Mysore
23
overcast clouds

Social Media

ಬುಧವಾರ, 29 ಜುಲೈ 2026
Light
Dark

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ

ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರು ವುದು ಜಾಗತಿಕ ಮಟ್ಟದಲ್ಲಿ ಭಾರತದ ಸಂರಕ್ಷಣಾ ಪ್ರಯತ್ನಗಳಿಗೆ ದೊರೆತ ದೊಡ್ಡ ಮಾನ್ಯತೆಯಾಗಿದೆ. ಅರಣ್ಯ ಇಲಾಖೆ, ವೈಜ್ಞಾನಿಕ ಸಂಶೋಧನೆ, ಕಠಿಣ ಕಾನೂನುಗಳು, ಅರಣ್ಯ ಸಿಬ್ಬಂದಿಯ ನಿರಂತರ ಶ್ರಮ ಹಾಗೂ ಸ್ಥಳೀಯ ಸಮುದಾಯಗಳ ಸಹಭಾಗಿತ್ವದಿಂದ ಈ ಸಾಧನೆ ಸಾಧ್ಯವಾಗಿದೆ.

ಆದರೆ, ಈ ಯಶಸ್ಸಿನ ಹಿಂದೆ ಮತ್ತೊಂದು ಮೌನವಾದ ಸವಾಲು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಅದು ಹವಾಮಾನ ಬದಲಾವಣೆ. ಬೇಟೆಯಾಡುವುದು, ಅರಣ್ಯ ನಾಶ ಮತ್ತು ಅಕ್ರಮ ಚಟುವಟಿಕೆಗಳ ಜೊತೆಗೆ ಈಗ ಹವಾಮಾನ ಬದಲಾವಣೆ ಹುಲಿಗಳ ಅಸ್ತಿತ್ವಕ್ಕೆ ದೀರ್ಘಕಾಲೀನ ಬೆದರಿಕೆಯಾಗುತ್ತಿದೆ. ಈ ಅಪಾಯವನ್ನು ಕಣ್ಣಿಗೆ ಕಾಣಲು ಸಾಧ್ಯವಾಗದಿದ್ದರೂ, ಅದರ ಪರಿಣಾಮಗಳು ಈಗಾಗಲೇ ಭಾರತದ ಹಲವು ಅರಣ್ಯ ಪ್ರದೇಶಗಳಲ್ಲಿ ಗೋಚರಿಸುತ್ತಿವೆ.

ಹವಾಮಾನ ಬದಲಾವಣೆ ಎಂದರೆ ಕೇವಲ ಉಷ್ಣಾಂಶ ಏರಿಕೆ ಮಾತ್ರವಲ್ಲ. ಅದು ಮಳೆಯ ಮಾದರಿಯಲ್ಲಿ ಬದಲಾವಣೆ, ದೀರ್ಘಕಾಲದ ಬರ, ಅತಿವೃಷ್ಟಿ, ಪ್ರವಾಹ, ಕಾಡ್ಗಿಚ್ಚು, ನೀರಿನ ಕೊರತೆ ಮತ್ತು ಪರಿಸರ ವ್ಯವಸ್ಥೆಯ ಸಂಪೂರ್ಣ ಅಸಮತೋಲನವನ್ನು ಉಂಟು ಮಾಡುವ ಪ್ರಕ್ರಿಯೆಯಾಗಿದೆ. ಈಬದಲಾವಣೆಗಳು ಒಂದೊಂದಾಗಿ ಸೇರಿ ಹುಲಿಗಳ ಬದುಕಿನ ಮೇಲೆ ಆಳವಾದ ಪರಿಣಾಮ ಬೀರುತ್ತಿವೆ.

