Mysore
23
overcast clouds

Social Media

ಬುಧವಾರ, 29 ಜುಲೈ 2026
Light
Dark

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ

ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು

೧೨ನೇ ಶತಮಾನದ ವಚನ ಚಳವಳಿ ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕ ತಿಕ ಹಾಗೂ ವೈಚಾರಿಕ ಬದುಕಿನಲ್ಲಿ ಮಹತ್ವದ ಪರಿವರ್ತನೆಗೆ ಕಾರಣವಾಗಿದೆ. ಜಾತಿ-ಭೇದ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಕಂದಾಚಾರ, ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಈ ಚಳವಳಿಯಲ್ಲಿ ಬಸವಣ್ಣನವರೊಂದಿಗೆ ಅನೇಕ ಶಿವಶರಣರು ಮಹತ್ವದ ಪಾತ್ರ ವಹಿಸಿದರು.

ಅಂತಹ ಶರಣರಲ್ಲಿ ಹಡಪದ ಅಪ್ಪಣ್ಣರು ಪ್ರಮುಖರು. ಅವರ ಪತ್ನಿ ಲಿಂಗಮ್ಮ ಕೂಡ ವಚನಗಾರ್ತಿಯಾಗಿದ್ದರೆಂದು ಪರಂಪರೆ ತಿಳಿಸುತ್ತದೆ. ಇದು ವಚನ ಚಳವಳಿಯಲ್ಲಿ ಮಹಿಳೆಯರಿಗೂ ವಿಚಾರ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವಿದ್ದುದನ್ನು ಸಾರುವ ಮಹತ್ವದ ಉದಾಹರಣೆಯಾಗಿದೆ.

ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತ ಸಹಚರರಾಗಿದ್ದು, ವಚನ ಚಳವಳಿಯ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದರು. ಅವರ ವಚನಗಳು ಕೇವಲ ಭಕ್ತಿ ಮತ್ತು ಧಾರ್ಮಿಕ ವಿಚಾರಗಳ ಅಭಿವ್ಯಕ್ತಿಗಳಲ್ಲ; ಅವು ಸಮಾಜದ ಅಂತರಾಳದಲ್ಲಿದ್ದ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ಮತ್ತು ಕಂದಾಚಾರಗಳ ವಿರುದ್ಧ ಪ್ರಶ್ನೆ ಎತ್ತಿದ ಸಾಮಾಜಿಕ ದಾಖಲೆಗಳಾಗಿವೆ.

ಹಡಪದ ಅಪ್ಪಣ್ಣ ಎಂಬ ಹೆಸರಿನಲ್ಲಿರುವ ‘ಹಡಪ’ ಎಂಬುದು ಅವರ ವೃತ್ತಿಯನ್ನು ಸೂಚಿಸುತ್ತದೆ. ಪರಂಪರೆಯ ಪ್ರಕಾರ ಅವರು ಕ್ಷೌರಿಕ ವೃತ್ತಿಯವರಾಗಿದ್ದರು. ಶರಣರ ದೃಷ್ಟಿಯಲ್ಲಿ ಯಾವುದೇ ವೃತ್ತಿ ಕೀಳಲ್ಲ; ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ಶ್ರೇಷ್ಠ. ಕಾಯಕವು ಕೇವಲ ಜೀವನೋಪಾಯದ ಸಾಧನವಲ್ಲ; ಅದು ವ್ಯಕ್ತಿಯ ಘನತೆ, ಆತ್ಮಗೌರವ ಮತ್ತು ಸ್ವಾವಲಂಬನೆಯ ಪ್ರತೀಕ. ಆದ್ದರಿಂದಲೇ ವೃತ್ತಿಯ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ವಿಂಗಡಿಸುವ ಮನೋಭಾವಕ್ಕೆ ವಚನ ಚಳವಳಿ ಸವಾಲು ಹಾಕಿತ್ತು. ಅಪ್ಪಣ್ಣರ ವಚನಗಳಲ್ಲಿ ಬಾಹ್ಯ ಆಡಂಬರದ ವಿರುದ್ಧ ತೀಕ್ಷ್ಣವಾದ ವೈಚಾರಿಕತೆ ವ್ಯಕ್ತವಾಗುತ್ತದೆ.

