Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನಾಯಕತ್ವದ ಸವಾಲುಗಳ ನಡುವೆ ಪ್ರಜಾಪ್ರಭುತ್ವ

Democracy Amidst Leadership Challenges

ನಾ ದಿವಾಕರ

ಪ್ರಜಾಪ್ರಭುತ್ವವನ್ನು ತನ್ನ ನರನಾಡಿಗಳಲ್ಲೂ ಪ್ರವಹಿಸುವಂತೆ ಎಚ್ಚರ ವಹಿಸುವ ಯಾವುದೇ ಚಲನಶೀಲ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕ್ರಿಯಾಶೀಲವಾಗಿಯೂ, ಉತ್ಸಾಹಭರಿತವಾಗಿಯೂ ಹಾಗೂ ದೀರ್ಘಕಾಲೀನ ಗುರಿಯ ಜೀವಂತಿಕೆಯಿಂದ ಇದ್ದಾಗ ಮಾತ್ರ ಅಂತಹ ಸಮಾಜ ವರ್ತಮಾನದಲ್ಲಿ ಬಾಳುತ್ತಾ ಭವಿಷ್ಯವನ್ನು ನಿರ್ಣಾಯಕವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. 22 ವರ್ಷಗಳ ಸ್ವತಂತ್ರ ಆಳ್ವಿಕೆ, 25 ವರ್ಷಗಳ ಗಣತಂತ್ರದ ಅನುಭವದೊಂದಿಗೆ ಭಾರತ ಇಂತಹ ಒಂದು Vibrant ಸಮಾಜವನ್ನು ಸಹಜವಾಗಿ ಸೃಷ್ಟಿಸಬೇಕಿತ್ತು. ಇಂತಹ ಸಮಾಜ ಸೃಷ್ಟಿಗೆ ಪೂರಕವಾದ ನೂರಾರು ಹೋರಾಟಗಳು ಕಳೆದ ಐದಾರು ದಶಕಗಳಲ್ಲೇ ನಮ್ಮ ನಡುವೆ ನಡೆದಿದ್ದು ಇಂದಿಗೂ ಸಕ್ರಿಯವಾಗಿವೆ.

ಜನಪರ ಚಳವಳಿಗಳು ವಿಭಿನ್ನ ಸೈದ್ಧಾಂತಿಕ ನೆಲೆಗಳಲ್ಲಿ ಸಮಾಜದ ನಡುವೆ ಬೆಳೆಸುತ್ತಿರುವ ಚಲನಶೀಲತೆಯನ್ನು ಭಂಗಗೊಳಿಸಲು ಅಧಿಕಾರ ರಾಜಕಾರಣದ ವಾರಸುದಾರರು ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಇಲ್ಲಿ ಆಳ್ವಿಕೆಯಲ್ಲಿರುವ ಪಕ್ಷಗಳು ತಮ್ಮ ಆಡಳಿತ ನೀತಿಗಳನ್ನು ವಿರೋಧಿಸುವ ಜನಸಮೂಹಗಳನ್ನು ಅಥವಾ ಸಂಘಟನೆಗಳನ್ನೇ ಗುರಿ ಮಾಡಿಕೊಂಡು, ಅಲ್ಲಿನ ನಾಯಕತ್ವಗಳನ್ನು ಮತ್ತು ತಾತ್ವಿಕ ಭೂಮಿಕೆಗಳನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿರುತ್ತವೆ. ಈ ಸವಾಲುಗಳ ನಡುವೆಯೇ ಸ್ವತಂತ್ರ ಭಾರತ ನೂರಾರು ಜನಪರ ಚಳವಳಿಗಳಿಗೆ ಸಾಕ್ಷಿಯಾಗಿದ್ದು, ರಾಜಕೀಯ ಸಿದ್ಧಾಂತದ, ತತ್ವ ಸಿದ್ಧಾಂತಗಳ ಚೌಕಟ್ಟುಗಳನ್ನು ದಾಟಿದ ಹಾಗೂ ತಳಸಮಾಜದ ಹಕ್ಕೊತ್ತಾಯಗಳಿಗಾಗಿ ಯಾವುದೇ ಅಸ್ಮಿತೆಗಳಿಗೆ ಒಳಗಾಗದ ಹೋರಾಟಗಳನ್ನು ನಾವು ಕಂಡಿದ್ದೇವೆ.

