ತಮ್ಮ ಬದುಕಿನ ಹಕ್ಕಿಗಾಗಿ ಮಾತ್ರವೇ ಹುಲಿಗಳ ಹೋರಾಟ
ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಚಟುವಟಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಸರಗೂರು, ಹುಣಸೂರು, ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಹುಲಿಗಳು ಕಾಡು ಗಡಿಯಾಚೆಗೂ ಬಂದು, ಹಸುಗಳು, ಮೇಕೆ ಹಾಗೂ ಕೆಲ ಸಂದರ್ಭಗಳಲ್ಲಿ ಮಾನವರ ಮೇಲೂ ದಾಳಿ ನಡೆಸುತ್ತಿರುವುದು ಕಳವಳಕಾರಿ ಬೆಳವಣಿಗೆ. ಮೈಸೂರಿನ ಮುಳ್ಳೂರು ಗ್ರಾಮದ ರೈತ ರಾಜಶೇಖರ್ ಹುಲಿ ದಾಳಿಯಿಂದ ಸಾವಿಗೀಡಾದ ಘಟನೆ ಜನಮನವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯು ಆಕಸ್ಮಿಕವಲ್ಲ, ಅದು ಕಾಡು ಮತ್ತು ಮಾನವನ ನಡುವೆ ಬೆಳೆಯುತ್ತಿರುವ ಅಸಮತೋಲನದ ಎಚ್ಚರಿಕೆಯ ಘಂಟೆಯಾಗಿದೆ.
ಹುಲಿ ಕಾಡಿನಿಂದ ಹೊರ ಬರುತ್ತಿರುವುದಕ್ಕೆ ಹಲವು ಕಾರಣಗಳಿವೆ. ನಂಟಾದ ಅಂಶಗಳಿವೆ. ಕಾಡಿನ ಒಳಭಾಗದಲ್ಲಿ ಆಹಾರದ ಕೊರತೆ, ಕಾಡು ಪ್ರದೇಶಗಳ ಕ್ಷೀಣತೆ, ಅರಣ್ಯ ಪ್ರದೇಶದ ಮಧ್ಯೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು – ಇವೆಲ್ಲವೂ ಸೇರಿ ಹುಲಿಯನ್ನು ಅದರ ಸಹಜ ವಾಸಸ್ಥಳದಿಂದ ಹೊರಗಡೆ ಕಾಲಿಡುವಂತೆ ಮಾಡುತ್ತಿವೆ. ಮನುಷ್ಯ ಪ್ರಗತಿಯ ಹೆಸರಿನಲ್ಲಿ ಕಾಡು ಕತ್ತರಿಸುವುದು, ಅರಣ್ಯ ಪ್ರದೇಶಗಳ ಮಧ್ಯೆ ರಸ್ತೆ ನಿರ್ಮಾಣ, ವಿದ್ಯುತ್ ಲೈನ್, ಕಾಫಿ ತೋಟಗಳು ಮತ್ತು ಹಳ್ಳಿಗಳ ವಿಸ್ತರಣೆ ಈ ಎಲ್ಲವೂ ಹುಲಿಯನ್ನು ಕಾಡಿನ ಹೊರಗೆ ತಳ್ಳಿವೆ.
