ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಆನಂತರ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆಯನ್ನು ಬಳಸಲು ಸರ್ವಸ್ವತಂತ್ರವಾಯಿತು. ಸ್ಥಳೀಯವಾಗಿ ಜನರಾಡುವ ಭಾಷೆಯೇ ಆಡಳಿತ ಭಾಷೆಯಾಗಿಯೂ ತನ್ನ ಸಾರ್ವ ಭೌಮತ್ವವನ್ನು ಹೊಂದಿತು. ಆದರೆ ಅದರೊಟ್ಟಿಗೆ ಭಾಷಾ ವಿವಾದ ಮತ್ತು ನೆರೆಹೊರೆ ರಾಜ್ಯಗಳ ಜೊತೆಗಿನ ಗಡಿ ವಿವಾದಗಳು ಹುಟ್ಟಿಕೊಂಡವು. ಸ್ವಾತಂತ್ರ್ಯ ಪೂರ್ವದಲ್ಲೇ ರಾಜ್ಯಗಳ ನಡುವೆ ಇದ್ದ ಜಲವಿವಾದ ಇಂದಿಗೂ ಉಳಿದು ಕೊಂಡು ಬಂದಿದೆ. ಭಾರತವು ವಿಭಿನ್ನ ಸಂಸ್ಕೃತಿಗಳ ತವರೂರಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಈ ದೇಶದ ಹೆಗ್ಗಳಿಕೆಯಾಗಿದೆ.
ನೆರೆ ಹೊರೆಯ ರಾಜ್ಯಗಳ ನಡುವೆ ಆಗಾಗ್ಗೆ ಭಾಷೆ, ಗಡಿ ಮತ್ತು ಜಲ ವಿವಾದಗಳು ಭುಗಿಲೇಳುತ್ತಿವೆ. ಇದಕ್ಕೆ ಬಹುತೇಕವಾಗಿ ಆಡಳಿತಾರೂಢ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳು, ರಾಜಕೀಯ ಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಕಾರಣ ಎನ್ನುವುದನ್ನು ತಳ್ಳಿಹಾಕಲಾಗದು. ಈ ವಿವಾದಗಳಿಗೆಲ್ಲ ಕಾನೂನಿನ ಮೂಲಕ ಹಲವಾರು ಬಾರಿ ತಾತ್ಕಾಲಿಕ ಪರಿಹಾರ ದೊರಕಿದ್ದರೂ ಸಮಸ್ಯೆಗಳು ಮಾತ್ರ ಜೀವಂತವಾಗಿಯೇ ಇವೆ. ಈ ವಿಷಯಗಳು ಜನರ ಬದುಕು ಮತ್ತು ಭಾವನೆಗಳೊಡನೆ ಬೆರೆತು ಹೋಗಿವೆ.
ಇಂತಹದೊಂದು ಭಾಷಾ ವಿವಾದ ತಮಿಳುನಾಡನ್ನು ಖಾಯಂ ಆಗಿ ಕಾಡುತ್ತಿದೆ. ಅದು ಅರುವತ್ತರ ದಶಕದಿಂದ ಶಿಕ್ಷಣ ಮತ್ತು ಆಡಳಿತದಲ್ಲಿ ಅನು ಸರಿಸಿಕೊಂಡು ಬಂದಿರುವ ದ್ವಿಭಾಷಾ ನೀತಿ. ಇದು ಕೇಂದ್ರ ಸರ್ಕಾರವನ್ನು ಅನೇಕ ಬಾರಿ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಆ ರಾಜ್ಯವು ತನ್ನ ಭಾಷೆಯ ಅಸ್ಮಿತೆ ಬಗ್ಗೆ ಹೊಂದಿರುವ ಬದ್ಧತೆ ಇತರೆ ರಾಜ್ಯಗಳಿಗೂ ಒಂದು ಸವಾಲಾಗಿ ಕಾಡುತ್ತಿದೆ. ಇದಕ್ಕೆ ಈಗ ಮಹಾರಾಷ್ಟ್ರ ರಾಜ್ಯ ಒತ್ತಾಸೆ ಎನ್ನುವಂತೆ ಶಿಕ್ಷಣದಲ್ಲಿ ತ್ರಿಭಾಷಾ ನೀತಿಯ ಆಡಳಿತ ನಿರ್ಧಾರವನ್ನು ರದ್ದು ಮಾಡಿ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಮಹಾರಾಷ್ಟ್ರದ ಈ ನಿರ್ಧಾರ ಕೇಂದ್ರ ಸರ್ಕಾರ ಮತ್ತು ಹಲವು ರಾಜ್ಯಗಳನ್ನು ಅಚ್ಚರಿಗೊಳಿಸಿದೆ. ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಿಂದಿ ಭಾಷೆಯನ್ನು ಇಡೀ ದೇಶದ ಉದ್ದಗಲಕ್ಕೂ ಆಡಳಿತ ಭಾಷೆ ಮತ್ತು ದೇಶದ ಭಾಷೆ ಎಂದು ಬಿಂಬಿಸಲು ಹೊರಟಿದೆ.
