ಬೆಂಗಳೂರು: ‘ಯೋಜನೆ ಉಚಿತ, ಬೆಲೆ ಏರಿಕೆ ಖಚಿತ.’ ಅಗತ್ಯ ವಸ್ತುಗಳ ದರ ಏರಿಕೆ ಬಗ್ಗೆ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಪೀಠ ಹೀಗೆ ವ್ಯಂಗ್ಯವಾಡಿದೆ. ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಇದ್ದರೆ ಸಾಮಾನ್ಯ ಜನರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.
ಕೆಜಿಗೆ 650 ರೂಪಾಯಿ ಇದ್ದ ತುಪ್ಪದ ದರ 850 ರೂಪಾಯಿಗೆ ಏರಿರುವುದನ್ನು ಪೀಠ ಉಲ್ಲೇಖಿಸಿತು. ‘ಇಷ್ಟು ಬೆಲೆ ಏರಿದರೆ ದೀಪಾವಳಿಗೆ ತುಪ್ಪದ ಯಮದೀಪ ಹಚ್ಚುವುದಾದರೂ ಹೇಗೆ?’ ಎಂದೂ ಪ್ರಶ್ನಿಸಿತು. ಕೆಜಿಗೆ 103 ರೂಪಾಯಿ ತಲುಪಿದ ಅಕ್ಕಿ ದರ, ಹಾಲು ಮತ್ತು ಬಸ್ ಟಿಕೆಟ್ ದರ ಏರಿಕೆಯೂ ವಿಚಾರಣೆ ವೇಳೆ ಪ್ರಸ್ತಾಪವಾಯಿತು. ದೀಪಾವಳಿ ಬಳಿಕ ಸಕ್ಕರೆ ದರ ಕೆಜಿಗೆ 90 ರೂಪಾಯಿಗೆ ಏರಬಹುದೆಂಬ ಆತಂಕವನ್ನೂ ಪೀಠ ವ್ಯಕ್ತಪಡಿಸಿತು.
ಹಳೆಯ ದಾಸ್ತಾನಿನ ವಸ್ತುಗಳಿಗೂ ಹೊಸ ದರ ವಿಧಿಸುತ್ತಿರುವ ವಿಷಯವನ್ನು ಪೀಠ ಪ್ರಸ್ತಾಪಿಸಿತು. ಅನ್ನಭಾಗ್ಯ ಯೋಜನೆಯ ದಾಸ್ತಾನಿನಲ್ಲಿ 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದ ವಿಚಾರವೂ ಚರ್ಚೆಗೆ ಬಂತು.
ಮೈಸೂರು ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಮುಂದಿನ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ.