ಹುಲಿ ಇರುವ ಅರಣ್ಯ ಆರೋಗ್ಯಕರವಾಗಿದೆ ಎಂಬುದಕ್ಕೆ ಅದು ಸೂಚಕ. ಆದರೆ ಹುಲಿ ಬದುಕಲು ಕೇವಲ ದಟ್ಟವಾದ ಕಾಡು ಸಾಕಾಗುವುದಿಲ್ಲ. ವರ್ಷಪೂರ್ತಿ ನೀರು, ಆರೋಗ್ಯಕರ ಬೇಟೆ ಪ್ರಾಣಿಗಳು, ವಿಶಾಲ ವಾಸಸ್ಥಳ ಮತ್ತು ನಿರಂತರವಾಗಿ ಸಂಪರ್ಕ ಹೊಂದಿರುವ ಅರಣ್ಯ ಪ್ರದೇಶಗಳು ಅಗತ್ಯ. ಈ ಅಂಶಗಳಲ್ಲಿ ಯಾವುದಾದರೂ ದುರ್ಬಲವಾದರೆ ಅದರ ಪರಿಣಾಮ ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಬೀಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿದೆ. ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಣ್ಣ ಕೆರೆಗಳು, ಹೊಳೆಗಳು ಮತ್ತು ನೈಸರ್ಗಿಕ ನೀರಿನ ಮೂಲಗಳು ಬೇಗ ಒಣಗುತ್ತಿವೆ. ನೀರಿಗಾಗಿ ಮೊದಲು ಜಿಂಕೆ, ಕಾಡುಹಂದಿ, ಕಾಡೆಮ್ಮೆ ಮತ್ತು ಇತರ ಸಸ್ಯಾಹಾರಿ ಪ್ರಾಣಿಗಳು ಸ್ಥಳಾಂತರಗೊಳ್ಳುತ್ತವೆ. ಅವುಗಳ ಹಿಂದೆ ಆಹಾರಕ್ಕಾಗಿ ಹುಲಿಗಳೂ ಚಲಿಸುತ್ತವೆ. ಹೀಗಾಗಿ ಹುಲಿಗಳು ಕಾಡಿನ ಅಂಚಿನ ಗ್ರಾಮಗಳ ಸಮೀಪ ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಇದು ಮಾನವ – ಹುಲಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಜಾನುವಾರುಗಳ ಮೇಲೆ ದಾಳಿ, ಕೃಷಿಭೂಮಿಗೆ ಹುಲಿಗಳ ಪ್ರವೇಶ ಹಾಗೂ ಕೆಲವೊಮ್ಮೆ ಮಾನವರ ಜೀವಹಾನಿಯಂತಹ ಘಟನೆಗಳು ಹೆಚ್ಚುತ್ತವೆ. ಹವಾಮಾನ ಬದಲಾವಣೆ ಕೇವಲಪರಿಸರ ಸಮಸ್ಯೆಯಾಗಿರದೆ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯೂ ಆಗಿದೆ.

ಇದರ ಉಷ್ಣಾಂಶ ಹೆಚ್ಚಾಗುವುದು, ಒಣ ಎಲೆಗಳು, ಕಡಿಮೆ ಆರ್ದ್ರತೆ ಮತ್ತು ಕೆಲವೊಮ್ಮೆ ಮಾನವ ನಿರ್ಲಕ್ಷ್ಯದಿಂದ ಕಾಡಿನಲ್ಲಿ ಬೆಂಕಿ ವ್ಯಾಪಕವಾಗಿ ಹರಡುತ್ತದೆ. ಬೆಂಕಿಯಿಂದ ಮರಗಳು ಮಾತ್ರ ಸುಡುವುದಿಲ್ಲ; ಲಕ್ಷಾಂತರ ಕೀಟಗಳು, ಪಕ್ಷಿಗಳ ಗೂಡುಗಳುಮತ್ತು ಹುಲ್ಲುಗಾವಲುಗಳು ನಾಶವಾಗುತ್ತವೆ. ಬೇಟೆ ಪ್ರಾಣಿಗಳ ವಾಸಸ್ಥಳ ಹಾಳಾಗುವುದರಿಂದ ಹುಲಿಗಳಿಗೂ ಆಹಾರ ಕೊರತೆ ಉಂಟಾಗುತ್ತದೆ.