ಹೀಗಿದ್ದರೂ ಮಹಾ ರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ಹೊಸದಾಗಿ ರಾಜ್ಯದ ಭಾಷಾ ನೀತಿ ಹೇಗಿರಬೇಕೆನ್ನುವ ಕಾರಣಕ್ಕೆ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಕೇಂದ್ರ ಸರ್ಕಾರದ ಭಾಷಾ ನೀತಿಯನುಸಾರ ಬಹುತೇಕ ರಾಜ್ಯಗಳಲ್ಲಿ ಹೆಚ್ಚು ಮಂದಿ ಮಾತನಾಡುವ ಹಿಂದಿಯೇ ಆಡಳಿತ ಭಾಷೆ. ಇದರ ಜೊತೆಗೆ ದೇಶದ ಉದ್ದಗಲಕ್ಕೂ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಹಾಗಾಗಿ ಇಂಗ್ಲಿಷ್ ಕೂಡ ಹಿಂದಿಯ ಜೊತೆಗೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ತನ್ನ ಪಾರಮ್ಯವನ್ನು ಮೆರೆದಿದೆ. ಕೇಂದ್ರ ಸರ್ಕಾರವು ದೇಶದಾದ್ಯಂತ ಶಿಕ್ಷಣದಲ್ಲಿ ಏಕರೂಪ ಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ಶಿಕ್ಷಣ ತಜ್ಞ ದೌಲತ್ ಸಿಂಗ್ ಕೊಠಾರಿ ಅವರ ನೇತೃತ್ವದಲ್ಲಿ ೧೯೬೪ರಲ್ಲಿ ಆಯೋಗವೊಂದನ್ನು ನೇಮಿಸಿತು. ಈ ಆಯೋಗವು ದೇಶದ ನೂರಾರು ಭಾಷೆಗಳ ಮಹತ್ವವನ್ನು ಅಧ್ಯಯನ ಮಾಡಿ ೧೯೬೮ ವರದಿಯೊಂದನ್ನು ನೀಡಿತು. ಈ ವರದಿಯಂತೆ ಇಡೀ ದೇಶಕ್ಕೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತು. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಶಿಕ್ಷಣದಲ್ಲಿ ಪ್ರಥಮ ಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಅಳವಡಿಸಿಕೊಳ್ಳ ಲಾಗಿದೆ. ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ಮೂರನೇ ಭಾಷೆಯಾಗಿ ದೇಶದ ಯಾವುದಾದರೊಂದು ರಾಜ್ಯದ ಭಾಷೆಯನ್ನು ಅಳವಡಿಸಿಕೊಳ್ಳಬೇಕು.
ತಮಿಳುನಾಡನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ಕೇಂದ್ರದ ತ್ರಿಭಾಷಾ ನೀತಿಯನ್ನು ಒಪ್ಪಿಕೊಂಡಿವೆ. ದಕ್ಷಿಣ ರಾಜ್ಯಗಳಲ್ಲಿ ತಮಿಳುನಾಡು ದ್ವಿಭಾಷಾ ನೀತಿಯನ್ನು ಅನುಸರಿಸಿಕೊಂಡು ಬಂದಿತು. ಕೇಂದ್ರ ಸರ್ಕಾರವು ಹಿಂದಿಯನ್ನು ನಮ್ಮ ಮೇಲೆ ಹೇರುತ್ತಿದೆ ಎಂದು ಐವತ್ತು ವರ್ಷಗಳ ಹಿಂದೆಯೇ ಈ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡಿತ್ತು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಅಂದಿನ ಮದ್ರಾಸ್ ರಾಜ್ಯದಲ್ಲಿ ಚಳವಳಿ ಭುಗಿಲೆದ್ದಿತು.