“ವೇಷವ ಹೊತ್ತು ಆಸೆ ರೋಷದ ಬಿಡದೆ ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ, ಕಾವಿ ಕಾಷಾಯಾಂಬರದ ಧರಿಸಿ ಫಲವೇನು?’‘ ಎಂಬ ಪ್ರಶ್ನೆಯ ಮೂಲಕ ಅವರು ಧಾರ್ಮಿಕ ವೇಷಧಾರಣೆ ಮಾತ್ರದಿಂದ ಆಧ್ಯಾತ್ಮಿಕತೆ ಸಾಧ್ಯವಿಲ್ಲ ಎಂದು ಸೂಚಿಸುತ್ತಾರೆ. ಮನಸ್ಸಿನಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳನ್ನು ನಿಯಂತ್ರಿಸದೆ ಹೊರಗಿನ ವೇಷವನ್ನು ಬದಲಾಯಿಸಿಕೊಂಡರೆ ಯಾವುದೇ ಪ್ರಯೋಜನವಿಲ್ಲ ಎಂಬ ಸಂದೇಶವನ್ನು ಅವರು ಸಾರುತ್ತಾರೆ. ಇದು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ.

“ಹಸಿವಿನಾಸೆಗೆ ಅಶವನ ಕೊಂಬರು, ವಿಷಯದಾಸೆಗೆ ಹುಸಿಯ ನುಡಿದವರು…” ಎಂಬ ವಚನದ ಆಶಯವು, ಮನುಷ್ಯನು ತನ್ನ ಮಾನವ ಜನ್ಮದ ಘನತೆಯನ್ನು ಅರಿತು ಬದುಕಬೇಕು ಎಂಬುದಾಗಿದೆ. ಆಸೆ ಮತ್ತು ಆಮಿಷಗಳ ಹಿಂದೆ ಓಡಿ ಬದುಕಿನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಸತ್ಯ, ಸಂಯಮ ಮತ್ತು ಸದಾಚಾರದ ಮಾರ್ಗದಲ್ಲಿ ಸಾಗಬೇಕು ಎಂಬ ಸಂದೇಶ ಇಲ್ಲಿ ವ್ಯಕ್ತವಾಗುತ್ತದೆ. ಇಂದಿನ ಸಂದರ್ಭದಲ್ಲಿ ಮದ್ಯಪಾನ, ಮಾದಕವಸ್ತು ವ್ಯಸನ, ಜೂಜು, ಅತಿಯಾದ ಮೊಬೈಲ್ ಬಳಕೆ, ಆನ್‌ಲೈನ್ ವ್ಯಸನ ಹಾಗೂ ವಿಷಯಾಸಕ್ತಿಯಂತಹ ಸಮಸ್ಯೆಗಳ ನಡುವೆ ಅಪ್ಪಣ್ಣರ ಈ ಎಚ್ಚರಿಕೆ ಇನ್ನಷ್ಟು ಅರ್ಥಪೂರ್ಣವಾಗಿದೆ.

“ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ, ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ…” ಎಂಬ ವಚನದಮೂಲಕ ಧರ್ಮದ ಹೆಸರಿನಲ್ಲಿ ಜನರನ್ನು ಮೋಸಗೊಳಿಸಿ ಬದುಕುವವರನ್ನು ಅವರು ತೀವ್ರವಾಗಿ ಪ್ರಶ್ನಿಸುತ್ತಾರೆ. ಭಕ್ತಿ ಮತ್ತು ಧರ್ಮವು ವ್ಯಾಪಾರ, ವಂಚನೆ ಅಥವಾ ಸ್ವಾರ್ಥದ ಸಾಧನವಾಗಬಾರದು ಎಂಬ ಸಂದೇಶವನ್ನು ಅವರು ಸ್ಪಷ್ಟವಾಗಿ ಸಾರುತ್ತಾರೆ. ೧೨ನೇ ಶತಮಾನದಲ್ಲಿ ಅಪ್ಪಣ್ಣರು ಪ್ರಶ್ನಿಸಿದ ಅನೇಕ ಸಾಮಾಜಿಕ ಸಮಸ್ಯೆಗಳು ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ನಮ್ಮ ಮುಂದೆ ಇವೆ. ಜಾತಿಭೇದ, ಅಸ್ಪೃಶ್ಯತೆ, ಧಾರ್ಮಿಕ ಅಂಧಶ್ರದ್ಧೆ, ಆಹಾರದ ಆಧಾರದ ಮೇಲಿನ ತಾರತಮ್ಯ, ಮೂಢನಂಬಿಕೆ, ಧಾರ್ಮಿಕ ವ್ಯಾಪಾರೀಕರಣ ಮತ್ತು ಸಾಮಾಜಿಕ ಶೋಷಣೆ ಇನ್ನೂ ಸಂಪೂರ್ಣವಾಗಿ ನಿರ್ಮೂಲವಾಗಿಲ್ಲ.

