ಜನನಾಯಕನ ಪೌರುಷವನ್ನು ಕೆಣಕುತ್ತಿದ್ದಾರೆ ಸಿದ್ದು ಆಪ್ತರು
ರಾಜ್ಯದ ಆಡಳಿತ ಯಂತ್ರದ ಚುರುಕಿಗೆ ಸಚಿವ ಸಂಪುಟ ಪುನರ್‌ರಚಿಸಬೇಕೆಂಬ ಒತ್ತಾಸೆಯೂ ಇದೆ
ಕಳೆದ ವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಕೆ.ಎನ್.ರಾಜಣ್ಣ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದರು. ಈ ಪೈಕಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕಾಂಪ್ರಮೈಸ್ ನಾಯಕರಾಗಿದ್ದಾರೆ ಎಂದರೆ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಮೊದಲಿನಂತಿಲ್ಲ; ಅಸಹಾಯಕರಾಗಿದ್ದಾರೆ ಎಂದರು.
ಹೀಗೆ ಸಿದ್ದರಾಮಯ್ಯ ಅವರ ಬಗ್ಗೆ ಇಂತಹ ಮಾತುಗಳನ್ನಾಡಿದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಅವರಿಬ್ಬರೂ ಸಿದ್ದು ಬ್ರಿಗೇಡ್‌ನ ಫ್ರಂಟ್‌ಲೈನಿನಲ್ಲಿರುವವರು. ಅಧಿಕಾರ ಹಂಚಿಕೆಯ ಬಗ್ಗೆ ಮೊದಲು ಕೇಳಿ ಬಂತಲ್ಲ ಶುರುವಿನ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ, ತದನಂತರದ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಎಂಬ ಮಾತು ಕೇಳಿದಾಗ ಅದಕ್ಕೆ ನೇರವಾಗಿ ಪ್ರತಿರೋಧ ಒಡ್ಡಿದವರು ಅವತ್ತು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ.
ಯಾವ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಹುzಯಿಂದ ಕೆಳಗಿಳಿಯುವುದಿಲ್ಲ. ಯಾಕೆಂದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿದ್ದು ಪಕ್ಷದ ಶಾಸಕಾಂಗ ಸಭೆ. ಹೀಗಾಗಿ ನಾಯಕತ್ವ ಬದಲಾವಣೆಯಂತಹ ವಿಷಯ ಮುಂಚೂಣಿಗೆ ಬಂದರೆ ಪುನಃ ಅದು ಪಕ್ಷದ ಶಾಸಕಾಂಗ ಸಭೆಯ ತೀರ್ಮಾನವಾಗಬೇಕು ಎಂದವರು ಕೆ.ಎನ್.ರಾಜಣ್ಣ. ಅಷ್ಟೇ ಅಲ್ಲ, ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ. ಕೆ.ಶಿವಕುಮಾರ್ ಮಧ್ಯೆ ಅಧಿಕಾರ ಹಂಚಿಕೆ ಒಪ್ಪಂದ ಆಗಿಯೇ ಇಲ್ಲ ಎಂದವರೂ ಕೆ.ಎನ್.ರಾಜಣ್ಣ.
ವಸ್ತುಸ್ಥಿತಿ ಎಂದರೆ ಯಾವಾಗ ರಾಜಣ್ಣ ಅವರು ಸಿದ್ದರಾಮಯ್ಯ ಅವರ ನಾಯಕತ್ವದ ಪರ ನಿಂತರೋ, ಇದಾದ ನಂತರ ಸಿದ್ದರಾಮಯ್ಯ ಅವರ ಸಂಪುಟದ ಹಲವು ಸಚಿವರು ಗಟ್ಟಿಯಾಗಿ ಸಿದ್ದು ಪರ ನಿಂತರು. ರಾಜಣ್ಣ ನಿಂತ ಕಾರಣಕ್ಕಾಗಿಯೇ ಅವರು ಸಿಎಂ ಪರ ನಿಂತರು ಅಂತ ಇದರರ್ಥವಲ್ಲ. ಬದಲಿಗೆ ಸಿದ್ದರಾಮಯ್ಯ ಅವರ ನಾಯಕತ್ವದ ಪರ ಮೊದಲು ಗಟ್ಟಿಯಾಗಿ ಧ್ವನಿ ಎತ್ತಿದವರು ರಾಜಣ್ಣ.
