Mysore
27
broken clouds

Social Media

ಸೋಮವಾರ, 11 ಮೇ 2026
Light
Dark

ಲ್ಯಾನ್ಸ್‌ಡೌನ್‌ ಕಟ್ಟಡಕ್ಕಿಲ್ಲ ಮುಕ್ತಿ : ಚರ್ಚೆಯಲ್ಲೇ ಕಾಲಹರಣ

ಕಟ್ಟಡವನ್ನು ಜೀರ್ಣೋದ್ಧಾರ ಮಾಡಬೇಕೋ? ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಬೇಕೋ? ಸುಪ್ರೀಂ ತೀರ್ಪು ಎದುರು ನೋಡುತ್ತಿರುವ ಪಾಲಿಕೆ

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು : ಅರಮನೆಗಳ ನಗರಿ ಮೈಸೂರಿನ ಹೆಗ್ಗುರುತುಗಳಲ್ಲಿ ಒಂದಾಗಿರುವ ಲ್ಯಾನ್ಸ್‌ಡೌನ್ ಕಟ್ಟಡ ಇದೀಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ನಗರದ ಹೃದಯ ಭಾಗದಲ್ಲೇ ಪಾಳು ಬಿದ್ದು ಅವಸಾನದ ಅಂಚಿಗೆ ತಲುಪಿದೆ.

ಶಿಥಿಲಾವಸ್ಥೆಯಿಂದಾಗಿ ಕಟ್ಟಡದ ಒಂದು ಭಾಗ ಕುಸಿದು ಕೆಲವರ ಜೀವ ಬಲಿ ಪಡೆದ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ಮಳಿಗೆದಾರರನ್ನು ಖಾಲಿ ಮಾಡಿಸಿ ಎದುರಿನ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವ್ಯವಹಾರ ಮುಂದುವರಿಸಲು ಅನುಮತಿ ನೀಡಿದ್ದು ದಶಕಗಳೇ ಕಳೆದರೂ ಪಾರಂಪರಿಕ ಶೈಲಿಯ ಈ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಜೀರ್ಣೋದ್ಧಾರಗೊಳಿಸಬೇಕೆ? ನವೀಕರಿಸಬೇಕೆ ಎಂಬ ಚರ್ಚೆ ಇನ್ನೂ ಅಂತ್ಯ ಕಂಡಿಲ್ಲ. ಈ ನಡುವೆ ಕಟ್ಟಡದ ಒಳಭಾಗ, ಸುತ್ತಮುತ್ತ ಅನೈರ್ಮಲ್ಯ, ದುರ್ವಾಸನೆ ಮತ್ತು ಅಸುರಕ್ಷಿತ ವಾತಾವರಣ ಹೆಚ್ಚುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಗರದ ಹೃದಯಭಾಗದಲ್ಲಿರುವ ಈ ಪಾರಂಪರಿಕ ಕಟ್ಟಡದ ಮುಂಭಾಗವನ್ನು ಸುರಕ್ಷತಾ ಕಾರಣಕ್ಕಾಗಿ ಕಬ್ಬಿಣದ ತಡೆಗೋಡೆಯಿಂದ ಮುಚ್ಚಲಾಗಿದೆ. ಆದರೆ, ಕಟ್ಟಡದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಯಾವಾಗ ಬೀಳುವುದೋ ಎನ್ನುವ ಸ್ಥಿತಿಯಲ್ಲಿ ಕಟ್ಟಡ ನಿಂತಿದೆ.