ಕರ್ನಾಟಕ ಮತ್ತು ಕೇರಳದಲ್ಲಿ ಆಗಿಂದಾಗ್ಗೆ ಕೇಂದ್ರದ ಭಾಷಾ ನೀತಿಯ ವಿರುದ್ಧ ದನಿ ಎದ್ದರೂ ಅದು ಒಂದು ಚಳವಳಿ ರೂಪ ಪಡೆದುಕೊಳ್ಳಲಾಗಿಲ್ಲ. ಹಾಗಾಗಿ ತ್ರಿಭಾಷಾನೀತಿಯನ್ನೇ ಆಂಧ್ರ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅನುಸರಿಸಿಕೊಂಡು ಬಂದಿವೆ. ಆಂಧ್ರದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಿಂದಿ ಭಾಷೆಯೂ ಇರಲೆಂದು ಕೇಂದ್ರದ ತ್ರಿಭಾಷಾ ಸೂತ್ರವನ್ನು ಬೆಂಬಲಿಸಿದ್ದಾರೆ. ಮರಾಠಿ ಭಾಷೆ ಮಾತನಾಡುವ ಮಹಾರಾಷ್ಟ್ರದಲ್ಲಿ ಹಿಂದಿ ಭಾಷೆ ಮಾತನಾಡುವವರೂ ಸಾಕಷ್ಟು ಮಂದಿ ಇದ್ದಾರೆ. ಮರಾಠಿ ಮಾತನಾಡುವವರಿಗೆ ಹಿಂದಿ ಕಲಿಕೆ ಕಬ್ಬಿಣದ ಕಡಲೆಯಲ್ಲ. ಆದರೂ ಹಿಂದಿ ಭಾಷೆಯ ಪ್ರಭಾವದಿಂದ ನಾಡಿನ ಮರಾಠಿ ಭಾಷೆಗೆ ಅಪಾಯ ಇದೆ ಎಂಬುದನ್ನು ಹಿಂದುತ್ವದ ಸಿದ್ಧಾಂತವನ್ನೇ ತನ್ನ ನೀತಿಯನ್ನಾಗಿಸಿ ಕೊಂಡಿರುವ ಶಿವಸೇನೆ ಹಿಂದಿಯನ್ನು ವಿರೋಧಿಸುತ್ತಿರುವುದು ಅಚ್ಚರಿಯ ಸಂಗತಿ. ಮರಾಠಿ ಅಸ್ಮಿತೆಯನ್ನೇ ಒಂದು ಸಿದ್ಧಾಂತವನ್ನಾಗಿ ಅಳವಡಿಸಿಕೊಂಡು ಮರಾಠಿ ಜನರ ನಾಡು ನುಡಿಗಾಗಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿರುವ ಶಿವಸೇನೆ ಈಗ ಹಿಂದಿ ಭಾಷೆ ಹೇರಿಕೆಯ ವಿರುದ್ಧ ತೊಡೆ ತಟ್ಟಿ ನಿಂತಿದೆ. ಬಾಳಾಸಾಹೇಬ ಠಾಕ್ರೆಯ ಸಾವಿನ ನಂತರ ಶಿವಸೇನೆ ಮೂರು ಬಣಗಳಾಗಿ ಒಡೆದು ಹೋಳಾಗಿವೆ. ಆದರೆ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಅವರು ಭಾಷೆಯ ವಿಷಯದಲ್ಲಿ ಬಹಳ ವರ್ಷಗಳ ನಂತರ ಒಂದಾಗಿದ್ದು , ಹಿಂದಿ ಹೇರಿಕೆಯನ್ನು ವಿರೋಧಿಸಿ ಬೀದಿಗಿಳಿದು ಹೋರಾಡಲು ಸಿದ್ಧರಾಗಿದ್ದಾರೆ. ಹಿಂದಿ ವಿರುದ್ಧದ ಈ ಹೋರಾಟದ ಕೂಗನ್ನು ಕೇಳಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯನ್ನಾಗಿ ಜಾರಿಗೆ ತರುವ ಸಂಬಂಧ ಏಪ್ರಿಲ್ ಮತ್ತು ಜೂನ್‌ನಲ್ಲಿ ಹೊರಡಿಸಿದ್ದ ತ್ರಿಭಾಷಾ ಸೂತ್ರವನ್ನು ಹಿಂದಕ್ಕೆ ಪಡೆದಿರುವುದು ಈಗ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಮಹಾರಾಷ್ಟ್ರಕ್ಕೊಂದು ಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ಮುಖ್ಯಮಂತ್ರಿ ಫಡ್ನವಿಸ್ ಶಿಕ್ಷಣ ತಜ್ಞ ನರೇಂದ್ರ ಜಾಧವ್ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದು, ಸಮಿತಿ ನೀಡುವ ಶಿಫಾರಸ್ಸಿನಂತೆ ಮುಂದಿನ ಭಾಷಾ ನೀತಿಯನ್ನು ಅಂಗೀಕರಿಸುವುದಾಗಿ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರ ಸರ್ಕಾರವು ತ್ರಿಭಾಷಾ ಸೂತ್ರವನ್ನು ಹಿಂಪಡೆದಿರುವುದರಿಂದ ತಮ್ಮ ಹೋರಾಟಕ್ಕೆ ಜಯ ಸಿಕ್ಕಿರುವುದಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಹಿಂದಿ ಮಾತನಾಡುವ ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳು ವಾಸ್ತವವಾಗಿ ದ್ವಿತೀಯ ಭಾಷಾ ನೀತಿಯನ್ನಷ್ಟೆ ಜಾರಿಗೆ ತಂದಿವೆ. ಉತ್ತರ ಪ್ರದೇಶ, ಬಿಹಾರದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಮಾತ್ರ ಜಾರಿಯಲ್ಲಿವೆ. ಹಿಂದಿಯಲ್ಲದ ಬೇರೊಂದು ಭಾಷೆಯನ್ನು ಈ ರಾಜ್ಯಗಳು ಶಿಕ್ಷಣದಲ್ಲಿ ಅಕ್ಷರಶಃ ಜಾರಿಗೆ ತಂದಿಲ್ಲ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರವು ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯನ್ನಾಗಿ ಮಾಡಿದ್ದ ಆದೇಶವನ್ನು ಹಿಂತೆಗೆದುಕೊಂಡ ಕ್ರಮ ಈಗ ಕರ್ನಾಟಕ ಸರ್ಕಾರವನ್ನೂ ಉತ್ತೇಜಿಸಿದೆ. ಕರ್ನಾಟಕದಲ್ಲಿಯೂ ಶಿಕ್ಷಣದಲ್ಲಿ ಕನ್ನಡ ಅಥವಾ ಇತರೆ ಮಾತೃಭಾಷೆ ಮತ್ತು ಇಂಗ್ಲಿಷನ್ನು ಉಳಿಸಿಕೊಂಡು ಹಿಂದಿಯನ್ನು ಹೊರಗಿಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಬಲವಾಗಿ ನಿಂತಿವೆ. ಕನ್ನಡ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ದ್ವಿಭಾಷಾ ನೀತಿಯ ಪರವಾಗಿ ಮಾತನಾಡುತ್ತಿದ್ದು, ಸದ್ಯದಲ್ಲಿಯೇ ಈ ವಿಷಯವಾಗಿ ಆಜ್ಞೆಯೊಂದನ್ನು ಹೊರಡಿಸುವುದಾಗಿಯೂ ಘೋಷಿಸಿರುವುದು ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರಕ್ಕೆ ರಾಜ್ಯಗಳು ಸವಾಲು ಹಾಕಿದಂತಾಗಿದೆ.
ಶಿಕ್ಷಣವು ಸಂವಿಧಾನದಲ್ಲಿ ಕನ್ಕರೆಂಟ್ ಲಿಸ್ಟ್‌ನಲ್ಲಿದ್ದು, ಈ ವಿಷಯದಲ್ಲಿರಾಜ್ಯ ಸರ್ಕಾರಗಳು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಪೂರ್ಣ ಅಧಿಕಾರ ಹೊಂದಿರುವುದರಿಂದ ಕೇಂದ್ರದ ಹಿಂದಿ ಭಾಷೆಯನ್ನು ಇಡೀ ದೇಶದಲ್ಲಿ ಕಡ್ಡಾಯ ಮಾಡುವ ಯೋಚನೆಗೆ ಎಳ್ಳು ನೀರು ಬಿಟ್ಟಂತಾಗಬಹುದು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ದ್ವಿಭಾಷಾ ನೀತಿಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಯಾರೇ ಆಗಲಿ ಹೆಚ್ಚು ಭಾಷೆಗಳನ್ನು ಕಲಿತಷ್ಟೂ ಒಳ್ಳೆಯದು. ಅವರ ಜ್ಞಾನದ ಬೆಳವಣಿಗೆ ಹಾಗೂ ಹೊರ ರಾಜ್ಯಗಳಲ್ಲಿ ಉದ್ಯೋಗ ಪಡೆದು ನೆಲೆಸುವುದಕ್ಕೆ ಭಾಷೆ ಸಹಕಾರಿಯಾಗಲಿದೆ. ಮಕ್ಕಳು ಎಳೆಯ ವಯಸ್ಸಿನಲ್ಲಿ ಹೆಚ್ಚು ಭಾಷೆಗಳ ಕಲಿಕೆಯನ್ನು ಗ್ರಹಿಸುವ ಬುದ್ಧಿಶಕ್ತಿ ಹೊಂದಿರುತ್ತಾರೆ. ಆದರೆ ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಹೇರುವುದಕ್ಕೆ ಮಾತ್ರ ರಾಜ್ಯಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಮ್ಮದಲ್ಲದ ಭಾಷೆಯನ್ನು ಜನರು ಮಾತನಾಡಬೇಕು, ಅದನ್ನು ತಮ್ಮ ನಿತ್ಯಜೀವನದಲ್ಲಿ ಬಳಸಬೇಕೆನ್ನುವ ಒತ್ತಡ ಮತ್ತು ಕಡ್ಡಾಯದಿಂದ ಸ್ಥಳೀಯ ಭಾಷೆಯ ಭವಿಷ್ಯ ಮಂಕಾಗಲಿದೆ ಎನ್ನುವ ಆತಂಕ ಆಯಾ ರಾಜ್ಯಗಳದ್ದು.
