ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ
ಡಾ.ಶುಭಶ್ರೀ ಪ್ರಸಾದ್, ಮಂಡ್ಯ
‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ, ಮೇಲೊಂದು ರವಿಕೆ, ಕತ್ತಿನಲ್ಲಿ ಪುಟ್ಟ ಸರ, ಕಿವಿಯಲ್ಲಿ ಓಲಾಡುವ ಓಲೆ, ಕಾಲಿಗೆ ಗೆಜ್ಜೆಯ ನಾದ, ಕೈಗಳಿಗೆ ಕಿಂಕಿಣಿಯ ಸದ್ದು. . . ಬಟ್ಟಲುಗಣ್ಣಿನ, ಗುಂಡುಮುಖದ ಆ ಪುಟ್ಟ ಕಂದಮ್ಮ ನಗುತುಂಬಿ ಮನೆಯ ತುಂಬ ಓಡಾಡುತ್ತಿದ್ದರೆ ಸಾಕು, ಇಡೀ ಮನೆಯೇ ತಂಪಾಗುತ್ತದೆ. ಇಂತಹ ಮನೆಯ ಮಗಳು ಕಣ್ಣೆದುರೇ ನೋಡನೋಡುತ್ತಿದ್ದಂತೆಯೇ ಬೆಳೆದು ದೊಡ್ಡವಳಾಗಿ, ಮತ್ತೊಬ್ಬರ ಕೈಹಿಡಿದು ಹೊರಟು ನಿಂತಾಗ ಸಂತೋಷವೂ ದುಃಖವೂ ಒಟ್ಟಿಗೆ ಮೇಳೈಸುವ ಸಂದರ್ಭ. ಇನ್ನೊಂದು ಮನೆಯ ಬೆಳಕಾಗಿ, ಸೊಸೆಯಾಗಿ, ಪತ್ನಿಯಾಗಿ, ಅದನ್ನು ತನ್ನದೇ ಮನೆಯೆಂದು ಭಾವಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಾಗ ತಾಯ್ತಂದೆಯರಿಗೆ ಹೆಮ್ಮೆ.
ಸದಾ ಅಪ್ಪ-ಅಮ್ಮನ ಹಿಂದೆ ಪುಟುಪುಟು ಹೆಜ್ಜೆ ಇಡುತ್ತಾ ಓಡಾಡುತ್ತಿದ್ದ ಮಗಳು ಮನೆಯಲ್ಲಿ ಇಲ್ಲದಾಗ ಒಂದು ರೀತಿಯ ಕೊರತೆ ಕಾಡುತ್ತದೆ. ‘ಯಾವಾಗ ಮಗಳು ತವರಿಗೆ ಬರುತ್ತಾಳೋ, ಅವಳಿಗೆ ಬೇಕಾದ ಎಲ್ಲವನ್ನೂ ಮಾಡಿಟ್ಟು ಕಾಯೋಣ’ ಎಂದು ತಾಯಿ-ತಂದೆಯರು ಕಾತರದಿಂದ ಕಾಯುತ್ತಾರೆ. ಇನ್ನೊಂದು ಕಡೆ, ‘ಯಾವಾಗ ಅಮ್ಮನ ಮನೆಗೆ ಹೋಗುತ್ತೇನೋ, ಅಮ್ಮನ ಮಡಿಲಲ್ಲಿ ಮಲಗುತ್ತೇನೋ, ಮತ್ತೆ ಒಮ್ಮೆ ಪುಟ್ಟ ಮಗುವಾಗುತ್ತೇನೋ’ಎಂಬ ಬಯಕೆಯನ್ನು ಹೊತ್ತುಕೊಂಡೇ ಹೆಣ್ಣುಮಗಳು ತವರಿಗೆ ಬರುತ್ತಾಳೆ.
ತವರಿಗೆ ಬರುವ ಮಗಳನ್ನು ಕಂಡರೆ ಅಪ್ಪ-ಅಮ್ಮ ಅವಳನ್ನು ಕಣ್ತುಂಬಿಕೊಳ್ಳುತ್ತಾರೆ. ಮುದ್ದಾಗಿ ಕಾಪಾಡುತ್ತಾರೆ, ಉಣಿಸುತ್ತಾರೆ, ತೊಡಿಸುತ್ತಾರೆ, ಮಡಿಲು ತುಂಬಿಸಿಕೊಳ್ಳುತ್ತಾರೆ. ತವರಿನ ಮಗಳ ಮೇಲಿನ ಈ ಪ್ರೀತಿ, ಕಾಳಜಿ ಮತ್ತು ಮಮತೆಯ ಪ್ರತೀಕವೇ ಗೌರಿ ಹಬ್ಬ ಎಂದರೆ ಅತಿಶಯೋಕ್ತಿಯಲ್ಲ.
