Mysore
26
overcast clouds

Social Media

ಸೋಮವಾರ, 11 ಮೇ 2026
Light
Dark

ತಮಿಳುನಾಡು ಸಿಎಂ ವಿಜಯ್ ಮುಂದೆ ಸವಾಲುಗಳ ಬೆಟ್ಟ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮಿತ್ರ ಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೇ ೪ರಂದು ಫಲಿತಾಂಶ ಪ್ರಕಟವಾದ ಬಳಿಕ ನಡೆದ ರಾಜಕೀಯ ಮೇಲಾಟಗಳ ನಂತರ ವಿಜಯ್ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ೨೩೪ ಸದಸ್ಯ ಬಲದ ಪೈಕಿ ತಮಿಳಗ ವೆಟ್ಟಿ ಕಳಗಂ (ಟಿವಿಕೆ) ೧೦೮ ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರ್ಕಾರ ರಚಿಸಲು ಅಗತ್ಯವಾದ ಸರಳ ಬಹುಮತ (೧೧೮) ಇರಲಿಲ್ಲ. ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜಯ್ ಆಡಳಿತ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದರು. ವಿಜಯ್ ಅವರು ತಿರುಚ್ಚಿ ಪೂರ್ವ ಹಾಗೂ ಪೆರಂಬೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದು, ಈಗ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಟಿವಿಕೆ ಬಲ ೧೦೭ ಆಗಿದೆ. ತಮಿಳುನಾಡು ಉಸ್ತುವಾರಿ ರಾಜ್ಯಪಾಲ ಆರ್.ವಿ.ಅರ್ಲೇಕರ್ ಅವರು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ತಮ್ಮನ್ನು ಭೇಟಿ ಮಾಡಿದ ವಿಜಯ್ ಅವರಿಗೆ ಮೂರು ಬಾರಿ ಸರ್ಕಾರ ರಚನೆಗೆ ಸಮ್ಮತಿ ನೀಡಿರಲಿಲ್ಲ. ವಿಜಯ್ ಅವರಿಗೆ ಡಿಎಂಕೆ ಮಿತ್ರ ಪಕ್ಷಗಳಾದ ಕಾಂಗ್ರೆಸ್‌ನ ಐವರು, ಸಿಪಿಐ, ಸಿಪಿಎಂ, ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನ ತಲಾ ಇಬ್ಬರು ಶಾಸಕರು ಬೆಂಬಲ ಘೋಷಿಸಿದರು. ಇದರಿಂದ ವಿಜಯ್‌ಗೆ ೧೨೦ ಸ್ಥಾನಗಳ ಬೆಂಬಲ ದೊರೆತಂತಾಯಿತು. ಅಂತಿಮವಾಗಿ ರಾಜ್ಯಪಾಲರು ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿದರು.

ಮತದಾರರು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿದ್ದರಿಂದ ವಿಜಯ್‌ಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವೇನೋ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಕೇವಲ ೧೨ ಸ್ಥಾನಗಳಿಗಾಗಿ ವಿಜಯ್ ಅನುಭವಿಸಿದ ಧಾವಂತ ಅಷ್ಟಿಷ್ಟಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಅಥವಾ ವಿಜಯ್ ಅವರನ್ನು ಬಹುತೇಕ ರಾಜಕೀಯ ವಿಶ್ಲೇಷಕರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೆಚ್ಚೆಂದರೆ ೧೦ ಸ್ಥಾನಗಳಲ್ಲಿ ಟಿವಿಕೆ ಗೆಲ್ಲಬಹುದು. ಅದು ಪರೋಕ್ಷವಾಗಿ ಡಿಎಂಕೆಗೆ ಮುಳುವಾಗಬಹುದು. ಅದರ ಹೊರತಾಗಿ ವಿಜಯ್ ಅಧಿಕಾರಕ್ಕೆ ಏರುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಧಮ್ ಕಟ್ಟಿ ‘ಸೀಟಿ’ ಊದಿದ ವಿಜಯ್, ಎದುರಾಳಿ ಪಕ್ಷಗಳನ್ನು ಧೂಳೀಪಟ ಮಾಡಿದ್ದಲ್ಲದೆ, ನೇರವಾಗಿ ಸಿಎಂ ಪಟ್ಟದ ಸನಿಹಕ್ಕೇ ಬಂದು ನಿಂತುಬಿಟ್ಟರು. ಬಹುಶಃ ಚಿತ್ರನಟ ಎಂಬುದು ಯುವಜನರ ಮತಗಳು ಹಾಗೂ ಅವರು ಚುನಾವಣೆ ವೇಳೆ ನೀಡಿದ್ದ ಭರವಸೆಗಳು ಮಹಿಳೆಯರ ಮತಗಳನ್ನು ಟಿವಿಕೆಯತ್ತ ಸೆಳೆದವು.