ಇದಾದ ನಂತರ ಅಧಿಕಾರ ಹಂಚಿಕೆಯ ವಿಷಯದಲ್ಲಿ ಹಲವು ಸಚಿವರು, ನಾಯಕರು ಸಿದ್ದರಾಮಯ್ಯ ಅವರ ಪರವಾಗಿ ನಿಂತರು. ಇದರಲ್ಲಿ ದೊಡ್ಡ ಮಟ್ಟದ ಗಮನ ಸೆಳೆದಿದ್ದು ಫೋರ್ ಮ್ಯಾನ್ ಆರ್ಮಿ. ಈ ಫೋರ್ ಮ್ಯಾನ್ ಆರ್ಮಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರಿದ್ದರು. ಯಾವಾಗ ಈ -ರ್‌ಮ್ಯಾನ್ ಅರ್ಮಿ ತಲೆ ಎತ್ತಿತೋ ಇದಾದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಯಾಂಪಿನ ಧ್ವನಿ ಸಣ್ಣದಾಯಿತು.
ಗಮನಿಸಬೇಕಾದ ಸಂಗತಿ ಎಂದರೆ ಈ ಫೋರ್ ಮ್ಯಾನ್ ಆರ್ಮಿಯಲ್ಲಿದ್ದ ಬಹುತೇಕರು ಸಿಎಂ ಕ್ಯಾಂಡಿಡೇಟುಗಳೇ. ಅದರಲ್ಲೂ ಪರಮೇಶ್ವರ್ ಮತ್ತು ಮಹದೇವಪ್ಪ ಅವರು ರಾಜಕಾರಣದಲ್ಲಿ ಸುದೀರ್ಘ ಕಾಲದಿಂದ ಇರುವವರು. ಹೆಚ್.ಸಿ.ಮಹದೇವಪ್ಪ ಅವರಂತೂ ನಾಡಿನ ಜನಪರ ಚಳವಳಿಗಳ ಶಕ್ತಿಯಾಗಿ, ಅಹಿಂದ ವರ್ಗಗಳ ಪ್ರಬಲ ಸಂಘಟಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಬಲ ತಂದವರು. ಹೀಗಾಗಿ ಫೋರ್‌ಮ್ಯಾನ್ ಅರ್ಮಿಯ ಒಂದೊಂದು ಹೆಜ್ಜೆಗಳೂ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬಲ ತುಂಬುತ್ತಾ ಹೋದವು.
ಮುಂದೆ ಕಾಲ ಕ್ರಮೇಣ ದಿಲ್ಲಿ ಲೆವೆಲ್ಲಿನಿಂದ ಹರಿದಾಡಿದ ಸುದ್ದಿ, ಡಿಕೆಶಿಗೆ ಎರಡೂವರೆ ವರ್ಷದ ನಂತರ ಅಧಿಕಾರ ಬಿಟ್ಟುಕೊಡಬೇಕು ಅಂತ ಸುರ್ಜೇವಾಲಾ,ವೇಣುಗೋಪಾಲ, ಖರ್ಗೆಯವರಂತಹ ನಾಯಕರ ಸಮ್ಮುಖದಲ್ಲಿ ಮಾತುಕತೆಯಾಗಿತ್ತು ಅಂತ ಕೇಳಿ ಬಂತು. ಅದರೆ ಇಂತಹ ಒಪ್ಪಂದ ಅಗಬೇಕಾಗಿದ್ದು ಯಾರ ಸಮ್ಮುಖದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧೀಯ ಸಮ್ಮುಖದಲ್ಲಿ. ಆದರೆ ಇವರಿಬ್ಬರೂ ಮಾತುಕತೆಯ ಭಾಗವಲ್ಲ ಎಂದಾದ ಮೇಲೆ ಸಿದ್ದರಾಮಯ್ಯ ಅವರ ಪರವಾದ ನಿಲುವುಗಳು ಮತ್ತೆ ಗಟ್ಟಿಯಾದವು. ಸ್ವತಃ ಸಿದ್ಧರಾಮಯ್ಯ ನವರು ದೆಹಲಿಗೆ ಹೋಗಿ ನನ್ನ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಯಾವ ಮಾತುಕತೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಇಷ್ಟು