ಕೈಲಾಸದಲ್ಲಿರುವ ಗಂಡನ ಮನೆಯಿಂದ ತವರಿಗೆ ಗೌರಿ ಯಾವಾಗ ಬರುತ್ತಾಳೆ ಎಂದು ಭುವಿಯ ಮಕ್ಕಳು ಕಾಯುತ್ತಿರುತ್ತಾರೆ. ಆಕೆ ಬರುವ ದಿನವನ್ನು ಗೌರಿ ಹಬ್ಬವೆಂದೇ ಸಂಭ್ರಮಿಸುತ್ತಾರೆ. ‘ಆಕೆ ಬಂದರೆ ಸಾಕು’ ಎಂಬ ಭಾವದಿಂದ ಬಗೆಬಗೆಯ ಮೃಷ್ಟಾನ್ನ, ತಿಂಡಿ-ತಿನಿಸುಗಳನ್ನು ತಯಾರಿಸುತ್ತಾರೆ. ಅವಳು ಕುಳಿತುಕೊಳ್ಳುವ ಆಸನವನ್ನು ಸಿಂಗರಿಸುತ್ತಾರೆ. ಹೊಸ ವಸ್ತ್ರಗಳನ್ನು ತೊಡಿಸಿ, ವಸ್ತ್ರಾಭರಣಗಳಿಂದ ಅಲಂಕರಿಸಿ, ಗಂಧಾಕ್ಷತೆ, ಅರಿಶಿನ-ಕುಂಕುಮಗಳಿಂದ ಪೂಜಿಸುತ್ತಾರೆ. ಮರದ ಬಾಗಿನ ಕೊಟ್ಟು, ಮಡಿಲಕ್ಕಿ ತುಂಬಿ, ‘ಇವಳು ನಮ್ಮ ಮಗಳು ಮಾತ್ರವಲ್ಲ, ನಮ್ಮ ತಾಯಿಯೂ ಹೌದು’ ಎಂಬ ಭಾವದಿಂದ ಪ್ರೀತಿ ಮತ್ತು ಭಕ್ತಿಯಿಂದ ಗೌರಿಯನ್ನು ಪೂಜಿಸುತ್ತಾರೆ. ತವರಿಗೆ ಬಂದ ಹೆಣ್ಣುಮಗಳನ್ನು ಅಪ್ಪ-ಅಮ್ಮ ಹೇಗೆ ಪ್ರೀತಿ, ಭಕ್ತಿ ಮತ್ತು ಮಮತೆಯಿಂದ ಕಾಣುತ್ತಾರೋ, ಅದೇ ಭಾವವನ್ನು ಗೌರಿ ಹಬ್ಬದ ಆಚರಣೆಯಲ್ಲೂ ಕಾಣಬಹುದು.
