ಡಾ. ಶಿಲಿನಾ ಕೋಟೆ ಎನ್.
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ, ಸ್ತ್ರೀಶಕ್ತಿ ಮತ್ತು ಜನಜೀವನದೊಂದಿಗೆ ಬೆಸೆದುಕೊಂಡಿರುವ ಸಾಂಸ್ಕ ತಿಕ ಸಂಕೇತ ಗಳಾಗಿವೆ. ಅಂತಹ ಹಬ್ಬಗಳಲ್ಲಿ ಗೌರಿ ಹಬ್ಬಕ್ಕೂ ವಿಶಿಷ್ಟ ಸ್ಥಾನವಿದೆ.
ಗಣೇಶ ಚತುರ್ಥಿಯ ಮುನ್ನ ಆಚರಿಸುವ ಗೌರಿ ಹಬ್ಬವು ಸೌಭಾಗ್ಯ, ಸಮೃದ್ಧಿ, ಸಂತಾನ, ಕುಟುಂಬದ ಕ್ಷೇಮ ಮತ್ತು ಪ್ರಕೃತಿಯ ಫಲವತ್ತತೆಯನ್ನು ಸಂಕೇತಿಸುತ್ತದೆ. ಗ್ರಾಮೀಣ ಜನಜೀವನದಲ್ಲಿ ಮಳೆಯು ಬದುಕಿನ ಮೂಲಾಧಾರವಾಗಿರುವುದರಿಂದ ಗೌರಿಯನ್ನು ಮಳೆಯ ಆಶಯದೊಂದಿಗೆ ಕಲ್ಪಿಸಿಕೊಂಡಿರುವ ಜನಪದ ನಂಬಿಕೆಗಳೂ ಕಂಡುಬರುತ್ತವೆ. ಹೀಗಾಗಿ ಗೌರಿ ಎಂಬುದು ಇಲ್ಲಿ ಕೇವಲ ದೇವತೆಯಲ್ಲ; ಮಳೆ, ಭೂಮಿ ಮತ್ತು ಜೀವದಾಯಕ ಪ್ರಕೃತಿಯ ಸಂಕೇತವೂ ಹೌದು.
ಗೌರಿ ಹಬ್ಬದ ಸಂದರ್ಭದಲ್ಲಿ ನೆನಪಿಗೆ ಬರುವ ಮತ್ತೊಂದು ವಿಶಿಷ್ಟ ಅಂಶವೆಂದರೆ ಗೌರಿ ಹೂವು. ಬೆಂಕಿಯ ಕೆನ್ನಾಲಿಗೆಯಂತೆ ಕಾಣುವ ಈ ಹೂವು ಹಳದಿ, ಕೇಸರಿ ಮತ್ತು ಕೆಂಪು ಬಣ್ಣಗಳ ಅದ್ಭುತ ಸಂಯೋಜನೆಯನ್ನು ಹೊಂದಿದೆ. ಸಸ್ಯಶಾಸ್ತ್ರೀಯವಾಗಿ Eoswessb sothwdb ಎಂದು ಕರೆಯಲ್ಪಡುವ ಈ ಸಸ್ಯವು ಲಿಲಿಯೇಸಿ ಕುಟುಂಬಕ್ಕೆ ಸೇರಿದೆ. ಅಗ್ನಿಶಿಖೆ, ಕೆಂಡದ ಹೂವು, ಲಾಂಗೂಲಿಕ, ನೆಲಗುಲಿಕ, ಇಂದ್ರನ ಬಳ್ಳಿ ಮುಂತಾದ ವಿವಿಧ ಹೆಸರುಗಳಿಂದಲೂ ಇದು ಪ್ರಸಿದ್ಧವಾಗಿದೆ. ಇದರ ಆರು ದಳಗಳು ತಿರುಚಿ ಕೊಂಡು ಮೇಲಕ್ಕೆ ಚಾಚಿಕೊಂಡಿರುವುದರಿಂದ ಉರಿಯುವ ಜ್ವಾಲೆಯಂತೆ ಕಾಣುತ್ತವೆ. ಶ್ರಾವಣ -ಭಾದ್ರಪದ ಮಾಸಗಳಲ್ಲಿ ಪ್ರಕೃತಿ ತನ್ನ ಸೌಂದರ್ಯವನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಈ ಹೂವು ಅರಳುವುದು ವಿಶೇಷ. ದಕ್ಷಿಣ ಭಾರತದ ಕಾಡು, ಪೊದೆ ಪ್ರದೇಶಗಳು ಹಾಗೂ ಕಾಫಿ ತೋಟಗಳ ನೆಲದಲ್ಲಿ ಇದರ ಬೆಳವಣಿಗೆ ಕಂಡುಬರುತ್ತದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಇದು ಕಾಣಸಿಗುತ್ತದೆ.