ಆದರೆ ತತ್ವ, ಸಿದ್ಧಾಂತ ಹಾಗೂ ರಾಜಕೀಯ ಆಲೋಚನಾ ವಿಧಾನಗಳು ಈ ಹೋರಾಟಗಳ ನಡುವೆ ಕೆಡವಲಾಗದ ಗಟ್ಟಿ ಗೋಡೆಗಳನ್ನು ನಿರ್ಮಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮೇಲೆ ಉಲ್ಲೇಖಿಸಿರುವ ವಿವಿಧ ಹೋರಾಟಗಳ ಒಳಹೊಕ್ಕು ನೋಡಿದಾಗ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಆವರಣದಲ್ಲೂ ತಾತ್ವಿಕ ಭಿನ್ನತೆ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ಸಾಂಕ ಅಸ್ಮಿತೆಯ ಒತ್ತಾಸೆಗಳು, ರಾಜಕೀಯ ನಿಲುವು, ಸಾಂಸ್ಕೃತಿಕ ಅಭಿವ್ಯಕ್ತಿಯ ವೈವಿಧ್ಯತೆಗಳು ಇವೆಲ್ಲವೂ ಕೂಡ ಕಾಣುತ್ತವೆ. ಆದರೆ ಈ  ಹೋರಾಟಗಳ ಗುರಿ ಮತ್ತು ಧ್ಯೇಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ, ತಳಸಮಾಜದ ಉನ್ನತಿ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಔದಾತ್ಯಗಳೇ ಆಗಿರುವಾಗ, ಸಂದರ್ಭಕ್ಕೆ ಅನುಗುಣವಾಗಿ, ಈ ತಡೆಗೋಡೆಗಳನ್ನು ದಾಟಿ ಕೈಜೋಡಿಸುವ ಅವಶ್ಯಕತೆಯನ್ನು ಮನಗಾಣಬೇಕಿದೆ.

ವರ್ತಮಾನದ ಸಂಕೀರ್ಣ ಸವಾಲುಗಳು: ವರ್ತಮಾನ ಭಾರತವು ಎದುರಾಗುತ್ತಿರುವ ಸಂಕೀರ್ಣ ಸಮಸ್ಯೆಗಳು ಮತ್ತು ದಿನದಿಂದ ದಿನಕ್ಕೆ ಹಿಗ್ಗುತ್ತಲೇ ಇರುವ ಸಾಮಾಜಿಕ ಒಳಬಿರುಕುಗಳು (ಊZಠಿ ಜ್ಞಿಛಿo) ಹಾಗೂ ಸಾಂಸ್ಕೃತಿಕ ಪಲ್ಲಟಗಳು ಜನಪರ ಹೋರಾಟಗಳ ಮುಂದೆ ಬಹುದೊಡ್ಡ ಸವಾಲುಗಳನ್ನು ತಂದು ನಿಲ್ಲಿಸಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಕ್ರಮೇಣವಾಗಿ ಶಿಥಿಲಗೊಳಿಸಿ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದ ನೆಲೆಯಲ್ಲಿ ವೈವಿಧ್ಯಮಯ ಭಾರತವನ್ನು ಏಕರೂಪತೆಯೆಡೆಗೆ ಕೊಂಡೊಯ್ಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಈ ಪ್ರಯತ್ನಗಳಿಗೆ ಪ್ರತಿಯಾಗಿ ರೂಪುಗೊಳ್ಳಬೇಕಾದ ಸೆಕ್ಯುಲರ್ ಪ್ರತಿರೋಧಗಳು ಮಾತ್ರ ಧರ್ಮ, ಜಾತಿ ಮತ್ತು ಭಾಷಿಕ ನೆಲೆಗಳಲ್ಲಿ ವಿಘಟಿತವಾಗುತ್ತಾ ಕೆಲವೊಮ್ಮೆ ಆಳುವ ವರ್ಗಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಹಂತಕ್ಕೂ ತಲುಪಿರುವುದನ್ನು ನೋಡುತ್ತಿದ್ದೇವೆ. ಭಾರತ ಕಂಡ ಬಹುತೇಕ ಹೋರಾಟಗಳಲ್ಲಿ ಇಂತಹ ನಾಯಕತ್ವವು ರೂಪುಗೊಂಡು ಯಶಸ್ವಿಯಾಗಿದ್ದರೂ, ಎಡಪಂಥೀಯ ಮತ್ತು ಮಹಿಳಾ ಆಂದೋಲನಗಳನ್ನು ಹೊರತುಪಡಿಸಿದರೆ, ಇತರ ಸಂದರ್ಭಗಳಲ್ಲಿ ನಾಯಕತ್ವಗಳು ಅಧಿಕಾರ ರಾಜಕಾರಣದಲ್ಲಿ ಲೀನವಾಗುವುದರಲ್ಲೋ ಅಥವಾ ನಿಕಟವಾಗುವ ಮೂಲಕ ಪ್ರಸ್ತುತತೆ ಕಳೆದುಕೊಳ್ಳುವುದರಲ್ಲೋ ಪರ್ಯವಸಾನ ಹೊಂದುತ್ತವೆ.