ಮನೆಮಗಳು ಎಂದಾಗ ಕೇವಲ ಅವಳು ತಂದೆ-ತಾಯಿಯರ ಭಾಗವಾಗಿ ಮಾತ್ರ ಉಳಿಯುವುದಿಲ್ಲ. ಜೊತೆಗೆ ಹುಟ್ಟಿದ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರೊಂದಿಗಿನ ಅವಳ ಪಾತ್ರವೂ ಅಷ್ಟೇ ಆತ್ಮೀಯವಾಗಿ ಮುಂದುವರಿಯುತ್ತಿರುತ್ತದೆ. ಗೌರಿ ಹಬ್ಬದ ಸಂದರ್ಭದಲ್ಲಿ ಮನೆಯ ಮಗಳು ತವರಿಗೆ ಬರುವುದೆಂದರೆ ಅಣ್ಣ-ತಮ್ಮಂದಿರಿಗೂ ಅದೊಂದು ಸಂಭ್ರಮ. ತಮ್ಮ ಪುಟ್ಟ ತಂಗಿಯನ್ನು, ತನ್ನ ತಾಯಿಯಂತೆ ಕಾಪಾಡಿದ ಅಕ್ಕನನ್ನು ಪ್ರೀತಿಯಿಂದ ಬರಮಾಡಿಕೊಂಡು, ಗೌರಿ ಬಾಗಿನದ ರೂಪದಲ್ಲಿ ಉಡುಗೊರೆ ನೀಡುವ ಭಾವವೇ ವಿಶಿಷ್ಟ. ಅದೇ ರೀತಿಯಲ್ಲಿ ಗೌರಿ ಹಬ್ಬದಲ್ಲಿ ನಮ್ಮ ಮನೆಯ ಮಗಳು ಗೌರಿ ತವರಿಗೆ ಬಂದಾಗ ಆಕೆಗೆ ಮೊರದ ಬಾಗಿನ ನೀಡುವ ಪದ್ಧತಿಯೂ ಇದೆ. ಮೊರದ ಬಾಗಿನದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬಳೆ, ಬಿಚ್ಚೋಲೆ, ಸೀರೆ, ರವಿಕೆ ಕಣ, ಅರಿಶಿನದ ಕೊಂಬು ಮುಂತಾದ ಮಂಗಳ ದ್ರವ್ಯಗಳ ಜೊತೆಗೆ, ಆಕೆಯ ಅವಶ್ಯಕತೆಗೆ ಬೇಕಾದ ಕೆಲವು ವಸ್ತುಗಳನ್ನೂ ನೀಡುವ ಕ್ರಮವಿದೆ. ಹೀಗೆ ಬಾಗಿನ ನೀಡುವುದು ಕೇವಲ ವಸ್ತುಗಳನ್ನು ಕೊಡುವ ಸಂಪ್ರದಾಯವಲ್ಲ; ‘ನೀನು ನಮ್ಮ ಮನೆಯ ಮಗಳು, ನಿನ್ನ ಬದುಕು ಸದಾ ಸಮೃದ್ಧಿಯಾಗಿರಲಿ’ ಎಂಬ ಪ್ರೀತಿ, ಹಾರೈಕೆ ಮತ್ತು ಮಮತೆಯನ್ನು ತುಂಬಿಕೊಡುವ ಒಂದು ಸುಂದರ ಆಚರಣೆ.
‘ನಿನ್ನ ಅಮ್ಮ ತವರಿಗೆ ಹೋಗಿದ್ದಾಳೆ, ಅವಳಿಲ್ಲದೆ ನಾನು ಇರಲಾರೆ’ ಎಂದು ಶಿವನು ತನ್ನ ಮಗ ಗಣಪನನ್ನು ಭೂಮಿಗೆ ಕಳುಹಿಸಿ, ‘ಅಮ್ಮನನ್ನು ಬೇಗ ಕರೆದುಕೊಂಡು ಬಾ’ ಎಂದು ಹೇಳುತ್ತಾನೆ ಎಂಬ ನಂಬಿಕೆಯೂ ನಮ್ಮಲ್ಲಿದೆ. ಗೌರಿ ಬಂದರೆ ಮರುದಿನವೇ ಗಣಪ ಓಡಿಬಂದು ಅಮ್ಮನನ್ನು ಕರೆದುಕೊಂಡು ಹೋಗುತ್ತಾನೆ. ಗೌರಿ ಮಗಳಾದರೆ, ಗಣಪ ಮೊಮ್ಮಗ!
ಎಷ್ಟೇ ಪ್ರೀತಿ ಮತ್ತು ಮಮತೆ ಇದ್ದರೂ, ಗೌರಿ ಮತ್ತು ಗಣಪತಿಯರನ್ನು ದೇವರೆಂದು ನಂಬುವುದರಿಂದ ಅವರ ಮೇಲೊಂದು ಬಗೆಯ ಭಕ್ತಿಯೂ ನಮ್ಮಲ್ಲಿದೆ. ಹಾಗಾಗಿ ಮಗಳು ಗೌರಿಯನ್ನು ‘ಅಮ್ಮ’ ಎಂದೂ, ಮೊಮ್ಮಗ ಗಣಪನನ್ನು ‘ಅಪ್ಪ’ಎಂದೂ ಕರೆಯುವ ವಿಶಿಷ್ಟ ಭಾವ ನಮ್ಮ ಸಂಪ್ರದಾಯದಲ್ಲಿದೆ.