ಒಂದು ಹಂತದಲ್ಲಿ ಡಿಎಂಕೆ, ಎಐಡಿಎಂಕೆ ರಾಜಕೀಯ ವೈಷಮ್ಯ ಮರೆತು ಅಧಿಕಾರ ಹಂಚಿಕೊಳ್ಳಲಿವೆ ಎಂಬ ಸುದ್ದಿಗಳೂ ಹರಿದಾಡಿದವು. ಆದರೆ, ಅದು ಸುಳ್ಳಾಯಿತು. ಅಲ್ಲದೆ, ಡಿಎಂಕೆ, ವಿಜಯ್‌ಗೆ ಬೆಂಬಲ ಸೂಚಿಸುವ ನಿರ್ಧಾರವನ್ನು ತನ್ನ ಮಿತ್ರಪಕ್ಷಗಳ ವಿವೇಚನೆಗೆ ಬಿಟ್ಟಿದ್ದು, ಆ ಪಕ್ಷಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ಗೌರವ ಇರುವುದಕ್ಕೆ ಸಾಕ್ಷಿ. ವಿಜಯ್ ಅವರು ಅಽಕಾರಕ್ಕೇರುತ್ತಿದ್ದಂತೆ ಬೃಹತ್ ಸವಾಲುಗಳೂ ಅವರ ಹೆಗಲೇರಿವೆ. ವಿಜಯ್ ಅವರು ದಕ್ಕಿಸಿಕೊಂಡಿರುವ ಜಯದ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಅವರು ಘೋಷಿಸಿರುವ ಉಚಿತ ಉಡುಗೊರೆಗಳ ದೊಡ್ಡ ಕೊಡುಗೆಯೇ ಇದೆ ಎನ್ನಬಹುದು. ಪ್ರತಿಯೊಂದು ಬಡ ಕುಟುಂಬದ ಮುಖ್ಯಸ್ಥ ಮಹಿಳೆಗೂ ಮಾಸಿಕ ೨,೫೦೦ ರೂ. , ರಾಜ್ಯದ ಎಲ್ಲ ಜನರಿಗೂ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಸಾರಿಗೆ ಪ್ರಯಾಣ, ಮದುವಣಿಗಿತ್ತಿಗೆ ೮ ಗ್ರಾಂ ಚಿನ್ನದ ಮಾಂಗಲ್ಯ ಇತ್ಯಾದಿ ಭರವಸೆಗಳು ವಿಜಯ್ ಅವರನ್ನು ಸರ್ಕಾರ ರಚಿಸುವ ಹಾದಿಗೆ ಕೈಹಿಡಿದು ನಡೆಸಿವೆ. ವಿಜಯ್ ಅವರು ಘೋಷಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಣಕಾಸು ಹೇಗೆ ಹೊಂದಿಸುತ್ತಾರೆ ಎಂಬುದರತ್ತ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ನಡೆದಿದೆ. ವಿಜಯ್‌ಗೆ ನಾಲ್ಕೈದು ಪಕ್ಷಗಳು ಬೆಂಬಲ ನೀಡಿವೆ. ಹಾಗಾಗಿ ವಿಜಯ್ ಅವರ ನೇತೃತ್ವದ ಸರ್ಕಾರ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಮಿತ್ರ ಪಕ್ಷಗಳ ಅನುಮೋದನೆಯನ್ನು ಪಡೆಯುವುದು ಅನಿವಾರ್ಯ. ಇಂತಹ ಸವಾಲುಗಳನ್ನು ವಿಜಯ್ ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದರತ್ತ ಜನರ ಕುತೂಹಲದ ನೋಟ ನೆಟ್ಟಿದೆ.

 

Tags:
error: Content is protected !!