ಧ್ಯೇಯ, ಗುರಿ ಮತ್ತು ನಾಯಕತ್ವದ ಜವಾಬ್ದಾರಿ: ಯಾವುದೇ ಹೋರಾಟವಾದರೂ ಈ ಅಪಾಯವನ್ನು ಎದುರಿಸಿ, ತನ್ನ ಮೂಲ ಸ್ಥಾಯಿಯಿಂದ ವಿಮುಖವಾಗದೆ, ತಾನಿಟ್ಟ ಗುರಿ ಸಾಧಿಸಲು ಅಪೇಕ್ಷಿಸುವ ಧ್ಯೇಯ ಮತ್ತು ಜನರ ಹಿತಾಸಕ್ತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಬೇಕು. ಇಲ್ಲಿ ನಾಯಕತ್ವ ಎನ್ನುವುದು ನಿರ್ಣಾಯಕವಾಗುತ್ತದೆ. ಹಾಗಾಗಿ ನಾಯಕತ್ವ ಎನ್ನುವುದು ಸರ್ವವ್ಯಾಪಿ ಲಕ್ಷಣ ಪಡೆದುಕೊಂಡಿದ್ದರೂ ಸದಾ ಕಾರ್ಯಕರ್ತರ ಕಣ್ಗಾವಲಿಗೆ ಒಳಗಾಗಿರುವುದರಿಂದ, ಉತ್ತರದಾಯಿತ್ವ ಇರುವ ಜವಾಬ್ದಾರಿಯುತ ಕಾರ್ಯನಿರ್ವಹಣೆಯ ಒಂದು ಸ್ಥಾನವಾಗಿ ರೂಪಾಂತರಗೊಂಡಿದೆ. ನಾಯಕತ್ವಗಳು ವಿಫಲವಾದ ಕಡೆಯೆಲ್ಲಾ ಸಾಂಕ ವಿಘಟನೆ, ವಿಭಜನೆ ಮತ್ತು ಪ್ರತ್ಯೇಕ ಬಣ ಸ್ಥಾಪನೆ ಆಗಿರುವುದಕ್ಕೆ ದಲಿತ, ಎಡಪಕ್ಷಗಳ, ಪ್ರಗತಿಪರ ಸಂಘಟನೆಗಳ ಚರಿತ್ರೆಯೇ ಸಾಕ್ಷಿ.

ಈಗ ಈ ವೈಫಲ್ಯ ಪರಾಮರ್ಶೆಗೊಳಗಾಗುವ ಅಥವಾ ಪರಸ್ಪರ ಚರ್ಚೆ ನಡೆಸುವ ಮಾರ್ಗಗಳಿಗೆ ಮುಕ್ತವಾದ ಅವಕಾಶಗಳು ಲಭ್ಯವಾಗಿವೆ. ಹಾಗಾಗಿ ನಾಯಕತ್ವದ ಸ್ಥಾನದಲ್ಲಿರುವವರು ತಮ್ಮ ಸಾಂಕ ಜವಾಬ್ದಾರಿ, ವೈಯಕ್ತಿಕ ನೈತಿಕತೆ, ವ್ಯಕ್ತಿಗತ ಉತ್ತರದಾಯಿತ್ವ ಹಾಗೂ ತತ್ವ ಬದ್ಧತೆಯನ್ನು ಗಂಭೀರವಾಗಿ ಗಮನಿಸುತ್ತಲೇ ಮುನ್ನಡೆಯಬೇಕಾಗುತ್ತದೆ. ಯಾವುದೇ ಹೋರಾಟಗಳ ಮುಂದಾಳತ್ವ ವಹಿಸಿರುವವರು ‘ನಾಯಕತ್ವದ ಆತ್ಮರತಿ’ಯಿಂದ (Self aggrandizement of leadership) ಹೊರಬಂದು, ಮೇಲರಿಮೆಯ ಅಹಮಿಕೆಗಳನ್ನು ದೂರ ಇರಿಸಿ, ಎಲ್ಲರೊಳಗೊಂದಾಗುವ- ಎಲ್ಲರನ್ನು ಒಳಗೊಳ್ಳುವ (One among all & All inclusive) ಗುಣಗಳನ್ನು ಹೊಂದಿರುವುದು ಅತ್ಯವಶ್ಯ, ಕಾಲದ ಅನಿವಾರ್ಯತೆ.

