ.ಎಂ. ಪುನೀತ್ ಅವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಸಂಬಂಧ ಶ್ರೀರಂಗಪಟ್ಟಣದ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಜೋಸ್ನಾ ಅವರು ಆರೋಪಿ ಶರತ್ ಕುಬೇರನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರಿ ಅಭಿಯೋಜಕರಾದ ಪ್ರಮಲ್ಲ ಮತ್ತು ನಾಜೀಮಾ ವಾದ ಮಂಡಿಸಿದ್ದರು.

Tags:
error: Content is protected !!