ಸ್ಪಷ್ಟವಾಗಿ ಮಾತನಾಡಿದ ನಂತರವೂ ತಮಗೆ ಸಿಎಂ ಹುದ್ದೆ ದೊರೆಯಲೇಬೇಕು ಅಂತ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದ ರೀತಿ ಮತ್ತು ಈ ವಿಷಯದಲ್ಲಿ ಹಳೆ ಮೈಸೂರು ಭಾಗದ ಕೆಲ ಶಾಸಕರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಸಿಗಬೇಕು ಎಂದು ವಾದಿಸತೊಡಗಿದ ರೀತಿ ಒಂದು ಗೊಂದಲವನ್ನು ಮೂಡಿಸಿದ್ದು ನಿಜ. ಹೀಗಾಗಿ ಅಧಿಕಾರ ಹಂಚಿಕೆಯ ವಿಷಯ ಯಾವುದೇ ತಿರುವು ಪಡೆಯಬಹುದು; ಪ್ರಮುಖ ತೀರ್ಮಾನಗಳನ್ನು ತೆಗೆದು ಕೊಳ್ಳುವುದು ಬೇಡ ಎಂಡು ಅಧಿಕಾರಶಾಹಿ ಬಯಸತೊಡಗಿತು. ಪರಿಣಾಮ ಯಾರೇನೇ ಹೇಳಿದರೂ ಆಡಳಿತ ಯಂತ್ರದ ಮೇಲೆ ಅದು ವ್ಯತಿರಿಕ್ತ ಪರಿಣಾಮಗಳನ್ನು ಬೀರತೊಡಗಿತು.
ಅಧಿಕಾರಶಾಹಿಯಲ್ಲಿನ ಈ ಗೊಂದಲ ಹಾಗೇ ಮುಂದುವರಿದಿದೆ. ಅಷ್ಟೇ ಅಲ್ಲ ಅಧಿಕಾರ ಹಂಚಿಕೆಯ ವಿಷಯ ಮುಂದೇನಾಗಲಿದೆ?ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿದೆ. ಈ ಗೊಂದಲ ಬಗೆಹರಿಯಬೇಕು ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ ಎಂಬ ಸಂದೇಶ ರವಾನೆಯಾಗಬೇಕು. ಅಂತಹ ಸಂದೇಶ ರವಾನೆಯಾಗಬೇಕು ಎಂದರೆ ಈಗ ಸಿದ್ದರಾಮಯ್ಯ ಅವರು ಬಯಸಿರುವ ಬೆಳವಣಿಗೆಗಳು ನಡೆಯಬೇಕು. ಅರ್ಥಾತ್, ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ನೀಡಲು ಸಚಿವ ಸಂಪುಟವನ್ನು ಪುನರ್‌ರಚಿಸಬೇಕು ಅಂತ ಸಿದ್ದರಾಮಯ್ಯ ಅವರು ಏನು ಬಯಸಿದ್ದಾರೋ ಅದು ಸಾಧ್ಯವಾಗಬೇಕು.
ಆದರೆ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿ ಆದ ನಂತರ ಸಿದ್ಧರಾಮಯ್ಯ ಅವರು ಒಂದಲ್ಲ ಹಲವು ಬಾರಿ ಸಂಪುಟ ಪುನರ್ ರಚನೆಗೆ ಪ್ರಯತ್ನಿಸಿzರೆ. ಆದರೆ ಯಾವಾಗೆಲ್ಲ ಸಂಪುಟ ಪುನರ್ ರಚನೆಗೆ ಗ್ರೀನ್ ಸಿಗ್ನಲ್ ಕೊಡಿ ಅಂತ ಅವರು ರಾಹುಲ್ ಗಾಂಧಿ ಅವರನ್ನು ಕೋರಿದ್ದಾರೋ ಆಗೆಲ್ಲ ಸ್ವಲ್ಪ ಕಾಲ ತಡೆಯುವಂತೆ ರಾಹುಲ್ ಗಾಂಧಿಯವರು ಅವರಿಗೆ ಹೇಳಿದ್ದಾರೆ. ಅವರು ಹಾಗೆ ಹೇಳುವುದರ ಹಿಂದೆ ಕಾಣುತ್ತಿರುವುದು ಡಿ.ಕೆ.ಶಿವಕುಮಾರ್ ಅವರ ನೆರಳು.