ಆದ್ದರಿಂದ ಅಪ್ಪಣ್ಣರ ವಚನಗಳನ್ನು ಕೇವಲ ಇತಿಹಾಸದ ಪುಟಗಳಲ್ಲಿ ಓದುವುದರಿಂದ ಪ್ರಯೋಜನವಿಲ್ಲ. ಅವುಗಳಲ್ಲಿರುವಮಾನವೀಯತೆ, ಸಮಾನತೆ, ಕಾಯಕ, ದಾಸೋಹ ಮತ್ತು ವೈಚಾರಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಹಡಪದ ಅಪ್ಪಣ್ಣರ ವಚನಗಳು ಶೋಷಿತರ ನೋವಿನ ಪ್ರತಿಧ್ವನಿ ಮತ್ತು ದಾರಿ ತಪ್ಪಿದ ಸಮಾಜಕ್ಕೆ ವೈಚಾರಿಕ ದಾರಿದೀಪವಾಗಿದೆ. ಅಪ್ಪಣ್ಣರ ವಚನಗಳನ್ನು ಓದುವುದು ಎಂದರೆ ಕೇವಲ ಒಬ್ಬ ಶರಣನನ್ನು ನೆನಪಿಸಿಕೊಳ್ಳುವುದಲ್ಲ. ನಮ್ಮೊಳಗಿನ ಜಾತಿಭೇದ, ಅಸಮಾನತೆ, ಮೂಢನಂಬಿಕೆ, ಅಂಧಾನುಕರಣ, ಅಹಂಕಾರಮತ್ತು ಶೋಷಣೆಯ ಮನೋಭಾವಗಳನ್ನು ಪ್ರಶ್ನಿಸಿಕೊಳ್ಳುವುದಾಗಿದೆ. ಸಮಾಜ ಬದಲಾಗಬೇಕಾದರೆ ಮೊದಲು ಮನುಷ್ಯನಮನಸ್ಸು ಬದಲಾಗಬೇಕು. ಅಂತರಂಗದ ಪರಿವರ್ತನೆಯಿಂದಲೇ ಸಮಾನತೆಯಸಮಾಜ ನಿರ್ಮಾಣ ಸಾಧ್ಯ. ಹಡಪದ ಅಪ್ಪಣ್ಣರ ವಚನಗಳು ಇಂದಿಗೂ ಮಾನವೀಯತೆ ಮತ್ತು ವೈಚಾರಿಕ ಬದುಕಿನ ದಾರಿದೀಪಗಳಾಗಿವೆ.

(ಲೇಖಕರು, ಮೈಸೂರು ಜಿಲ್ಲೆ ಸರಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು)

” “ಹಸಿವಿನಾಸೆಗೆ ಅಶವನ ಕೊಂಬರು, ವಿಷಯದಾಸೆಗೆ ಹುಸಿಯ ನುಡಿದವರು…” ಎಂಬ ವಚನದ ಆಶಯವು, ಮನುಷ್ಯನು ತನ್ನ ಮಾನವ ಜನ್ಮದ ಘನತೆಯನ್ನು ಅರಿತು ಬದುಕಬೇಕು ಎಂಬುದಾಗಿದೆ. ಆಸೆ ಮತ್ತು ಆಮಿಷಗಳ ಹಿಂದೆ ಓಡಿ ಬದುಕಿನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಸತ್ಯ, ಸಂಯಮ ಮತ್ತು ಸದಾಚಾರದ ಮಾರ್ಗದಲ್ಲಿ ಸಾಗಬೇಕು ಎಂಬ ಸಂದೇಶ ಇಲ್ಲಿ ವ್ಯಕ್ತವಾಗುತ್ತದೆ.”

 

 

Tags:
error: Content is protected !!