ಗಣಪ ಬಂದು ಗೌರಿಯನ್ನು ಕರೆದುಕೊಂಡು ಹೋಗುವಾಗ ಭಕ್ತರೆಲ್ಲರ ಮನದಲ್ಲೂ ಮಗಳನ್ನು, ಮೊಮ್ಮಗನನ್ನು ಕಳಿಸಿಕೊಡುವ ದುಃಖ ಮೂಡುತ್ತದೆ. ತವರಿಗೆ ಬಂದ ಮಗಳು ಮತ್ತೆ ತನ್ನ ಗಂಡನ ಮನೆಗೆ ಹೊರಡುವಾಗ ತಾಯಿ-ತಂದೆಯ ಮನಸ್ಸಿನಲ್ಲಿ ಮೂಡುವ ಭಾವವೇ ಅಲ್ಲಿ ಕೂಡ ಕಾಣಿಸುತ್ತದೆ.
ಆದರೂ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬ ವಾಸ್ತವವನ್ನು ಒಪ್ಪಿಕೊಂಡು, ಎದೆಯೊಳಗೆ ಭಾರವಾದ ನೋವಿದ್ದರೂ ಗೌರಿ-ಗಣಪರನ್ನು ಕೈಲಾಸಕ್ಕೆ ಕಳುಹಿಸಿಕೊಡುತ್ತೇವೆ. ಮಗಳು ತವರಿಗೆ ಬಂದು ಮತ್ತೆ ಗಂಡನ ಮನೆಗೆ ಹೊರಟಾಗ, ‘ಮತ್ತೆ ಯಾವಾಗ ಬರುತ್ತಾಳೋ? ’ ಎಂದು ತಾಯಿ-ತಂದೆಯರು ಕಾಯುವಂತೆ, ಗೌರಿ ಹಬ್ಬ ಮುಗಿದ ಮೇಲೂ ನಮ್ಮ ಮನಸ್ಸು ಮುಂದಿನ ವರ್ಷದ ಗೌರಿ ಹಬ್ಬವನ್ನು ಎದುರು ನೋಡುತ್ತಿರುತ್ತದೆ. ಮಗಳು ತವರಿಗೆ ಬರುವುದೆಂದರೆ ಮನೆಯೊಳಗೆ ಸಂಭ್ರಮ.
ಮಗಳು ಹೊರಡುವುದೆಂದರೆ ಮನದೊಳಗೆ ಮೌನ. ಅದೇ ಮಮತೆ, ಅದೇ ಕಾತರ, ಅದೇ ಪ್ರೀತಿ – ಗೌರಿ ಹಬ್ಬದಲ್ಲೂ ಮರುಕಳಿಸುತ್ತದೆ. ಗೌರಿ ಕೇವಲ ದೇವತೆಯಲ್ಲ; ಅವಳು ಪ್ರತಿಯೊಂದೂ ಮನೆಯ ಮಗಳ ಪ್ರತಿರೂಪ. ತವರಿನ ಮಡಿಲಿಗೆ ಬಂದು, ಪ್ರೀತಿ ಪಡೆದು, ಮತ್ತೆ ತನ್ನ ಮನೆಗೆ ತೆರಳುವ ಪ್ರತಿಯೊಬ್ಬ ಹೆಣ್ಣುಮಗಳ ಕಥೆಯೂ ಗೌರಿಯ ಕಥೆಯಂತೆಯೇ. ಆದ್ದರಿಂದಲೇ ಗೌರಿ ಹಬ್ಬವೆಂದರೆ ಕೇವಲ ಒಂದು ಹಬ್ಬವಲ್ಲ – ತಾಯಿ ಮತ್ತು ಮಗಳ ನಡುವಿನ ಅವಿನಾಭಾವ ಸಂಬಂಧವನ್ನು, ತವರಿನ ಮಮತೆಯನ್ನು ಮತ್ತು ಹೆಣ್ಣಿನ ಬದುಕಿನ ಭಾವನಾತ್ಮಕ ಪಯಣವನ್ನು ನೆನಪಿಸುವ ಒಂದು ಸುಂದರ ಸಂಭ್ರಮ.
shubhashreeprasadmandya@gmail.com