ಅಂದ ಹಾಗೆ ಸಿದ್ದರಾಮಯ್ಯ ಸಂಪುಟ ಪುನರ್ ರಚನೆಗೆ ಅವಕಾಶ ಕೇಳಿದಾಗಲೆಲ್ಲ ಡಿ.ಕೆ.ಶಿವಕುಮಾರ್ ಅವರು ದಿಲ್ಲಿ ನಾಯಕರ ಮುಂದೆ ಅಪಸ್ವರ ಎತ್ತುತ್ತಾರೆ. ಅಧಿಕಾರ ಹಂಚಿಕೆಯ ಪ್ರಶ್ನೆಯನ್ನು ಇತ್ಯರ್ಥಗೊಳಿಸುವವರೆಗೆ ನೀವು ಸಂಪುಟ ಪುನರ್ ರಚನೆಗೆ ಅವಕಾಶ ಕೊಡಬಾರದು. ಹಾಗೇನಾದರೂ ಕೊಟ್ಟರೆ ನನ್ನ ಬೇಡಿಕೆಯನ್ನು ತಿರಸ್ಕರಿಸಿ ನೀವು ಸಿದ್ಧರಾಮಯ್ಯ ಅವರ ಬೇಡಿಕೆಯನ್ನು ಪುರಸ್ಕರಿಸಿದಂತಾಗುತ್ತದೆ. ಹಾಗೇನಾದರೂ ಪುರಸ್ಕರಿಸಿದರೆ ಅದರರ್ಥ ಸಿದ್ದರಾಮಯ್ಯ ಅವರ ನಾಯಕತ್ವ ಮುಂದುವರಿಯಲಿ ಅಂತ ನೀವು ಹೇಳಿದಂತೆ ಅನ್ನುತ್ತಾರೆ. ಎಷ್ಟೇ ಅದರೂ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ದುಡಿದವರು.ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದವರು.ಕಾಲ ಕಾಲಕ್ಕೆ ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಿದವರು.ಹೀಗಾಗಿ ಅವರ ಮಾತನ್ನು ನಿರ್ಲಕ್ಷಿಸಲು ರಾಹುಲ್ ಗಾಂಧಿ ಬಯಸುವುದಿಲ್ಲ ಅಥವಾ ನಿರ್ಲಕ್ಷಿಸದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೀಡುವ ಸಲಹೆಯನ್ನು ಮೀರುವುದಿಲ್ಲ. ಇದು ಸಹಜವಾಗಿಯೇ ಸಿದ್ದರಾಮಯ್ಯ ಅವರ ಮುಜುಗರಕ್ಕೆ ಕಾರಣ. ಆದರೆ ಇಂತಹ ಮುಜುಗರವನ್ನು ಅವರು ಎಷ್ಟು ದಿನ ಸಹಿಸಿಕೊಳ್ಳಬೇಕು? ಎಷ್ಟೇ ಆದರೂ ಜನನಾಯಕ.
ಅಂದ ಹಾಗೆ ರಾಮಾಯಣ ಮಹಾಕಾವ್ಯದಲ್ಲಿ ಒಂದು ಸನ್ನಿವೇಶ ಬರುತ್ತದೆ. ರಾವಣನಿಂದ ಅಪಹೃತಳಾದ ಸೀತೆಯನ್ನು ಹುಡಕಲು ಲಂಕೆಗೆ ಹೋಗಲು ಶ್ರೀರಾಮ ಮತ್ತು ಸುಗ್ರೀವನ ನೇತೃತ್ವದ ಕಪಿ ಸೈನ್ಯ ತಯಾರಾಗಿರುತ್ತದೆ. ಆದರೆ ಸಮುದ್ರೋಲ್ಲಂಘನ ಮಾಡುವವರು ಯಾರು? ಹೀಗಾಗಿ ಜಾಂಬವಂತ ಸೇರಿದಂತೆ ಸೈನ್ಯದ ಪ್ರಮುಖರು ಆಂಜನೇಯನನ್ನು ತಯಾರು ಮಾಡುತ್ತಾರೆ.ಅದಕ್ಕಾಗಿ ಆತನ ಶಕ್ತಿ-ಸಾಮರ್ಥ್ಯಗಳೇನು?ಅಂತ ಅವನಿಗೇ ಬಣ್ಣಿಸಿ ಹೇಳುತ್ತಾರೆ.ಯಾವಾಗ ಅವರು ತನ್ನ ಸಾಮರ್ಥ್ಯವನ್ನು ಬಣ್ಣಿಸತೊಡಗುತ್ತಾರೋ ಆಗ ಅಂಜನೇಯ ಎದೆ ಉಬ್ಬಿಸಿ ಮೇಲೆದ್ದು ನಿಲ್ಲುತ್ತಾನೆ. ಅಷ್ಟೇ ಅಲ್ಲ,ಲೀಲಾಜಲವಾಗಿ ಸಮುದ್ರೋಲ್ಲಂಘನ ಮಾಡಿ ಲಂಕೆಗೆ ಹೋಗುತ್ತಾನೆ.ರಾವಣನ ವಶದಲ್ಲಿದ್ದ ಸೀತೆಯನ್ನು ಭೇಟಿ ಮಾಡಿ ಶ್ರೀರಾಮನ ಸಂದೇಶವನ್ನು ಸೀತೆಗೆ ನೀಡಿ,ರಾಮನಿಗಾಗಿ ಸೀತೆಯ ಸಂದೇಶವನ್ನು ಹೊತ್ತು ಮರಳುತ್ತಾನೆ.
