ಮಡಿಕೇರಿ: ಮನೆಯ ವಾಷಿಂಗ್ ಮಷಿನ್ನೊಳಗೆ ಸುಮಾರು ೧೦ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಅಡಗಿದ್ದ ಘಟನೆ ಮಡಿಕೇರಿ ತಾಲೂಕಿನ ದೊಡ್ಡಪುಲಿಕೋಟು ಗ್ರಾಮದಲ್ಲಿ ನಡೆದಿದ್ದು, ಉರಗ ರಕ್ಷಣೆ ಮಾಡಲಾಗಿದೆ.
ಗ್ರಾಮದ ಸಚಿನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ವಾಷಿಂಗ್ ಮಷಿನ್ನೊಳಗೆ ಕಾಳಿಂಗ ಸರ್ಪ ಇರುವುದನ್ನು ಕಂಡು ಮನೆಯವರು ಆತಂಕಕ್ಕೊಳಗಾಗಿದ್ದರು.
ತಕ್ಷಣ ಉರಗ ರಕ್ಷಕ ಯದುಕುಮಾರ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಯದುಕುಮಾರ್ ಅವರು ಕಾರ್ಯಾಚರಣೆ ನಡೆಸಿ ವಾಷಿಂಗ್ ಮಷಿನ್ನೊಳಗೆ ಅಡಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಮನೆಯ ವಾಷಿಂಗ್ ಮಷಿನ್ನಲ್ಲೇ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟ ಬಳಿಕ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.