ಇದನ್ನು ಓದಿ: ಮೈಸೂರಿನ ಸರಗೂರಲ್ಲಿ ನಿಲ್ಲದ ಹುಲಿ ದಾಳಿ ; ವ್ಯಾಘ್ರನ ದಾಳಿಗೆ ಮತ್ತೊರ್ವ ಬಲಿ
ಹುಲಿ ಕಾಡಿನಿಂದ ಹೊರ ಬಂದು, ತನ್ನ ಬದುಕಿಗಾಗಿ ಹೊಸ ಪ್ರದೇಶವನ್ನು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಇತ್ತೀಚಿನ ದಾಳಿಗಳ ಹಿಂದೆ ಮತ್ತೊಂದು ಅಂಶವೂ ಇದೆ- ಹುಲಿಗಳ ಸಂಖ್ಯೆಯ ಏರಿಕೆ. ಸಂರಕ್ಷಣಾ ಕ್ರಮಗಳಿಂದಾಗಿ ಕಾಡು ಪ್ರದೇಶಗಳಲ್ಲಿ ಹುಲಿ ಸಂಖ್ಯೆ ಹೆಚ್ಚಾಗಿದೆ. ಆದರೆ ಸಂಖ್ಯೆಗೆ ಅನುಗುಣವಾಗಿ ಅವುಗಳ ವಾಸಸ್ಥಳ ಮತ್ತು ಆಹಾರ ಲಭ್ಯತೆ ಏರಿಕೆ ಕಾಣದಿದ್ದರೆ, ಹುಲಿಗಳು ತಮ್ಮ ವ್ಯಾಪ್ತಿಯಿಂದ ಹೊರಬರುವುದು ಸಹಜ. ಈ ವಿಸ್ತರಣೆ ಬಹು ಬಾರಿ ಮಾನವ ವಾಸದ ಪ್ರದೇಶದ ಗಡಿಯನ್ನೂ ದಾಟುತ್ತದೆ. ಹುಲಿ ಮಾನವನ ಶತ್ರುವಲ್ಲ; ಅದು ಕೇವಲ ತನ್ನ ಬದುಕಿಗಾಗಿ ಹೋರಾಡುತ್ತಿದೆ. ಆದರೆ ನಾವು ಅದರ ಬದುಕಿನ ಅಂಗಳವನ್ನು ನಿಧಾನವಾಗಿ ಕಿತ್ತುಕೊಳ್ಳುತ್ತಿದ್ದೇವೆ. ಕಾಡಿನ ನದಿಗಳ ತಟಗಳಲ್ಲಿ ನಡೆಯುತ್ತಿರುವ ಮರಕಡಿತ, ಕಾಫಿ ಮತ್ತು ಮೆಣಸು ತೋಟಗಳ ವಿಸ್ತರಣೆ, ಹೊಸ ರಸ್ತೆ ಯೋಜನೆಗಳು ಮಾರಕವಾಗಿದ್ದು, ಹುಲಿ-ಮಾನವ ಸಂಘರ್ಷಕ್ಕೆ ಕಾರಣವಾಗಿವೆ. ಈ ದಾಳಿಗಳ ನಂತರ ಸಾಮಾನ್ಯ ಜನರಲ್ಲಿ ಹುಲಿಯ ಮೇಲೆ ಕೋಪ ಮೂಡುವುದು ಸಹಜ. ಹುಲಿಯನ್ನು ಕೊಲ್ಲುವುದು ಅಥವಾ ಕಾಡಿನಿಂದ ದೂರಕ್ಕೆ ಕಳುಹಿಸುವುದು ತಾತ್ಕಾಲಿಕ ನಿರ್ಣಯ ಮಾತ್ರ. ನಿಜವಾದ ಪರಿಹಾರವೆಂದರೆ – ಕಾಡು ಮತ್ತು ಮಾನವ ಗಡಿಯನ್ನು ಬಲಪಡಿಸುವುದು, ಆಹಾರ ಸರಪಳಿಯನ್ನು ಪುನಃ ಸ್ಥಾಪಿಸುವುದು, ಮತ್ತು ಮಾನವನ ಚಟುವಟಿಕೆಗಳನ್ನು ನಿಯಂತ್ರಿಸುವುದು. ಸರ್ಕಾರ ಹಾಗೂ ಅರಣ್ಯ ಇಲಾಖೆ ಈ ದಿಕ್ಕಿನಲ್ಲಿ ಹೆಚ್ಚು ಸಂಯೋಜಿತವಾಗಿ ಕೆಲಸ ಮಾಡಬೇಕಾಗಿದೆ. ಪ್ರತಿ ಬಾರಿ ದಾಳಿ ನಡೆದಾಗ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಜನರನ್ನು ಸಮಾಧಾನಪಡಿಸುತ್ತಾರೆ. ಆದರೆ ಜನರು ಕೇಳುತ್ತಿರುವುದು ಭರವಸೆಗಳಲ್ಲ, ದೃಢವಾದ ಕ್ರಮಗಳು. ಕಾಡು ಗಡಿಯಲ್ಲಿರುವ ಗ್ರಾಮಗಳ ಜನರ ಜೀವನವೇ ಆತಂಕದ ಮಧ್ಯೆ ಸಾಗುತ್ತಿದೆ.