ಇದೇನೇ ಇದ್ದರೂ ಜನರು ಬಯಸುವುದು ಮತ್ತು ಬಳಸುವುದು ಅನ್ನಕೊಡುವ ಭಾಷೆಯನ್ನು. ಹಾಗಾಗಿ ಜನರ ಹೆಚ್ಚಿನ ಒಲವು ಇಂಗ್ಲಿಷ್ ಕಡೆಗೆ ಇರುವ ವಾಸ್ತವವನ್ನು ಸುಲಭವಾಗಿ ತಳ್ಳಿಹಾಕಲಾಗದು. ಕನ್ನಡವನ್ನು ಉತ್ತೇಜಿಸಬೇಕೆಂದು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಇದುವರೆಗೂಅನುಮತಿ ನಿರಾಕರಿಸಲಾಗುತ್ತಿತ್ತು. ಆದರೆ ಕನ್ನಡ ಕಲಿಕೆಯ ಹೆಸರಿನಲ್ಲಿಯೇ ಅನುಮತಿ ಪಡೆದು ಇಂಗ್ಲಿಷ್ ಶಾಲೆಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಈಗ ಕರ್ನಾಟಕ ಸರ್ಕಾರ ೪,೧೩೪ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ನೀಡಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸದ್ಯದಲ್ಲಿಯೇ ಇಂಗ್ಲಿಷ್ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವಂತೆ ಮಾಡುವ ವಾತಾವರಣವನ್ನುಉಂಟು ಮಾಡುವುದಾಗಿ ಹೇಳಿರುವುದು ಸಹಜವಾಗಿ ವಿವಾದಕ್ಕೆ ಒಳಗಾಗಿದೆ. ಆದರೆ ಇಂಗ್ಲಿಷ್ ಬಳಸದಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಯಾವ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ ಎನ್ನುವ ವಿವರವನ್ನು ಮಾತ್ರ ಅವರು ಬಹಿರಂಗಪಡಿಸದಿರುವುದು ಅವರದ್ದು ಕೇವಲ ಹಾರಿಕೆಯ ಹೇಳಿಕೆ ಎಂದಷ್ಟೇ ಪರಿಗಣಿತವಾಗುತ್ತದೆ.
ಒಟ್ಟಾರೆ ಮಹಾರಾಷ್ಟ್ರ ಸರ್ಕಾರ ತನ್ನ ಶಿಕ್ಷಣ ನೀತಿಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯ ಮಾಡುವ ಕ್ರಮದಿಂದ ಹಿಂದೆ ಸರಿದಿರುವುದರಿಂದ ದಕ್ಷಿಣ ರಾಜ್ಯಗಳ ವಿಶೇಷವಾಗಿ ತಮಿಳುನಾಡು ಕಳೆದ ಐವತ್ತು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ದ್ವಿಭಾಷಾ ನೀತಿಗೆ ಬೆಂಬಲ ಸಿಕ್ಕಿದಂತಾಗಿದೆ.
” ಹಿಂದಿ ಮಾತನಾಡುವ ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳು ವಾಸ್ತವವಾಗಿ ದ್ವಿತೀಯ ಭಾಷಾ ನೀತಿಯನ್ನಷ್ಟೆ ಜಾರಿಗೆ ತಂದಿವೆ. ಉತ್ತರ ಪ್ರದೇಶ, ಬಿಹಾರದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ಮಾತ್ರ ಜಾರಿಯಲ್ಲಿವೆ. ಹಿಂದಿಯಲ್ಲದ ಬೇರೊಂದು ಭಾಷೆಯನ್ನು ಈ ರಾಜ್ಯಗಳು ಶಿಕ್ಷಣದಲ್ಲಿ ಅಕ್ಷರಶಃ ಜಾರಿಗೆ ತಂದಿಲ್ಲ.”