ಇದನ್ನೂ ಓದಿ :

ಪಶ್ಚಿಮ ಘಟ್ಟ ಧಾರಣಾ ಸಾಮರ್ಥ್ಯ 6 ತಿಂಗಳಲ್ಲಿ ವರದಿ ಸಲ್ಲಿಸಲು ಸಮಿತಿಗೆ ಸೂಚನೆ

ಸ್ವಯಂ ಹೇರಿಕೆಯ ಸಂಹಿತೆಗಳ ಅವಶ್ಯಕತೆ: 

ಜನಪರ ಹೋರಾಟಗಳ ನಿಟ್ಟಿನಲ್ಲಿ ನಾಯಕತ್ವಗಳು ಕೆಲವು ಸ್ಪಪ್ರೇರಿತ ಸಂಹಿತೆಗಳನ್ನು ಹೇರಿಕೊಳ್ಳುವುದು ವರ್ತಮಾನದ ತುರ್ತು

ಹೋರಾಟ/ಚಳವಳಿಗಳು ವ್ಯಕ್ತಿಗತ ಸಾಮಾಜಿಕ ಜೀವನದ ಒಂದು ಭಾಗವಾಗಿರಬೇಕು. ಬದುಕು ನಿರ್ವಹಣೆಯ ಮಾರ್ಗಗಳಾಗಕೂಡದು

ಸಾಂಘಿಕ ತತ್ವ-ಸಿದ್ಧಾಂತಗಳಿಂದಾಚೆಗಿನ ಆಲೋಚನಾ ವಿಧಾನಗಳೊಡನೆ ಅನುಸಂಧಾನ ನಡೆಸುವ ವ್ಯವಧಾನ, ಕ್ಷಮತೆ ಮತ್ತು ಔದಾರ್ಯ ಇರಬೇಕು. ಆದರೆ ಅವುಗಳಿಂದ ಆಕರ್ಷಿತರಾಗಿ ಸೀಮೋಲ್ಲಂಘನೆ ಮಾಡುವ ತವಕ/ಹತಾಶೆ/ಆಕಾಂಕ್ಷೆಗಳು ಇರಕೂಡದು

ವ್ಯಕ್ತಿಗತ ಜೀವನದ/ವೈಯಕ್ತಿಕ ಬದುಕಿನ ಪ್ರಸಂಗಗಳು (ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಸ್ವಗೃಹದ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬೇಕು. ಸಾರ್ವಜನಿಕ ಆಚರಣೆಗಳಾಗಿ ವಿಜೃಂಭಿಸಕೂಡದು

ಸಂಘಟನೆಗಳ ಸದಸ್ಯರನ್ನು ಅಥವಾ ಅವರಲ್ಲಿ ಆಯ್ದ ಕೆಲವರನ್ನು ಹಿಂಬಾಲಕರನ್ನಾಗಿ ಮಾಡಿಕೊಳ್ಳುವ ಪ್ರವೃತ್ತಿಯಿಂದ ದೂರ ಇರಬೇಕು ಎಲ್ಲರನ್ನೂ ಸಮಾನ ಸಹವರ್ತಿಗಳಾಗಿ ನೋಡಬೇಕು

