ನಾಗಮಂಗಲ: ಟ್ಯಾಂಕರ್ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯೋರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೆಳ್ಳೂರು ಹೋಬಳಿ ತಿರುಮಲಾಪುರ ಗೇಟ್ ಬಳಿ ನಡೆದಿದೆ.
ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿ ಎಚ್.ಭೂವನಹಳ್ಳಿ ಗ್ರಾಮದ ಅಶ್ವಥ್ (೨೭) ಮೃತನಾಗಿದ್ದು, ನಾಗಮಂಗಲ ಪಟ್ಟಣದ ಪ್ರತಾಪ್ ಮತ್ತು ನಿತೀಶ್ ಗಾಯಗೊಂಡಿದ್ದಾರೆ.
ಬೆಂಗಳೂರು ಕಡೆಯಿಂದ ನಾಗಮಂಗಲಕ್ಕೆ ಬರುವಾಗ ಈ ಘಟನೆ ಸಂಭವಿಸಿದ್ದು, ಟ್ಯಾಂಕರ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಅಶ್ವಥ್, ಪ್ರತಾಪ್ ಹಾಗೂ ನಿತೀಶ್ ಗಾಯಗೊಂಡರು.
ತೀವ್ರವಾಗಿ ಗಾಯಗೊಂಡಿದ್ದ ಅಶ್ವಥ್ ಹಾಗೂ ಇತರೆ ಗಾಯಾಳುಗಳನ್ನು ಬಿ.ಜಿ.ನಗರದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಅಶ್ವಥ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಕಾರಿನ ಚಾಲಕ ನಿತೀಶ್‌ಗೆ ಸಣ್ಣಪುಟ್ಟ ಗಾಯವಾಗಿದ್ದರೆ, ಪ್ರತಾಪ್ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಶ್ವಥ್ ಮೃತ ದೇಹವನ್ನು ಪರೀಕ್ಷೆ ಮಾಡಿ ವಾರಸುದಾರರಿಗೆ ನೀಡಲಾಯಿತು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.