ಕಟ್ಟಡದ ಹಿಂಭಾಗದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಹಳೆ ಸಂತೆಪೇಟೆ ಭಾಗಕ್ಕೆ ಬರುವ ಜನರು ಹಾಗೂ ಕೆಲವು ವ್ಯಾಪಾರಿಗಳು ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಬಯಲು ಶೌಚಾಲಯವಾಗಿ ಬಳಸುತ್ತಿದ್ದು, ಗೋಡೆಗಳು ಕಿತ್ತು ಬರುವ ಜೊತೆಗೆ ದುರ್ನಾತ ಬೀರುತ್ತಿದೆ. ಇನ್ನು ಖಾಲಿ ಕಟ್ಟಡದಲ್ಲಿನ ಮಳಿಗೆಗಳು ಮತ್ತು ಗೋದಾಮುಗಳಲ್ಲಿ ತ್ಯಾಜ್ಯದ ರಾಶಿ ತುಂಬಿದ್ದು, ದುರ್ವಾಸನೆಯನ್ನು ಸಹಿಸಿಕೊಂಡೇ ಅಂಗಡಿ ಗಳವರು ವ್ಯಾಪಾರ ನಡೆಸುತ್ತಿದ್ದಾರೆ. ಮಳೆಗಾಲ ಆರಂಭವಾದಾಗ ಕಟ್ಟಡದ ಹಲವೆಡೆಗಳಿಂದ ನೀರು ಸೋರುತ್ತಿದ್ದು, ಗೋಡೆಗಳು ಸತ್ವ ಕಳೆದುಕೊಂಡು ಗಾರೆ ಕಳಚಿ ಬೀಳುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಭಾಗಗಳಲ್ಲಿ ಮೇಲ್ಚಾವಣಿಯ ಮರದ ಅಳವಡಿಕೆಗಳು ಬಿಸಿಲು-ಮಳೆಗೆ ಹಾಳಾಗು ತ್ತಿದ್ದು, ಯಾವುದೇ ಕ್ಷಣದಲ್ಲಿ ಮತ್ತಷ್ಟು ಹಾನಿ ಸಂಭವಿಸಬಹುದೆಂಬ ಭೀತಿ ವ್ಯಕ್ತವಾಗಿದೆ. ರಾತ್ರಿ ವೇಳೆ ಈ ಭಾಗದಲ್ಲಿ ಜನ ಸಂಚಾರ ಕಡಿಮೆಯಾಗುತ್ತಿರುವುದು, ಅಕ್ರಮ, ಅನೈತಿಕ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಟ್ಟಂತಾಗಿದೆ.

೧೮೯೨ರಲ್ಲಿ ಬ್ರಿಟಿಷ್ ವೈಸ್‌ರಾಯ್ ಲ್ಯಾನ್ಸ್‌ಡೌನ್ ಮೈಸೂರಿಗೆ ಭೇಟಿ ನೀಡಿದ ನೆನಪಿಗಾಗಿ ಈ ಕಟ್ಟಡಕ್ಕೆ ‘ಲ್ಯಾನ್ಸ್‌ಡೌನ್’ ಎಂಬ ಹೆಸರು ನೀಡಲಾಗಿತ್ತು. ಮೈಸೂರು ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ದೊರೆಯಬೇಕು ಎಂಬ ಉದ್ದೇಶದಿಂದ ಈ ಕಟ್ಟಡವನ್ನು ನಿರ್ಮಿಸಿದ್ದರು. ಮುಂಬೈನ ವಿಕ್ಟೋರಿಯಾ ಟರ್ಮಿನಸ್ ಮಾದರಿಯಲ್ಲಿ ನಿರ್ಮಿತವಾದ ಈ ಕಟ್ಟಡ ಒಂದು ಕಾಲದಲ್ಲಿ ಮೈಸೂರಿನ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿತ್ತು.

೨೦೧೨ರ ಆಗಸ್ಟ್ ೨೫ರಂದು ಕಟ್ಟಡದ ಎರಡು ಮಳಿಗೆಗಳ ಮೇಲ್ಚಾವಣಿ ಕುಸಿದು ನಾಲ್ವರು ಮೃತಪಟ್ಟ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು. ಆ ಬಳಿಕ ಕಟ್ಟಡದ ಭದ್ರತೆ ಮತ್ತು ಭವಿಷ್ಯದ ಬಗ್ಗೆ ಭಾರೀ ಚರ್ಚೆ ನಡೆದು, ಸರ್ಕಾರ ವಿವಿಧ ಹಂತಗಳಲ್ಲಿ ತಜ್ಞರ ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆದರೂ ಅಂತಿಮ ನಿರ್ಧಾರ ಮಾತ್ರ ಇಂದಿಗೂ ಹೊರಬಿದ್ದಿಲ್ಲ. ಒಂದೆಡೆ ಪಾರಂಪರಿಕ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಸಂಪೂರ್ಣ ಕೆಡವಿ ಅದೇ ಮಾದರಿಯಲ್ಲಿ ಮರು ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯವೂ ಕೇಳಿಬರುತ್ತಿದೆ. ಹೈಕೋರ್ಟ್ ಕೂಡ ಈ ವಿಚಾರದಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದ್ದರೂ ನಗರಪಾಲಿಕೆ ಮತ್ತು ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ತೀರ್ಮಾಣಗಳು ಹೊರಬೀಳುತ್ತಿಲ್ಲ. ಐಐಟಿ ರೂರ್ಕಿ ಸಮಿತಿ ವರದಿಯನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯವು ಪಾರಂಪರಿಕ ಲ್ಯಾನ್ ಡೌನ್ ಕಟ್ಟಡವನ್ನು ಸಂರಕ್ಷಿಸಬೇಕು ಮತ್ತು ಅಗತ್ಯ ನವೀಕರಣದೊಂದಿಗೆ ಪುನರ್‌ಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.

Tags:
error: Content is protected !!