ಎಲ್ಲರನ್ನೊಳಗೊಳ್ಳುವ ರಾಜಕೀಯದಲ್ಲಿ ‘ಇಲ್ಲಿ ಯಾರೂ ಮುಖ್ಯರಲ್ಲ-ಯಾರೂ ಅಮುಖ್ಯರಲ್ಲ’ ಎಂಬ ಕುವೆಂಪು ವಾಣಿ ಧ್ಯೇಯವಾಕ್ಯವಾಗಬೇಕು

ವೈಯಕ್ತಿಕ ಆಚರಣೆಗಳಿಗೆ (ಹುಟ್ಟುಹಬ್ಬ- ವಿವಾಹ ವಾರ್ಷಿಕೋತ್ಸವ ಇತ್ಯಾದಿ) ಸುದ್ದಿಪತ್ರಿಕೆಗಳನ್ನು , ಸಾಮಾಜಿಕ ಮಾಧ್ಯಮಗಳನ್ನು, ಯುಟ್ಯೂಬ್ ಇತ್ಯಾದಿಗಳನ್ನು ವೇದಿಕೆಯಾಗಿ ಬಳಸಿಕೊಳ್ಳಕೂಡದು.

(ವಿಶೇಷವಾಗಿ ಪೂರ್ಣಪುಟದ ಜಾಹೀರಾತು, ಸುತ್ತಲೂ ರಂಗೋಲಿಯ ಚುಕ್ಕೆಗಳಂತಿರುವ ಹಿಂಬಾಲಕರ ಭಾವಚಿತ್ರಗಳು)  ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಊಳಿಗಮಾನ್ಯ ಮಾದರಿಯ ಕ್ವಿಂಟಾಲ್ ತೂಕದ ಹಾರ, ತುರಾಯಿ, ಶಾಲು, ರಾಜಪೇಟಗಳನ್ನು ಮತ್ತು ಮೆರವಣಿಗೆಗಳನ್ನು ನಿರಾಕರಿಸಬೇಕು

ಮತೀಯವಾದ-ಮತಾಂಧತೆ-ಕೋಮುವಾದ ಇವುಗಳ ಮೂಲ ಅಡಿಪಾಯವಾದ ಊಳಿಗಮಾನ್ಯ ತತ್ವ- ಪಿತೃಪ್ರಧಾನತೆಯ ಮನಸ್ಥಿತಿಯಿಂದ ಸಂಪೂರ್ಣ ಮುಕ್ತವಾಗಬೇಕು. ಆಗ ಸಾಂಕ  ಯಜಮಾನಿಕೆ, ಪ್ರತ್ಯೇಕತೆ, ಹಠಮಾರಿ ಧೋರಣೆ, ನಾನತ್ವ ಮತ್ತು ಮೇಲರಿಮೆಯ ಅಹಮಿಕೆಗಳು ತಂತಾನೇ ಇಲ್ಲವಾಗುತ್ತವೆ

ವರ್ತಮಾನದ ಭಾರತ ಎದುರಿಸುತ್ತಿರುವ ರಾಜಕೀಯ ಬಹುಸಂಖ್ಯಾವಾದ, ಸಾಂಸ್ಕೃತಿಕ ಏಕರೂಪತೆಯ ಹೇರಿಕೆಯ ನಡುವೆ ತಳಸಮಾಜದಿಂದ ಮೇಲ್ಪದವರೆಗೂ ಶೋಷಣೆಗೊಳಗಾದ ಜನತೆಯ ತಲ್ಲಣಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ವ್ಯಕ್ತಿಗತವಾಗಿ, ವೈಯಕ್ತಿಕ ನೆಲೆಯಲ್ಲಿ ಕಾಪಾಡಿಕೊಂಡು, ಬಿಂಬಿಸುವುದು ನಾಯಕತ್ವದ ಮೂಲ ಲಕ್ಷಣ ಎಂದೇ ಪರಿಗಣಿಸಬೇಕು

ಜನಪರ ಚಳವಳಿಗಳು ವಿಭಿನ್ನ ಸೈದ್ಧಾಂತಿಕ ನೆಲೆಗಳಲ್ಲಿ ಸಮಾಜದ ನಡುವೆ ಬೆಳೆಸುತ್ತಿರುವ ಚಲನಶೀಲತೆಯನ್ನು ಭಂಗಗೊಳಿಸಲು ಅಧಿಕಾರ ರಾಜಕಾರಣದ ವಾರಸುದಾರರು  ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇದ್ದಾರೆ.

Tags:
error: Content is protected !!