ಇವತ್ತು ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಅವರಂತಹ ಆಪ್ತರು ಮಾಡುತ್ತಿರುವುದು ಇದೇ ಕೆಲಸ. ಅರ್ಥಾತ್, ಕಾಂಪ್ರಮೈಸ್ ನಾಯಕ, ಅಸಹಾಯಕ ನಾಯಕ ಅಂತೆಲ್ಲ ಹೇಳುವ ಮೂಲಕ ಒಬ್ಬ ಜನನಾಯಕನ ಪೌರುಷವನ್ನು ಅವರು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕೆರಳುವ ಸಿದ್ದರಾಮಯ್ಯ ಒಮ್ಮೆ ಮೇಲೆದ್ದು ನಿಂತರೆ ಸಾಕು. ನೇರವಾಗಿ ದಿಲ್ಲಿ ದಂಡಯಾತ್ರೆಗೆ ಸಜಗುತ್ತಾರೆ. ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಪಟ್ಟಾಗಿ ಕುಳಿತು ಅಧಿಕಾರ ಹಂಚಿಕೆ, ಸಂಪುಟ ವಿಸ್ತರಣೆಯ ಗೋಜಲನ್ನು ಸೆಟಲ್ ಮಾಡಿ ಬರಲು ತಯಾರಾಗುತ್ತಾರೆ. ಹಾಗೆ ಅವರು ತಯಾರಾಗಲಿ ಎಂಬುದೇ ಜಾರಕಿಹೊಳಿ, ರಾಜಣ್ಣ ಅವರಂತಹ ಆಪ್ತರ ನಿರೀಕ್ಷೆ. ಅವರ ಈ ನಿರೀಕ್ಷೆ ನಿರ್ಣಾಯಕ ಫಲಿತಾಂಶವನ್ನು ತರುವುದಂತೂ ಗ್ಯಾರಂಟಿ. ಅದು ಪ್ಲಸ್ಸೇ ಆಗಲಿ, ಮೈನಸ್ಸೇ ಆಗಲಿ ಎಂಬುದು ಅವರ ಲೆಕ್ಕಾಚಾರ. ಅವರ ಹೇಳಿಕೆಗಳ ಅರ್ಥ ಇದೇ.
” ಮುಜುಗರದ ಸನ್ನಿವೇಶಗಳನ್ನು ಬಹುಕಾಲ ತಡೆದುಕೊಳ್ಳುವುದು ಜನನಾಯಕರಿಗೆ ಕಷ್ಟ. ಇದು ಅವರ ಆಪ್ತರ ಪಡೆಗೆ ಚೆನ್ನಾಗಿ ಗೊತ್ತು. ಹೀಗಾಗಿ ಅವರನ್ನು ಕೆರಳಿಸಿದರೆ ಮೇಲೆದ್ದು ನಿಲ್ಲುತ್ತಾರೆ. ದಿಲ್ಲಿಯಲ್ಲಿ ತಮಗೆ ಅಗುತ್ತಿರುವ ಮುಜುಗರದ ಸನ್ನಿವೇಶವನ್ನು ಎದುರಿಸಲು ಸಜ್ಜಾಗುತ್ತಾರೆ ಎಂಬುದು ಈ ಆಪ್ತರ ಯೋಚನೆ.”