ಹೀಗಾಗಿ ಗೌರಿ ಹೂವು ಋತು ಬದಲಾವಣೆ ಮತ್ತು ಪ್ರಕೃತಿಯ ಚೈತನ್ಯವನ್ನು ನೆನಪಿಸುವ ಹೂವಾಗಿಯೂ ಜನಮನದಲ್ಲಿ ಸ್ಥಾನ ಪಡೆದಿದೆ. ಗೌರಿ ಹಬ್ಬವನ್ನು ಮಳೆಯೊಂದಿಗೆ ಜೋಡಿ ಸುವ ಜನಪದ ದೃಷ್ಟಿಕೋನವೂ ಅರ್ಥಪೂರ್ಣ ವಾಗಿದೆ. ಮಳೆ ಬಂದರೆ ಭೂಮಿ ಹಸಿರಾಗು ತ್ತದೆ; ಹಸಿರು ಬಂದರೆ ಬೆಳೆ ಬೆಳೆಯುತ್ತದೆ; ಬೆಳೆ ಬಂದರೆ ಜನಜೀವನ ಸಮೃದ್ಧವಾಗುತ್ತದೆ. ಆದ್ದರಿಂದ ಗೌರಿಯನ್ನು ಮಳೆ ತರುವ ತಾಯಿಯಾಗಿ, ಭೂಮಿಗೆ ಫಲವತ್ತತೆ ನೀಡುವ ಶಕ್ತಿಯಾಗಿ ಕಲ್ಪಿಸಿಕೊಳ್ಳುವುದು ಪ್ರಕೃತಿಯ ಮೇಲಿನ ಮನುಷ್ಯನ ಅವಲಂಬನೆಯ ಪ್ರತೀಕವಾಗಿದೆ. ಗೌರಿ ಎಂದರೆ ಇಲ್ಲಿ ಮಳೆಯ ನಿರೀಕ್ಷೆ, ಭೂಮಿಯ ಫಲವತ್ತತೆ ಮತ್ತು ಬದುಕಿನ ಸಮೃದ್ಧಿಯ ಸಂಕೇತ. ಗೌರಿ ಹೂವಿನ ಉರಿ ಯುವ ಬಣ್ಣಗಳು ಒಂದು ಕಡೆ ಅಗ್ನಿಯ ಶಕ್ತಿಯನ್ನು ನೆನಪಿಸಿದರೆ, ಗೌರಿ ಹಬ್ಬದ ಆಚರಣೆ ಮತ್ತೊಂದು ಕಡೆ ಮಳೆಯ ತಂಪು ಮತ್ತು ಜೀವದಾಯಕತೆ ಯನ್ನು ಪ್ರತಿನಿಽಸುತ್ತದೆ. ಅಗ್ನಿ ಮತ್ತು ಮಳೆ ಎಂಬ ಎರಡು ವಿರುದ್ಧ ಪ್ರಕೃತಿ ಶಕ್ತಿಗಳು ಇಲ್ಲಿ ಸುಂದರವಾದ ಸಾಂಸ್ಕ ತಿಕ ರೂಪವಾಗಿ ಒಂದಾಗುತ್ತವೆ. ಹೀಗಾಗಿ ಗೌರಿ ಹಬ್ಬವೂ, ಗೌರಿ ಹೂವೂ ಕೇವಲ ಆಚರಣೆ ಮತ್ತು ಅಲಂಕಾರದ ಸಂಗತಿಗಳಲ್ಲ; ಅವು ಮನುಷ್ಯ, ಪ್ರಕೃತಿ ಮತ್ತು ಬದುಕಿನ ನಡುವಿನ ಆಳವಾದ ಸಂಬಂಧವನ್ನು ಸಾರುವ ಜನಪದ ಸಂಕೇತಗಳಾಗಿವೆ.
ಆದ್ದರಿಂದ ಗೌರಿ ಹಬ್ಬವನ್ನು ಅರ್ಥಮಾಡಿಕೊಳ್ಳುವುದು ಎಂದರೆ ನಮ್ಮ ಜನಪದ ಸಂಸ್ಕ ತಿಯಲ್ಲಿ ಅಡಗಿರುವ ಪ್ರಕೃತಿ ಪ್ರೀತಿ, ಮಳೆಯ ನಿರೀಕ್ಷೆ, ಕೃಷಿಯ ಆಶಯ ಮತ್ತು ಸ್ತ್ರೀಶಕ್ತಿಯ ಗೌರವವನ್ನು ಅರ್ಥ ಮಾಡಿಕೊಳ್ಳುವುದಾಗಿದೆ. ಗೌರಿ ಹೂವಿನ ಜ್ವಾಲೆಯಂತಹ ಬಣ್ಣಗಳ ಹಿಂದೆ ಪ್ರಕೃತಿಯ ಸೌಂದರ್ಯವಿದ್ದರೆ, ಗೌರಿ ಹಬ್ಬದ ಹಿಂದೆ ಸಮೃದ್ಧ ಬದುಕಿನ ಕನಸಿದೆ.
shalinachanam@gmail.com