ಹವಾಮಾನ ಬದಲಾವಣೆಯ ಮತ್ತೊಂದು ಪರಿಣಾಮವೆಂದರೆ ಅನ್ಯಜಾತಿಯ ಸಸ್ಯಗಳವೇಗವಾದ ವಿಸ್ತರಣೆ. ಕರ್ನಾಟಕ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಲಾಂಟಾನಾ, ಪಾರ್ಥೇನಿಯಂ ಮುಂತಾದ ಸಸ್ಯಗಳು ಸ್ಥಳೀಯ ಹುಲ್ಲುಗಾವಲು ಗಳನ್ನು ಆವರಿಸಿವೆ. ಇವುಗಳಿಂದ ಜಿಂಕೆ, ಸಾಂಬಾರ್ ಮೊದಲಾದ ಪ್ರಾಣಿಗಳಿಗೆ ಬೇಕಾದ ಮೇವು ಕಡಿಮೆ ಯಾಗುತ್ತದೆ. ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಕುಸಿದರೆ, ಅದರ ನೇರ ಪರಿಣಾಮ ಹುಲಿಗಳ ಮೇಲೆ ಬೀಳುತ್ತದೆ.ಪಶ್ಚಿಮ ಘಟ್ಟಗಳು ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯದ ಪ್ರದೇಶಗಳಲ್ಲಿ ಒಂದಾಗಿವೆ. ನಾಗರಹೊಳೆ, ಬಂಡೀಪುರ, ಭದ್ರ, ಬಿಆರ್‌ಟಿ, ಕಾಳಿ, ಭೀಮಗಢ ಸೇರಿದಂತೆ ಅನೇಕ ಅರಣ್ಯ ಪ್ರದೇಶಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನುಭವಿಸುತ್ತಿವೆ. ಮಳೆಯ ಅನಿಶ್ಚಿತತೆ, ಹೆಚ್ಚುತ್ತಿರುವ ಬೇಸಿಗೆ ಮತ್ತು ನೀರಿನ ಸಮಸ್ಯೆ ಕಾಡಿನ ಸ್ವರೂಪವನ್ನೇ ಬದಲಾಯಿಸುತ್ತಿವೆ.

ಇದೇ ಸಮಯದಲ್ಲಿ ಅಭಿವೃದ್ಧಿಯ ಒತ್ತಡವೂ ಹೆಚ್ಚುತ್ತಿದೆ. ಹೊಸ ರಸ್ತೆಗಳು, ರೈಲು ಮಾರ್ಗಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಗಣಿಗಾರಿಕೆ ಮತ್ತು ವಿವಿಧ ಮೂಲಸೌಕರ್ಯ ಯೋಜನೆಗಳು ಅರಣ್ಯಪ್ರದೇಶಗಳನ್ನು ವಿಭಜಿಸುತ್ತಿವೆ. ಹುಲಿಗಳು ತಮ್ಮ ವಂಶವೃದ್ಧಿ ಮತ್ತು ಆಹಾರಕ್ಕಾಗಿ ನೂರಾರು ಕಿಲೋಮೀಟರ್ ಸಂಚರಿಸುವ ಪ್ರಾಣಿಗಳು. ಆದರೆ ಅರಣ್ಯ ಸಂಪರ್ಕ ಕಡಿದುಹೋದರೆ ಅವು ಸಣ್ಣ ಪ್ರದೇಶಗಳಲ್ಲಿ ಸಿಲುಕಿಕೊಳ್ಳುತ್ತವೆ. ಇದರಿಂದಸಂತಾನೋತ್ಪತ್ತಿಯ ವೈವಿಧ್ಯ ಕಡಿಮೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ವನ್ಯಜೀವಿ ಕಾರಿಡಾರ್‌ಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಒಂದು ಅರಣ್ಯವನ್ನು ಮತ್ತೊಂದು ಅರಣ್ಯಕ್ಕೆ ಸಂಪರ್ಕಿಸುವ ನೈಸರ್ಗಿಕ ಮಾರ್ಗಗಳು ಉಳಿದರೆ ಮಾತ್ರ ಹುಲಿಗಳು ಸುರಕ್ಷಿತವಾಗಿ ಸಂಚರಿಸಬಲ್ಲವು. ಅಭಿವೃದ್ಧಿ ಯೋಜನೆಗಳಲ್ಲಿ ವನ್ಯಜೀವಿ ದಾಟು ಸೇತುವೆಗಳು, ಅಂಡರ್ ಪಾಸ್‌ಗಳು ಮತ್ತು ವೈಜ್ಞಾನಿಕ ಯೋಜನೆಗಳಿಗೆ ಆದ್ಯತೆ ನೀಡಬೇಕು. ಅರಣ್ಯ ಇಲಾಖೆಯವರಿಗೆ ಅಗತ್ಯವಾದ ಆಧುನಿಕ ತಂತ್ರಜ್ಞಾನ, ಸಿಬ್ಬಂದಿ, ವಾಹನಗಳು ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಹುಲಿ ಉಳಿದರೆ ಕಾಡು ಉಳಿಯುತ್ತದೆ ಎನ್ನುವುದು ಕೇವಲ ಘೋಷಣೆಯಲ್ಲ, ಅದು ವೈಜ್ಞಾನಿಕ ಸತ್ಯ.ಹುಲಿ ಆರೋಗ್ಯಕರ ಪರಿಸರ ವ್ಯವಸ್ಥೆಯ ಸಂಕೇತ.ಹುಲಿಯನ್ನು ರಕ್ಷಿಸುವುದು ಎಂದರೆ ಸಾವಿರಾರು ಸಸ್ಯಗಳು, ನೂರಾರು ಪಕ್ಷಿಗಳು, ಅನೇಕ ಸಸ್ತನಿಗಳು,ಕೀಟಗಳು ಹಾಗೂ ನೀರಿನ ಮೂಲಗಳನ್ನು ರಕ್ಷಿಸುವುದಾಗಿದೆ. ಅಂತಿಮವಾಗಿ ಇದೇ ಪರಿಸರ ವ್ಯವಸ್ಥೆಯೇ ಮಾನವನಿಗೂ ಜೀವಾಧಾರವಾಗಿದೆ. ಹವಾಮಾನ ಬದಲಾವಣೆಯ ವಿರುದ್ಧ ಗಂಭೀರ ಕ್ರಮಗಳನ್ನು ಕೈಗೊಳ್ಳುವುದು, ಅರಣ್ಯಗಳನ್ನು ಸಂರಕ್ಷಿಸುವುದು, ನೀರಿನ ಮೂಲಗಳನ್ನು ಪುನರುಜ್ಜೀವನ ಗೊಳಿಸುವುದು, ಕಾಡ್ಗಿಚ್ಚು ತಡೆಗಟ್ಟುವುದು, ವನ್ಯ ಜೀವಿ ಕಾರಿಡಾರ್‌ಗಳನ್ನು ಉಳಿಸುವುದು ಮತ್ತು ಅಭಿ ವೃದ್ಧಿ – ಪರಿಸರ ಸಮತೋಲನವನ್ನು ಸಾಧಿಸುವುದು ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿಯಾಗಿದೆ.

ಹವಾಮಾನ ಬದಲಾವಣೆಯನ್ನು ತಡೆಯುವುದು ಎಂದರೆ ಕೇವಲ ಭೂಮಿಯನ್ನು ರಕ್ಷಿಸುವುದಲ್ಲ; ಅದು ಭಾರತದ ಕಾಡುಗಳನ್ನು, ಹುಲಿಗಳನ್ನು ಮತ್ತು ಮುಂದಿನ ಪೀಳಿಗೆಯ ಪ್ರಕೃತಿ ಪರಂಪರೆಯನ್ನು ಉಳಿಸುವ ಜವಾಬ್ದಾರಿಯಾಗಿದೆ.

” ಅರಣ್ಯ ಸಿಬ್ಬಂದಿಯ ಸೇವೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸಬೇಕು. ಉರಿಯುವ ಬೇಸಿಗೆ, ಸುರಿಯುವ ಮಳೆ, ಕಾಡ್ಗಿಚ್ಚು, ಕಳ್ಳಬೇಟೆ ತಡೆ, ವನ್ಯಜೀವಿಗಳ ರಕ್ಷಣೆ, ನೀರಿನ ವ್ಯವಸ್ಥೆ ಮತ್ತು ನಿರಂತರಗಸ್ತು – ಇವೆಲ್ಲದರ ನಡುವೆ ಅವರು ಕಾರ್ಯನಿರ್ವಹಿಸುತ್ತಾರೆ. ಅವರ ಶ್ರಮವೇ ಭಾರತದ ಹುಲಿ ಸಂರಕ್ಷಣೆಯ ಬೆನ್ನೆಲುಬಾಗಿದೆ.”

 

 

Tags:
error: Content is protected !!