ಕಾಡಿನ ಬಳಿ ಹಸುಗಳನ್ನು ಮೇಯಿಸಲು ಹೋಗುವವರು ಹಿಂದಿರುಗಿ ಬರುವರೇ ಎಂಬ ಭಯ ಹೆಚ್ಚಾಗಿದೆ. ಈ ಭಯ ಕೇವಲ ಹುಲಿಯಿಂದಲ್ಲ, ನಮ್ಮ ಯೋಜನೆಗಳ ಅಸಮರ್ಪಕತೆಯಿಂದ. ಹುಲಿ ನಮ್ಮ ರಾಜ್ಯದ ಗೌರವ. ಅದರ ಕಣ್ಣುಗಳಲ್ಲಿ ಕಾಡಿನ ಬಲ ಇದೆ. ಅದರ ಹೆಜ್ಜೆಗಳಲ್ಲಿ ಪರಿಸರದ ಸಮತೋಲನ ಅಡಗಿದೆ. ಆದರೆ ನಾವು ಅದನ್ನು ಕಾಡಿನಿಂದ ಹೊರಹಾಕಿ, ರಸ್ತೆ ಪಕ್ಕದ ಹುಲ್ಲುಗಾವಲಿನ ಪ್ರಾಣಿ ಮಾಡುತ್ತಿದ್ದೇವೆ. ಈ ಸ್ಥಿತಿಯು ಮುಂದುವರಿದರೆ, ಹುಲಿ ದಾಳಿ ಸುದ್ದಿ ಹೊಸದಾಗುವುದಿಲ್ಲ. ಹುಲಿಯನ್ನು ಕಾಡಿನೊಳಗೆ ಇರಿಸಲು, ಮೊದಲು ಕಾಡನ್ನು ಕಾಡಿನಂತೆ ಉಳಿಸಬೇಕು. ಸರ್ಕಾರವು ಕೇವಲ ಪ್ರತಿಕ್ರಿಯಾತ್ಮಕ ಕ್ರಮವಲ್ಲ, ಸಂರಕ್ಷಣಾ ಕ್ರಮಗಳಿಗೆ ಒತ್ತು ನೀಡಬೇಕು. ಹುಲಿ ಹೊರ ಬರುವುದು ಕೇವಲ ಕಾಡಿನ ಸಮಸ್ಯೆಯಿಂದ ಅಲ್ಲ. ಇದು ಪ್ರಕೃತಿಯನ್ನು ಉಪೇಕ್ಷಿಸಿ ನಾವು ಮಾಡುತ್ತಿರುವ ತಪ್ಪುಗಳ ನಿದರ್ಶನ.
ನಾವು ಹುಲಿಯ ಕಾಡನ್ನು ಕಾಪಾಡದಿದ್ದರೆ, ಅದು ನಮ್ಮ ಬದುಕಿನ ಗಡಿಗಳನ್ನೇ ದಾಟುತ್ತದೆ. ಕಾಡು ಸುರಕ್ಷಿತವಾಗಿದ್ದರೆ, ಹುಲಿ ಸುರಕ್ಷಿತವಾಗಿರುತ್ತದೆ; ಹುಲಿ ಸುರಕ್ಷಿತವಾಗಿದ್ದರೆ, ನಾವೂ ಸುರಕ್ಷಿತರಾಗಿರುತ್ತೇವೆ.
” ಹುಲಿ ನಮ್ಮ ರಾಜ್ಯದ ಗೌರವ. ಅದರ ಕಣ್ಣುಗಳಲ್ಲಿ ಕಾಡಿನ ಬಲ ಇದೆ. ಅದರ ಹೆಜ್ಜೆಗಳಲ್ಲಿ ಪರಿಸರದ ಸಮತೋಲನ ಅಡಗಿದೆ. ಆದರೆ ನಾವು ಅದನ್ನು ಕಾಡಿನಿಂದ ಹೊರಹಾಕಿ, ರಸ್ತೆ ಪಕ್ಕದ ಹುಲ್ಲುಗಾವಲಿನ ಪ್ರಾಣಿ ಮಾಡುತ್ತಿದ್ದೇವೆ. ಈ ಸ್ಥಿತಿಯು ಮುಂದುವರಿದರೆ, ಹುಲಿ ದಾಳಿ ಸುದ್ದಿ ಹೊಸದಾಗುವುದಿಲ್ಲ”
-ಶ್ರೇಯಸ್ ದೇವನೂರು,
ವನ್ಯಜೀವಿ ಛಾಯಾಗ್ರಾಹಕ





